Wednesday, May 18, 2011

ಒಡಲಾಸೆಯೆಲ್ಲ ಈಗ ಬಯಲಲ್ಲಿ ಇಟ್ಟ ಹಣತೆ

ಪ್ರೀತಿ ಹುಟ್ಟಿದ್ದಾದರೂ  ಹೇಗೆ?, ಈ ಪ್ರೀತಿ ಹುಟ್ಟುವುದಾದರೂ ಏತಕ್ಕೆ ? ಇದೊಂದು ವಿಸ್ಮಯವಲ್ಲವೇ?  
ಎಲ್ಲಿ ಒಲವಿದೆಯೋ ಅಲ್ಲಿ ಪ್ರೀತಿ ಮೂಡಲಿ, ಎಲ್ಲಿ ಮನಸ್ಸುಗಳು ಮಿಡಿಯುವುದೋ ಅಲ್ಲಿ ಪ್ರೀತಿ ಪಯಣ ಸಾಗಲಿ, ಎಲ್ಲಿ ಪ್ರೀತಿಗೆ ಅರ್ಥ ಸಿಗುವುದೋ ಅಲ್ಲಿ ಪ್ರೀತಿ ಪತಾಕೆ ವಿಜ್ರುಂಭಿಸಲಿ,   ಎಲ್ಲಿ ತಾರತಮ್ಯಗಳಿದೆಯೋ, ಎಲ್ಲಿ ನಕಾರಾತ್ಮಕ ಉತ್ತರದಿಂದ ಸಂಬಂಧಗಳು ತಿರುವು ಪಡೆಯುವುದೋ, ಅಲ್ಲಿ ಪ್ರೀತಿ ಏತಕ್ಕಾದರೂ ಮೂಡಬೇಕು? ಬಹುಷಃ ಗಂಡು ಹೆಣ್ಣನ್ನು ಸೃಷ್ಟಿಸಿದ ತ್ರಿಮೂರ್ತಿಗಳು ಕೊಂಚ ಹೆಣ್ಣಿನ ಸಲಹೆ ಪಡೆದು ಪ್ರೀತಿಯ ಬಗ್ಗೆ ಪಿ.ಎಚ್. ಡಿ ಮಾಡಿದ್ದರೆ ಜಗತ್ತಿನ ಮನುಕುಲವೆಲ್ಲ ಸುಧಾರಿಸುತ್ತಿತ್ತು.. ಆದರೂ ಬ್ರಹ್ಮ  ಸ್ವಲ್ಪ ಎಡವಟ್ಟು ಮಾಡಿಬಿಟ್ಟ.  


ಎಲ್ಲಿ ನೋಡಿದರಲ್ಲಿ ಪ್ರೀತಿಗಾಗಿ ವಿಷ ಕುಡಿದು ಸಾಯುತ್ತಿರುವ ಯುವಕ ಯುವತಿಯರು, ಎಲ್ಲಿ ನೋಡಿದರಲ್ಲಿ ಪ್ರೀತಿಗಾಗಿ ಹುಚ್ಚು ಹಿಡಿದು ತಮ್ಮ ಅಮೂಲ್ಯ ಬದುಕನ್ನು ಹಾಳುಮಾಡಿಕೊಳ್ಳುತ್ತಿರುವ ಪ್ರೇಮಿಗಳು, ಇನ್ನು ಕೆಲವು ಅಸಹಾಯಕ ಹುಚ್ಚು ಪ್ರೇಮಿಗಳು ಆಸಿಡ್, ಚೂರಿ, ಮಾನಭಂಗ ಹಾಗು ನಿಮಾನ್ಸ್ ದಾರಿ ಹುಡುಕಿಕೊಂಡು ಹೊರಟವರು. ಪ್ರಪಂಚದ ಜನಗನತಿಯ ಪ್ರಕಾರ ಶೇಖಡ ೨೦ %ರಷ್ಟು ಬಹಿರಂಗವಾಗಿ ಪ್ರೀತಿಯ ಹೆಸರಿನಲ್ಲಿ ಅತ್ಯಾಚಾರ, ಆತ್ಮನಿಂದನೆ ನಡೆಯುತ್ತಿದ್ದರೆ, ಇನ್ನುಳಿದ ೩೦%ರಷ್ಟು ಒಳರಂಗದಲ್ಲಿ ಹಾಳಾಗಿ ಕಣ್ಮರೆಯಾಗುತ್ತಿದೆ.  
ನನ್ನ ಪ್ರಕಾರ ಹೇಳುವುದಾದರೆ ಪ್ರೀತಿಯೇ ದೇವರು, ಎಲ್ಲಿ ನಿಷ್ಕಲ್ಮಶ ಪ್ರೀತಿಯಡಗಿದೆಯೋ ಅಲ್ಲಿ ಸ್ಪಟಿಕದಂತಹ ಜೀವನವಿದೆ. 

