
Tuesday, December 29, 2009
Thursday, April 9, 2009
ರಾಜಕೀಯ (ತಂತ್ರ-ಕುತಂತ್ರ)
ನುಡಿವುದೊಂದು ನಡೆವುದೊಂದು
ನಡುವಿನಲ್ಲಿ ನೆಡುವುದೊಂದು
ಹಡೆವುದೊಂದು ಒಡೆವುದೊಂದು
ಮುಗಿದ ಮೇಲೆ ತರುವುದೊಂದು
ಆದಿಯೊಂದು ಅಂತ್ಯವೊಂದು
ಆಸೆಯಿಟ್ಟು ಮುಡಿಸಿದೊಂದು
ಮೂರ್ಖಜನರು ನಂಬಲೆಂದು
ಹಬ್ಬವಿಲ್ಲ, ಬರೀ ಯುದ್ಧವಿಂದು
ಇರುವ ವೇಳೆ ಇಲ್ಲ ಒಂದೂ
ಸತ್ತ ಮೇಲೆ ಕೊಡುವುದೊಂದು
ಹೆಸರ ಕಲ್ಲ ಕೆತ್ತಲೆಂದು
ಪೂವ ಹಾಕಿ ಮುಗಿಸಿದಂದು
ಯಾನವೊಂದು ತಾಣವೊಂದು
ಕುಡಿತದಲ್ಲೇ ಮಗ್ನರೆಂದು
ಕಾಲನೆಳೆದು ನಗುವುದೊಂದು
ಇದೇ ರಾಜಕೀಯ ಕುತಂತ್ರವಿಂದು
Wednesday, April 8, 2009
ಕೊಲ್ಲದಿರಿ ನನ್ನನ್ನು - (ಮರಗಿಡಗಳು ಮತ್ತು ಆಮ್ಲಜನಕ)
ಕೊಡುವ ದಾತನೆ ಮರೆತಿರಾ?
ಕೊಚ್ಚಿ ಕೆಡುಹುತ ಪಸಿರು ಮರೆತರೆ
ಮುಂದೆ ದಿನಗಳ ಬಲ್ಲಿರಾ?
ನನ್ನ ಉಸಿರೊಳಗುಸಿರ ಜೀವ
ವನ್ಯ ಮೃಗಗಳ ಕಂಡಿರಾ?
ಗೆಳೆಯ ವರುಣನ ಕೂಗು ನಾನು
ಬರಡು ಭೂಮಿಯ ತಡೆಯಿರಾ?
ಇಳೆಯ ರಾಜನ ಸೊಬಗ ಅಂದ
ಕಂಪು ಪರಿಮಳ ತರಿಸಿರಾ?
ಹಕ್ಕಿ ಗೂಡೊಳು ಪುಟ್ಟ ಜೀವ
ನನ್ನ ಬೆಲೆಯನು ತಿಳಿಯಿರಾ?
ಎದೆಯ ಬಡಿತದ ಗುಟ್ಟು ನಾನು
ಇರದೆ ನಾನು ಬದುಕಿರಾ?
ನಾನು ಉಳಿದರಳಿಯದಿರುವಿರಿ
ಜಗದ ಸತ್ಯಕೆ ಮಣಿಯಿರಾ?