ಅದೊಂದು ದೊಡ್ಡ ಕಥೆ, ಮೊದಮೊದಲು ನನ್ನಾಕೆಗೆ ಪರಿಚಿತವಾದಾಗ ಆ ನಗುವೇನೂ, ಆ ನಿಯತ್ತಿನ ಸ್ನೇಹವೇನೂ, ಅಬ್ಬಬ್ಬಾ, ಹೇಳೋಕೆ ಪದಗಳೇ ಇಲ್ಲವೇನೋ.. ಒಂದು ಹೊತ್ತೂ ಬಿಡುವುಕೊಡದೆ ಮಾತನಾಡುವುದು, ಒಬ್ಬರಿಗೊಬ್ಬರು ಕಾಳಜಿವಹಿಸುವುದು.. ಹುಹ್, ಅವಳೆಲ್ಲೋ ನಾನೆಲ್ಲೋ, ಆದರೂ ಈ ಎಸ್.ಎಂ.ಎಸ್ ಮೂಲಕ ಸಂಬಂಧಗಳ ಸರಪಳಿಯನ್ನು ಕೊಂಚ ಬಿಗಿ ಪಡಿಸಿಕೊಂಡಿದ್ದೆವು. ಪ್ರಪಂಚದ ಏಕೈಕ ಅಪಾಯಕಾರಿ ಮಾನವನಾಶ ವೈರಸ್ ಎಂದರೆ ಅದು ಈ ಉಚಿತ ಎಸ್.ಎಂ.ಎಸ್ ಎಂದೇ ಹೇಳಬಹುದು. ಯಾರ ಪ್ರೀತಿ ಯಾರ ಮೇಲೆ ಅದು ಹೇಗೆ ಹುಟ್ಟಿತೋ ನನಗೆ ಗೊತ್ತಿಲ್ಲ, ಆದರೆ ನನ್ನ ಜೀವನದ ಪಯಣದಲ್ಲಿ ಸಿಕ್ಕ ಏಕೈಕ ಹುಡುಗಿ ಅವಳೇ, ನನ್ನ ಮುದ್ದು ಕಂದಮ್ಮ.. ನನ್ನ ಬಂಗಾರಿ.. ಪ್ರಶಾಂತವಾಗಿದ್ದ ನನ್ನೆದೆಯಲ್ಲಿ ಕುಳಿತು ಪ್ರೀತಿಯೆಂಬ ಹಸಿರನ್ನು ಬಿತ್ತಿ ಹೋದವಳು. ಅವಳು ಅಕ್ಕರೆಯಿಂದ ತೋರಿದ ಪ್ರೀತಿ, ನನ್ನ ಬಗ್ಗೆ ಅವಳಿಗಿದ್ದ ಕಾಳಜಿ, ಆಕೆಯ ನಿಷ್ಕಲ್ಮಶ ಮನಸ್ಸು, ಆಕೆ ತನ್ನ ಬದುಕಿನ ಒಲವನ್ನೆಲ್ಲಾ ನನ್ನೊಬ್ಬನಿಗೇ ಧಾರೆಯೆರೆದು ಬಿಟ್ಟಿದ್ದಳು ಅನ್ನಿಸಿತ್ತು. ಆಗಾಗ ನಮ್ಮಿಬ್ಬರೊಡನೆ ನಡೆಯುತ್ತಿದ್ದ ಧೀರ್ಘ ಸಮಾಲೋಚನೆಗಳ ನಡುವೆಯೂ ತಿಳಿಯಾದ ನಗುವಿಟ್ಟು ನನ್ನ ಮನಸ್ಸನ್ನು ಕಲಕಿದ್ದಳು. ನನ್ನ ಜೀವನದ ಮಟ್ಟಿಗೆ ಇವಳನ್ನು ಪ್ರೀತಿಯ ದೇವತೆಯೆಂದೇ ಕರೆಯಬೇಕೋ, ಅಥವಾ ಪ್ರೀತಿಗೆ ತಾಯಿಯೆಂದು ಕರೆಯಬೇಕೋ ತಿಳಿಯದಾಗಿಹೋಗಿತ್ತು. 

ಬಹುಷಹ ನಾನು ಬದುಕಿ ಸಾಯುವುದಾದರೆ ಅದು ಇವಳೊಂದಿಗೆಯೇನೋ ಎಂದು ಕೊಂಡಿದ್ದೆ. ಎಲ್ಲಿ ಅತೀ ಪ್ರೀತಿಯಿರುತ್ತದೋ ಅಲ್ಲಿ ಅತೀ ನೋವಿರುತ್ತದೆ. ಎಲ್ಲಿ ಅತೀ ನೋವಿರುತ್ತದೋ ಅಲ್ಲಿ ಆತನ ಸುತ್ತ ಎಷ್ಟು ಕೋಟಿ ಜನರಿದ್ದರೂ ಅವನು ಒಬ್ಬಂಟಿಗ. ಒಬ್ಬಂಟಿಗನೇ... 

ಸವಿಸವಿಯಾಗಿದ್ದ ಸಂಬಂಧ ನಮ್ಮದು. ಬೆಳಗ್ಗಿನ ಕ್ಹಾಫಿಯಿಂದಯಿಡಿದು, ಮನೆ-ಮನಸ್ಸುಗಳ ಸಿಹಿ-ಕಹಿಗಳನ್ನು ಹಂಚಿಕೊಳ್ಳುತ್ತಿದ್ದೆವು. ಹೀಗಿರಬೇಕಾದರೆ ಎಲ್ಲೋ ಒಂದು ಕಡೆ ನನ್ನೆದೆಯ ಹೃದಯದಲ್ಲಿ ಆಕೆಯ ಒಲವು ನನಗೆ ತಿಳಿಯದೆಯೇ ಬೇರು ಬಿಟ್ಟಿತ್ತು..ಅದೆಷ್ಟು ಮಟ್ಟಿಗೆ ಎದೆಯಾಳಕ್ಕೆ ನಾಟಿತೆಂದರೆ ಜೀವನವೇ ಅವಳು, ಅವಳೇ ಜೀವನವೆಂಬಂತೆ ಮಾರುಹೋಗಿದ್ದೆ. ಮಾನಸಿಕವಾಗಿ ಅತಿಯಾಗಿ ಒಬ್ಬರಿಗೊಬ್ಬರು ಹತ್ತಿರವಾಗಿದ್ದೆ ಇದಕ್ಕೆಲ್ಲ ಕಾರಣವಾಗಿತ್ತು. ಅವಳಿಲ್ಲದ ಗಳಿಗೆ ನಶ್ವರ, ಅವಳಿಲ್ಲದ ನಗುವು ನಶ್ವರ, ಒಂದು ಬಾರಿ ಆಕೆಯ ದನಿ ಕೇಳಿದರೆ ಅಂದು ಅದೆಷ್ಟೋ ಸಂಭ್ರಮ ಸಡಗರ. ಹುಚ್ಚಾಪಟ್ಟೆ ಪ್ರೀತಿ ಮಾಡಿದ್ದೆ....