Monday, March 23, 2009
ಒಡೆದ ಮನಸು
ಬಿಸಿಲಿನೊಳು ಚಲಿಸುತ್ತ ದನಕರುಗಳ ಬಳಗದಲಿ
ಕಲ್ಲಾಗಿ ಕಲ್ಲಿನೊಳು, ಮುಳ್ಳಾಗಿ ಮುಳ್ಳಿನೊಳು
ಕಟ್ಟಿತ್ತು ಹೆಪ್ಪುಂಡು ಪಾದಗಳು ಬಲವಾಗಿ
ಹಸಿದ ಹೊಟ್ಟೆಗೆ ಬೇಕು ಮೇವುಂಡ ಹಾಲಂತೆ
ಎರಡಾಣೆಯ ಗಳಿಕೆಯೊಳು ಒಪ್ಪತ್ತಿನ ಆಹಾರ
ನಗ್ನತೆಯ ಸತ್ಯಕ್ಕೆ ಬೆರಗಾದ ಬದುಕಂತೆ
ಮುಗ್ಧತೆಯು ಸಾಗುತಿದೆ ಆ ಬಡಕಲು ಶಾರೀರ
ಬರದಿರಲು ಮುಮ್ಮೋಡ ನೆನಸಿದಾ ಸಮಯದೊಳು
ಇಂಗುತ್ತ ಕ೦ಗಳಲಿ ಮುಚ್ಚಿಟ್ಟ ಕನಸುಗಳು
ಬಿರುಸಿನಲಿ ಹಬ್ಬಗಳು ಹೊಸಿಲಲ್ಲಿ ನಿಂತಿರಲು
ಇನ್ನೆಲ್ಲಿ ಹೊಸ ಉಡುಪು? ಶುಚಿ ಮಾಡಿ ಹಾಕಿರಲು..
ಮುಖದಲ್ಲಿ ಸಿಂಧೂರ, ಮೂಗುತಿಯ ಗತಿಯಿಲ್ಲ
ಆಸೆಗಳ ಬುತ್ತಿಯಲಿ ನಿಟ್ಟುಸಿರ ಸ್ಥಳವಿಲ್ಲ
ಆ ಒಡೆದ ತುಟಿಯೊಳಗೆ ಹುಡುಕಿದರೂ ಸಿಹಿಯಿಲ್ಲ
ಉಕ್ಕೇರದು ಮಂದಾರ, ನೆಲೆಯಿಲ್ಲ ಕಹಿಯೆಲ್ಲ..
Sunday, March 1, 2009
ಸಾವು
ಸಾವೇಕೆ ಬರ್ತಾಯಿಲ್ಲಾ ?
ಬಹುಷಃ ಕರ್ಮಗಳಿನ್ನೂ ಕಳೆದಿಲ್ಲ.
ಕರ್ಮಗಳೇಕೆ ಸಾವಿಗೆ ಆಧಾರವಾಗಿ ನಿಂತಿವೆ?
ಅದು ಬ್ರಹ್ಮನಿಗೂ ಸರಿಯಾಗಿ ತಿಳಿದಿಲ್ಲ.
ಪ್ರಯತ್ನಿಸಿದರೊಂದು ಬಾರಿ ಬಾಳೇಗೆ ಮೊನಚುವುದು?
ಕೊನೆವರೆಗೂ ಅದು ಹೇಡಿಯಾಗಿಯೇ ಉಳಿಯುವುದು.
ಹಾಗಾದರೆ ಹೇಡಿಗಳೇಕೆ ಬದುಕುವುದಿಲ್ಲ ?
ಜೀವನವನ್ನು ಸಾಗಿಸಲು ಬಾರದೇ ಸತ್ತಿದ್ದೆಲ್ಲ.
ನಿರಂತರ ಬದುಕಿನೊಳು ಮುಳ್ಳು-ಕಲ್ಲುಗಳೇ ಮೇಲೇಕೆ?
ನಂಬಿಕೆ ಛಲವೆರಡಿಟ್ಟು ದಾಟಿ ಬಾ ಎನಲಿಕ್ಕೆ.
ದಾಟಿ ಬರುವ ಸಮಯದಲಿ ಎಷ್ಟೋ ಜನ ಎಡವಿ ಬಿದ್ದದ್ದೇಕೆ?
ಅವರಿನ್ನೂ ಅದರಲ್ಲಿ ಪರಿಣಿತರಾಗದಿದ್ದುದ್ದಕ್ಕೆ.
ತಿಂದ ಮೇಲೆ ನೀರು ಕುಡಿಯಲೇಬೇಕು ಎನುವುದೇಕೆ?
ಇಳಿಯದಿದ್ದರೆ ಕೆಡಕಾಗುವುದು ಎನುವುದಕ್ಕೆ.
ಹಾಗಾದರೆ ಹಣ ತಿನ್ನುವವರು ಹೆಚ್ಚಿದರೇತಕೆ?
ಹಣವಿಲ್ಲದೆ ಹುಲ್ಲು ಕಡ್ಡಿಯೂ ಅಲ್ಲಾಡುವುದಿಲ್ಲವದಕ್ಕೆ.
ಕಷ್ಟ ಅನ್ನೋದು ಬರೀ ಮನುಷ್ಯರಿಗೇ ಇರೋದು ಅನುವುದೇತಕೆ?
ಪ್ರಾಣಿ-ಪಕ್ಷಿ-ಗಿಡ-ಮರಗಳಿಗೆ ಹೇಳಲಾಗುವುದಿಲ್ಲವಲ್ಲ ಅದಕ್ಕೆ.
ಆದರೂ ಸಾವು ಬರುತ್ತಾ ಇಲ್ಲ ಏತಕ್ಕೆ?
ತಾನಾಗಿಯೆ ಬರುವ ಸಾವಿಗೆ ಸೂಕ್ತ ಉತ್ತರ ಇದೆ ಅದಕ್ಕೆ.
ಕಲ್ಮಷ
ಅದು ನನ್ನೊಳು ಕೂತು ಲೀಲಾಜಾಲವಾಗಿ ಹಾಡಿತ್ತು
ಮೋಹದಿಂದೊಳು ಧೂಳ್ಗಟ್ಟಿತ್ತು, ಹೃದಯದಿ ಎಲ್ಲೋ
ಮೂಲೆಯಲಿ ಕೊಳೆತು ಸೂಸುತ ಜೀವನ ಸಾಗಿತ್ತು
ದಿನಗಳುರುಳುತಿರೆ ಮಾಸುತ್ತ ಮಾಗುತ್ತ ಮಂಕು ಕವಿದಿತ್ತು
ಬುದ್ಧಿವಿಕನಿಸದೆ ಅರೆಪರಿಯಾಗಿ ಮೆಲುಕು ಹಾಕಿತ್ತು
ಎನಿತು ಮಾಯೆಯೋ ಈ ಪ್ರೀತಿ ಮಸಣಕೆನಗೆ ದಾರಿ ತೋರಿತ್ತು
ದೇವನಿಟ್ಟ ಆಯಸ್ಸು ಲೆಕ್ಕಗಳೆಲ್ಲ ಒಂದು ಕಡೆ ತಪ್ಪಾಗಿತ್ತು
ಹಳ್ಳವಂತೆನಗೆ ಬಿದ್ದರೊಂದು ಬಾರಿ, ಹಣೆಯ ಬರಹದಿ ಸ್ಪಷ್ಟನೆ ಕೆತ್ತಿತ್ತು
ಯಾವ ಉಳಿಯು ಬೇಡವಿಲ್ಲಿ, ಬೆನ್ನ ಹಿಂದೆಯೇ ಬಂದೆನ್ನ ನೂಕಿತ್ತು
ಭಯದ ನೆರಳಲಿ ನಿಂತು ಬೆವೆತಂತೆ ಜೀವ ಸುಡುತ್ತಿತ್ತು
ಬದುಕಿನ ಮೂಲ ದಿಕ್ಕನರಿಯದೆ ಮನ ಪರಿತಪಿಸಿತ್ತು
ಎನ್ನ ಕನಸಿನರಮನೆಯಲೊಂದು ಹಾಡಿನ ಜೇಂಕಾರ ಕೂಗಿತ್ತು
ಹಾಡು ಹಾಡಾಗದೆಯೇ ಕಂಬಳಿಯೊದ್ದು ಹೆಪ್ಪುಗಟ್ಟಿ ಮಲಗಿತ್ತು
ಬದುಕು ಜ೦ಜಾಟದಲೂ ಮೋಹ ದಿಗ್ಭಂಧನಕ್ಕೊಳಗಾಗಿತ್ತು