ಮನುಷ್ಯ ಹುಟ್ಟುವುದೂ ಸಹಜ, ಸಾಯುವುದೂ ಸಹಜ ಆದರೆ ಜಗತ್ತಿನ ಇತಿಹಾಸದಲ್ಲಿ ಒಮ್ಮೆ ಹುಟ್ಟಿದ ಪ್ರೀತಿ ಇಂದಿಗೂ ಸತ್ತಿಲ್ಲ ಸಾಯುವುದೂ ಇಲ್ಲ.. ದಿನ ಕಳೆದಂತೆ ನನ್ನಲ್ಲಿದ್ದ ಸ್ನೇಹ ಪ್ರೀತಿಗೆ ಚಿಗುರೊಡೆಯತೊಡಗಿತು. ಇವಳೇ ನನ್ನ ಮಡದಿ ಎಂದು ನಿರ್ಧರಿಸಿಕೊಂಡೆ. ಅದೊಮ್ಮೆ ನಾನವಳಲ್ಲಿ ಹೋಗಿ ನನ್ನ ಪ್ರೀತಿಯ ಬಗ್ಗೆ ಮಂಡನೆ ಇಡುವುದಾಗಿ ನಿಶ್ಚಯಿಸಿಕೊಂಡೆ. ಹೇಗೂ ನಮ್ಮಿಬ್ಬರ ಸ್ನೇಹವು ಭದ್ರ ಬುನಾದಿಯಂತೆ ಬಿಗಿದಿಡಿದಿದ್ದರಿಂದ ಅವಳಿಗೆ ನನ್ನ ಪ್ರೀತಿಯ ಬಗ್ಗೆ ಹೇಳಿಕೊಳ್ಳಲು ಭಯವುಂಟಾಗಲಿಲ್ಲ. ಅಂದು ಜೂನ್ ೨೦೦೭, ನಾನವಳಿಗೆ ಎಸ್.ಎಂ.ಎಸ್ ಮೂಲಕವೇ ನನ್ನ ಪ್ರೀತಿಯ ಬಗ್ಗೆ ಹೇಳಿಕೊಂಡೆ. ಎದೆಷ್ಟೋ ಬಾರಿ ನಾನು ಸ್ವತಹ ಅವಳಲ್ಲಿಗೆ ಹೋಗಿ ಮುಖಾನುಮುಖಿ ಕುಳಿತು ಪ್ರೀತಿಯ ಬಗ್ಗೆ ಹೇಳಿಕೊಳ್ಳಬೇಕೆನ್ನಿಸಿದ್ದರೂ ಸಂಧರ್ಭ ನನ್ನನ್ನು ದೂರವಿಟ್ಟಿತ್ತು. ಆಕೆ ನನ್ನ ಎಸ್.ಎಂ.ಎಸ್ ನೋಡಿದಕೂಡಲೇ, ನನಗೆ ನಿಮ್ಮ ಬಗ್ಗೆ ಆ ರೀತಿಯ ಭಾವನೆಗಳೂ ಯಾವುದೂ ಇಲ್ಲ ಎಂದಳು. ನಾವಿಬ್ಬರೂ ಸ್ನೇಹಿತರಾಗಿದ್ದೇವೆ, ಸ್ನೇಹಿತರಾಗೇ ಇರೋಣ ಎಂದು ಕೈಬಿಟ್ಟಳು. ನನಗ್ಯಾಕೋ ದುಃಖ ತಡೆಯೋಕೆ ಆಗಲಿಲ್ಲ. ಅವಳನ್ನು ಬೇರೊಬ್ಬನಿಗೆ ಬಿಟ್ಟುಕೊಡಲು ಮನಸ್ಸು ಒಪ್ಪಲಿಲ್ಲ. ನನ್ನೆದೆಯ ಗೂಡಿನಲ್ಲಿ ಅವಳನ್ನು ಭದ್ರವಾಗಿ ಬಚ್ಚಿಟ್ಟುಕೊಂಡಿದ್ದೆ. ಆ ಪರಿಸ್ಥಿಯಲ್ಲಿ ನಾನು ಅವಳಿಂದ ದೂರವಿರಲೂ ಆಗದೆ ಹತ್ತಿರವಿರಲೂ ಆಗದೆ ಕೊಂಚ ತಲೆ ಕೆಡಿಸಿಕೊಂಡೆ. ನನ್ನವಳ ಮಡಿಲಿನಲ್ಲಿ ಹಸುಕಂದಮ್ಮನಂತೆ ತಲೆಯಿಟ್ಟು ಅಳಬೇಕೆಂದೆನಿಸಿತ್ತು.