ಹೊರದಾರಿ ಕಾಣದೆಯೆ ಅಂಧಯಷ್ಟಿಯನಿಡಿದು ಸಾಗಿತ್ತು
ವಿಧಿ ಬರೆದ ಆಟದೊಳು ನೋವಿನುಪಸ್ಥಿತಿಯೇ ಹೆಚ್ಚಿತ್ತು
ಬೆಳಕ ಕಾಣುವ ಮುನ್ನ ಕಾಲ ಚಿಗುರೊಡೆದು ಮೀರಿತ್ತು
ಭಾವನವನವೀನ
ನಿನ್ನಾ ಕರೆದು ಹೊಯ್ತಿನಮ್ಮಾ ಮುತ್ತಿನ ಮ್ಯಾಲೆ
ಸೂರೆ ಹೊಡೆದು ಹೊಯ್ತಿನ್ ಚಂದದ ಗುಟ್ಟಿನ ಲೀಲೆ ೨
ಊರಾಚೆಯಲ್ಲಿ ಒಂದು ಕಾಣದಾ ಲೋಕವಯ್ತೆ
ನಮಗಾಗಿ ಕಾಯುತಯ್ತೆ, ಹೊಸಮನೆಯು ಬೆಳಗುತಯ್ತೆ
ನಿನ್ನಂತರಂಗ ತಿಳಿಯೋ ಕ್ಷಣವಿಂದು ಬೆದಕುತಯ್ತೆ
ಹೊಸಬಾಳು ಸಾಗುತಯ್ತೆ, ಒಂಟಿಜೀವ ಬಿಡುವಂಗಯ್ತೆ
ನಿನ್ನಾ ಕರೆದು ಹೊಯ್ತಿನಮ್ಮಾ ಮುತ್ತಿನ ಮ್ಯಾಲೆ
ಸೂರೆ ಹೊಡೆದು ಹೊಯ್ತಿನ್ ಚಂದದ ಗುಟ್ಟಿನ ಲೀಲೆ ೨
ಹೆ:- ಒಳ ಆಸೆ ಮುಗಿವಾ ಕ್ಷಣದೀ ಹೊಸ ಆಸೆ ಉಕ್ಕುತಯ್ತೆ
ಈ ಮೀಸೆ ಮಾವನ್ ತೋಳು ಎಡೆಬಿಡದೆ ಅಪ್ಪುತಯ್ತೆ
ಅವನಿಡುವ ಹೆಜ್ಜೆಯಲ್ಲೇ ಈ ಬಾಳಿನ ದೀಪವಯ್ತೆ
ಏಳೇಳು ಜನುಮದಲ್ಲೂ ಸಂಗಾತಿ ನೀನಂದಯ್ತೆ
ನಿನ್ನಾ ಕರೆದು ಹೊಯ್ತಿನಯ್ಯಾ ಮುತ್ತಿನ ಮ್ಯಾಲೆ
ಸೂಟು ಬೂಟಿನ ಚೆಲುವಾ ನಾ ಬಲಿತಾ ಬಾಲೆ
ಗ:- ವನಜಾರಿ ಕಂಡು ನಮ್ಮ ಬೆರಗೆದ್ದು ಕುಣಿಯುತಯ್ತೆ
ಜೊತೆಗೊಂದು ಬೆಕಂದಯ್ತೆ, ಇಣುಕಿಣುಕಿ ನೋಡಕಯ್ತೆ
ಪಲ್ಲಂಗಕೆ ಪೂವ ತುಂಬಿ ತಂಗಾಳಿ ಬೀಸುತಯ್ತೆ
ಬಿಗುಮಾನ ಬಿಟ್ಟೋಗಯ್ತೆ, ಬಿಂಬಾಧರ ಸೆಳೆಯುತಯ್ತೆ
ನಿನ್ನಾ ಕರೆದು ಹೊಯ್ತಿನಮ್ಮಾ ಮುತ್ತಿನ ಮ್ಯಾಲೆ
ಸೂರೆ ಹೊಡೆದು ಹೊಯ್ತಿನ್ ಚಂದದ ಗುಟ್ಟಿನ ಲೀಲೆ ೨