ಆಗ ನಮಗೇನೂ ಮದುವೆಯ ಸಮಯ ಬಂದಿರಲಿಲ್ಲ. ತುಂಬಾ ದಿನ ಯೋಚನೆ ಮಾಡಿದ ನಾನು ಕೊಂಚ ಸಮಯ ಪ್ರೀತಿಯನ್ನು ಸೈಡಿಗಿಟ್ಟು ಅವಳ ಸ್ನೇಹಿತನಾಗಿಯೇ ಇರಲು ಪ್ರಯತ್ನಿಸಿದೆ. ಹಪಹಪಿಸಿದೆ. ಆದರೆ ಒಮ್ಮೆ ಹುಟ್ಟಿದ ಪ್ರೀತಿ, ಒಮ್ಮೆ ಮೂಡಿದ ಒಲವು ಮತ್ತೆ ಸ್ನೇಹಕ್ಕೆ ಹಿಂತಿರುಗಲು ಹಿಂದೇಟು ಹಾಕಿತ್ತು. ಎಷ್ಟೋ ಬಾರಿ ನನ್ನ ಆಸೆಗಳನ್ನು, ಬಯಕೆಗಳನ್ನು ಮನಸ್ಸಿನಲ್ಲಿಯೇ ಸಾಯಿಸಿಕೊಂಡು ಅವಳೊಡನೆ ಸ್ನೇಹಿತನಾಗಿರಲು ಪ್ರಯತ್ನಿಸಿದರೂ ನನ್ನ ಮಾತನ್ನು ಕೇಳದ ಪ್ರೀತಿ ಪ್ರತೀ ಕ್ಷಣವನ್ನು ಅವಳ ನೆನಪಲ್ಲೇ ಇರುವ ಹಾಗೆ ಮಾಡಿತ್ತು. ಭಾವುಕನಾಗಿ ಹೇಳಬೇಕೆಂದರೆ ಈ ನನ್ನ ಪ್ರೀತಿಯ ಹಾದಿಯಲ್ಲಿ ಎಷ್ಟೇ ನೊವಿದ್ದರೂ ಒಂದು ರೀತಿಯ ಕಹಿಯಾದ ಸಿಹಿಯಡಗಿತ್ತು. ಎಲ್ಲೋ ಒಂದು ಬಾರಿ ಆಕೆ ನನ್ನವಳಾಗುತ್ತಾಳೆ, ನನ್ನೆದೆಯ ಮೇಲೆ ಮಲಗಿ ಗುಬ್ಬಿಯಂತೆ ಬಚ್ಚಿಟ್ಟುಕೊಳ್ಳುತ್ತಾಳೆ ಎಂದುಕೊಂಡಿದ್ದೆ. ಸ್ನೇಹಿತರಾಗಿಯೇ ಸಾಗುತ್ತಿದ್ದ ನಮ್ಮ ಬದುಕಿನ ಮಧ್ಯ ಆಗಾಗ ಅಚಾನಕವಾಗಿ ಪ್ರೀತಿಯ ಬಗ್ಗೆ ಚರ್ಚೆಗಳು ಬರತೊಡಗಿದವು. ಮತ್ಯಾಕೋ ತಲೆಕೆಡಿಸಿಕೊಂಡ ನಾನು ಅವಳನ್ನು ಕೇಳಿಕೊಂಡ ರೀತಿಗಳಿಲ್ಲದ ರೀತಿಯಲ್ಲಿ ಬೇಡಿಕೊಂಡೆ. ಒಂದು ರೀತಿಯಲ್ಲಿ ದೇವದಾಸನೆ ಆಗಿಹೋದೆ. ಪ್ರೀತಿಯ ಬಿಕ್ಷುಕನಾಗಿಹೋದೆ. ಪದೇ ಪದೇ ನನ್ನವಳ ನಗು, ನನ್ನವಳ ದನಿ ನನ್ನನ್ನು ಸುತ್ತುವರಿದಿತ್ತು. ಆಕೆಯನ್ನು ನಾನು ಅದೆಷ್ಟು ಕೇಳಿಕೊಂಡರೂ ಗಮನಕೊಡದೆ, ನನಗೆ ಪ್ರೀತಿಯ ಬಗ್ಗೆ ಕೊಂಚವೂ ಆಲೋಚನೆಗಲಿಲ್ಲ, ಅದರ ಬಗ್ಗೆ ನಂಬಿಕೆ ನನಗಿಲ್ಲ, ಅದು ಅಪ್ಪ ಅಮ್ಮನಿಗೆ ಬಿಟ್ಟಿದ್ದು ಎಂದು ನಿರ್ಲಕ್ಷಿಸಿದ್ದಳು. ಹೀಗೆ ಬದುಕಿನ ಜಂಜಾಟದಲ್ಲಿ ನನ್ನಾಕೆಯ ಪ್ರೀತಿಗಾಗಿ ಕಾಯುತ್ತ ಕಾಯುತ್ತ ನನ್ನ ಪ್ರೀತಿಗೆ ೩ ವರ್ಷ ತುಂಬಿತ್ತು. ಪದೇ ಪದೇ ನನ್ನಾಕೆಯ ಪ್ರೀತಿಗಾಗಿ ಕಾಲು ಜಾರಿ ಬೀಳುತ್ತಿದ್ದ ನನಗೆ ಅದೊಂದು ದಿನ ನಮ್ಮಿಬ್ಬರ ನಡುವೆ ಎಸ್.ಎಂ.ಎಸ್ ಮೂಲಕ ಮಹಾಯುದ್ಧವೇ ನಡೆದು ಹೋಗಿತ್ತು.  ನಿಯತ್ತಿನ ಪ್ರೀತಿಗೆ ಬೆಲೆಯಿಲ್ಲದಂತಾಯಿತು.

ಎಲ್ಲಿ ಪ್ರೀತಿಗೆ ಬೆಲೆಯಿಲ್ಲವೋ ಅಲ್ಲಿ ನಾನಿರುವುದೂ ಬೇಡ, ಮತ್ತೆ ಮತ್ತೆ ನನ್ನಾಕೆಗೆ ತೊಂದರೆ ಕೊಡುವುದು ಬೇಡವೆಂದು ನಿರ್ಧರಿಸಿ ನಿರ್ಜೀವ ವಸ್ತುವಂತಾಗಿ ದೂರವಾದೆ. ಆದರೂ ಎದೆಯಾಳದಲ್ಲಿ ಎಲ್ಲೋ ಒಂದು ಮೂಲೆಯಲ್ಲಿ ಸ್ಪಟಿಕದಂತಹ ನಂಬಿಕೆ ನನ್ನನ್ನು ಕಾಡುತ್ತಿತ್ತು. ಒಂದಲ್ಲಾ ಒಂದು ದಿನ ನನ್ನಾಕೆ ನನಗಾಗಿ ಬಂದೇ ಬರುತ್ತಾಳೆ ಎಂದು ಕಾದುಕುಳಿತೆ.


ಹೀಗೆ ಒಂದು ವರ್ಷ ಕಳೆದುಹೋಯಿತು. ಜೀವನದ ಶೈಲಿ ಹಾವಭಾವ ಸ್ವಲ್ಪ ಮಟ್ಟಿಗೆ ಬದಲಾವಣೆಯಾಯಿತು. ಅವಳಿಂದ ಕಲಿತ ಕೆಲವು ಪಾಠಗಳನ್ನು ಜೀವನಕ್ಕೆ ಅಳವಡಿಸಿಕೊಂಡೆ. ಹೀಗಿರಬೇಕಾದರೆ ಒಂದು ವರುಷದ ನಂತರ ಅಚಾನಕವಾಗಿ ನನಗೊಂದು ಎಸ್.ಎಂ.ಎಸ್ ಬಂತು. ಯಾವುದೋ ಅನ್-ನೋನ್ ನಂಬರ್ ಹಾಗಿತ್ತು. ಒಂದು ಕ್ಷಣ ಆ ಎಸ್.ಎಂ.ಎಸ್ ನೋಡಿದ ಕೂಡಲೇ ಧಿಗ್ಬ್ರಾ೦ತನಾಗಿ ಹೋದೆ. ಕಣ್ಣೀರನ್ನು ಕಾಣದೆ ಇದ್ದ ನನ್ನ ಕಣ್ಣುಗಳು ಕಣ್ಣೀರಿಂದ ಮುಳುಗಿತು (ಆನಂದಭಾಷ್ಪ ಹರಿಯಿತು). ಒಂದು ರೀತಿಯ ಅಚ್ಚರಿಯಾಗಿತು ಆ ಸಮಯದಲ್ಲಿ ನನ್ನನ್ನು ನಾನೇ ಮರೆತೇ. ಆ ದಿನ ನನ್ನ ಹುಡುಗಿ, ನನ್ನ ಕನಸಿನ ಮಡದಿ ನನಗೆ ಎಸ್.ಎಂ.ಎಸ್ ಮಾಡಿದ್ದಳು. ಆ ದಿನ ನನಗೆ ಎಲ್ಲಿಲ್ಲದ ಆನಂದ ಹಾಗು ಭಯ. ಮತ್ತೆ ನನ್ನಾಕೆ ಎಲ್ಲಿ ನನ್ನನ್ನು ಬಿಟ್ಟು ಹೋಗುತ್ತಾಳೋ ಎನ್ನುವ ಭಯ ನನ್ನನ್ನು ಕಾಡುತ್ತಿತ್ತು. ಆ ಒಂದು ವರುಷದಲ್ಲಿ ನಮ್ಮಿಬ್ಬರ ಜೀವನದಲ್ಲಿ ಹಾದುಹೋದ, ಬಯಸಿ ಹೇಳಬಹುದಾದಂತಹ ನೆನಪುಗಳನ್ನು ಹಂಚಿಕೊಂಡೆವು. ಒಂದು ರೀತಿಯಲ್ಲಿ ಆ ಸಮಯ ಸರಿಸುಮಾರು ಸಂಜೆಯ ವೇಳೆ.  ದೇವತೆಗಳು ದಿನದ ಅಂತ್ಯದಲ್ಲಿ ಅಸ್ತು ಎಂದು ಜಗತ್ತಿಗೆ ಹರಸುವ ಸಮಯ. ಆ ದೇವತೆಗಳ ಗುಂಪಲ್ಲಿದ್ದ ನನ್ನಾಕೆ ನನಗಾಗಿಯೇ ಅಂದು ಕೆಳಗಿಳಿದು ಬಂದಂತಿತ್ತು. ಒಂದು ವರುಷದ ಅಂತರದಲ್ಲಿ ನನ್ನಾಕೆ ನನಗೆ ಸಿಕ್ಕಿರೋದೆ ನನಗೆ ಹೆಚ್ಚಾಗಿಹೋಗಿತ್ತು. ಮತ್ತೆಂದೂ ಅವಳನ್ನು ಬಿಟ್ಟುಕೊಡದವನಾಗಿ ನಿರ್ಧರಿಸಿದೆ. ಮತ್ತೆ ನಮ್ಮಿಬ್ಬರ ಜೀವನ ಹಿಂದಿನಂತೆಯೇ ಹಸನಾಗಿ ಸಾಗಿತ್ತು. ಅವಳಿಗಾಗಿ ಅವಳ ಓದಿಗಾಗಿ ಹರಕೆ ಹೊತ್ತುಕೊಂಡೆ. ಕನಸ್ಸಿನಲ್ಲಿಯೂ ಅವಳ ಬಗ್ಗೆ ಕನವರಿಸುವ ರೀತಿಯಲ್ಲಿ ಅವಳನ್ನು ಅತಿಯಾಗಿ ಪ್ರೀತಿಸಿಬಿಟ್ಟೆ. ನನ್ನಾಕೆಯ ನಡೆನುಡಿ ಸ್ವಲ್ಪ ಮಟ್ಟಿಗೆ ಬದಲಾವಣೆಯಾಗಿತ್ತು. ನನ್ನ ಪ್ರೀತಿ ನನಗೆ ಮತ್ತೆ ಸಿಕ್ಕಿತೆಂಬ ಸಂಭ್ರಮದಲ್ಲಿ ಇರಬೇಕಾದರೆ ಮತ್ತೆ ವಿಧಿ ನಮ್ಮಿಬ್ಬರ ಬಾಳಿನಲ್ಲಿ ಉಳಿಯಿಂಡಿತ್ತು. ಅವಳಿಗೆ ನನ್ನನ್ನು ಪ್ರೀತಿಸಲು ಇಷ್ಟವಿರಲಿಲ್ಲ. ಅದೇ ಹಳೇ ಪುರಾಣ ಪ್ರಾರಂಭವಾಯಿತು. ನಾನು ಬಂದಿದ್ದು ನಿಮ್ಮನ್ನು ಸ್ನೇಹಿತನನ್ನಾಗಿ ಪರಿವರ್ತಿಸಲೆಂದು ಹೇಳತೊಡಗಿದಳು. ನನ್ನ ಮನಸ್ಸಿನಲ್ಲಿ ಆ ರೀತಿಯ ಭಾವನೆಗಳಿದ್ದರೆ ನಾನು ಹೇಳುತ್ತಿದ್ದೆ ಆದರೆ ಆ ರೀತಿಯ ಭಾವನೆಗಳೇ ಹುಟ್ಟುತ್ತಿಲ್ಲ ಎಂದಳು.  ಒಂದು ವರ್ಷ ಹೇಗೋ ಅವಳಿಲ್ಲದೆ ಅವಳ ನೆನಪಿನಲ್ಲಿ ಕಾಲಕಳೆದಿದ್ದ ನನಗೆ ಮತ್ತೆ ಕಗ್ಗತ್ತಲೆಯಂತಿದ್ದ ಜೀವನಕ್ಕೆ ಬೆಳಕಿಡಿದು ದೀಪವನ್ನು ನಂದಿಸಿ ನನ್ನನ್ನು ಮಾರ್ಗ ಮಧ್ಯ ಬಿಟ್ಟು ಹೋದಂತಿತ್ತು. ಅವಳನ್ನು ಎಷ್ಟೋ ಕೇಳಿಕೊಂಡೆ. ಇಷ್ಟು ದಿನದ ಸಮಯದಲ್ಲಿ ನಾನು ನಿನಗಾಗಿಯೇ ನಿನ್ನ ನೆನಪಿನಲ್ಲಿ ಬದುಕಿರುವುದಾಗಿ ಹೇಳಿದೆ. ಆದರೂ ಅವಳು ನಕಾರಾತ್ಮಕ ಉತ್ತರಗಳನ್ನು ಕೊಡಲು ಪ್ರಾರಂಭಿಸಿದಳು. ನನಗ್ಯಾಕೋ ಎಲ್ಲೋ ಒಂದು ಕಡೆ ನಾನು ಪ್ರೀತಿ ಮಾಡುವ ರೀತಿಯೇ ಸರಿಯಿಲ್ಲವೇನೋ ಎಂದೆನಿಸಿತು. ನನ್ನ ಪ್ರೀತಿ ಅವಳಿಗೆ ಸರಿಯಾಗಿ ದಕ್ಕುತ್ತಿಲ್ಲವೇನೋ, ನನ್ನ ಬಚ್ಚಿಟ್ಟ ಕನಸುಗಳ ಭಾವನೆಗಳನ್ನು ಎಷ್ಟು ಬಿಚ್ಚಿಟ್ಟರೂ ಅದಕ್ಕೆ ಅರ್ಥವಿಲ್ಲವೇನೋ ಅನಿಸಿತ್ತು. ಪದೇ ಪದೇ ದೇವರು ನನಗೆ ಸರಿಯಾಗಿಯೇ ಚಡಿಯೇಟುಕೊಡುತ್ತಿದ್ದ.

ಹೌದೂಊಊಊ....? ದೇವರನ್ನು ನಾವೇಕೆ ಗ್ರೇಟ್ ಎನ್ನುತ್ತೇವೆ ಗೊತ್ತಾ ? 

ನನ್ನ ಪ್ರಕಾರ ಮನುಷ್ಯ ಹಂಬಲಿಸಿದ್ದನ್ನು, ಬೇಡಿಕೊಂಡಿದ್ದನ್ನು ಕೊಡದೇ, ಎಲ್ಲೋ ಒಂದು ರೀತಿಯಲ್ಲಿ ಜೀವನಕ್ಕೊಂದು ದಾರಿಮಾಡಿ ಕೊಡುತ್ತಾನಲ್ಲಾ ಅದಕ್ಕೆ ಅವನನ್ನು ಗ್ರೇಟ್ ಎಂದು ಕರೆಯುತ್ತೇವೆ ಎನುವ್ವುದು ನನ್ನ ಅಭಿಪ್ರಾಯ.
ಕೇಳಿದ್ದೆಲ್ಲ ಬೇಡ. ಆದರೆ ನನ್ನ ಹುಡುಗಿಯನ್ನು ನನಗೆ ಕೊಡಲು ಆ ದೇವರಿಗೆ ಸಾಧ್ಯನಾ? ಅಪ್ಪ ಅಮ್ಮನ ಪ್ರೀತಿ ಕೊಟ್ಟ, ಸ್ನೇಹಿತರ ಪ್ರೀತಿ ಕೊಟ್ಟ, ಬಂಧು-ಬಳಗದವರ ಪ್ರೀತಿ ಕೊಟ್ಟ, ಆದರೆ ನನ್ನ ಹುಡುಗಿಯ ಪ್ರೀತಿಯನ್ನು ಕೊಡಲು ಸಾಧ್ಯನಾ?

ಪ್ರೀತಿ ಮಾಡಿಯೇ ಮದುವೆಯಾಗಬೇಕೆಂಬ ಹುಚ್ಚೇನೂ ಇಲ್ಲ, ಆದರೆ ಒಂದಲ್ಲಾ ಒಂದು ದಿನ ಆಕೆ ನನ್ನವಳಾದರೆ ನನಗೆ ಅಷ್ಟೇ ಸಂತೋಷ. ಕೊನೆಗೂ ನಾನು ಅವಳನ್ನು ಅವಳಿಷ್ಟದಂತೆಯೇ ಬಿಟ್ಟು ಹೊರಬಂದೆ. ಆದರೆ ಅಚಾನಕವಾಗಿ ಮಧ್ಯವರ್ತಿಯಾಗಿ ಬಂದ ಹಿತೈಶಿಯೊಬ್ಬರು ಅಷ್ಟೊಂದೇನೂ ತಲೆಕೆಡಿಸಿಕೊಳ್ಳಬೇಡ.,  ಅವಳಿಲ್ಲದಿದ್ದರೆ ಮತ್ತೊಬ್ಬಳು (ಅವಳಿಗಿಂತ ಅನ್ದವಾಗಿರೋ, ಬುದ್ಧಿವಂತೆ)  ಸಿಗುತ್ತಾಳೆ ಎಂದು ಹೇಳಿದರು.


ನಿಜ, ನಾನು ಅವರು ಹೇಳಿದಂತೆಯೇ ಇರಬಹುದಿತ್ತು. ಬೇರೊಂದು ಪ್ರೀತಿಯನ್ನು ಹುಡುಕಬಹುದಿತ್ತು. ಆದರೆ ನಾನು ಮಾಡುತ್ತಿರುವ ಪ್ರೀತಿ "ಶೋಕಿಗಾಗಿ" ಅಲ್ಲ.  ಪ್ರೀತಿ ಶೋಕಿಯಾಗಿದ್ದರೆ ಅವಳನ್ನು ಬಿಟ್ಟು ಇನ್ನೊಬ್ಬಳ ಹಿಂದೆ ಓಡುತ್ತಿದ್ದೆ. ನನ್ನ ಪ್ರೀತಿಗೆ ಒಂದು ಪ್ರತ್ಯೇಕವಾದ ಬೆಲೆಯಿದೆ. ಆ ಪ್ರೀತಿಯ ನೆನಪಲ್ಲೇ ಬದುಕುತ್ತೇನೆ. ಕೊನೆಯದಾಗಿ ಅವಳೆಂದಿಗೂ ನನ್ನವಳೇ.. ಪುಟಾಣಿ ಕಂದಮ್ಮ ತನ್ನ ಕಾಲಿನಿಂದ ನನ್ನೆದೆಯನ್ನು ಎದೆಯನ್ನು ತುಳಿದಂತೆ..... ಅವಳು ನನಗೆ ಸಿಗದಿದ್ದರೂ ನನ್ನ ಪ್ರೀತಿ ಎಂದಿಗೂ ಸಾಯುವುದಿಲ್ಲ..

ಉಸಿರಾಗಿ ಬಂದವಳೇ ಉಸಿರನ್ನು ಕೊಲ್ಲದಿರು
ಹಸಿರಾಗಿ ನಿಂತವಳೇ ಹೆಸರನ್ನು ಕೆಡಿಸದಿರು
ಬದುಕಿರುವ ಕ್ಷಣಗಳಲಿ ಬದುಕಾಗಿ ಬಂದುಬಿಡು
ನಿನ್ನೆದೆಯ ಗೂಡಿನಲ್ಲಿ ನನಗಿಷ್ಟು ಜಾಗವಿಡು......

______________________________
ಒಂದೇ ಒಂದು ಹನಿ ವಿಷ ಉಣಿಸಿದರೆ ಸಾಕು ಗೆಳತಿ
ನಿನ್ನ ನೆನಪಿನ ಅಂಗಳದಲ್ಲಿ ನನ್ನ ಉಸಿರನು ತೇಯುವೆ. 
ಕೊನೆಗಾಲದ ನನ್ನ ನಗುವ ನಾ ಕಂಡು ಸಂತಸದಿಂದ ಕಣ್ ಮುಚ್ಚುವೆ. 

ನಿನ್ನ ಪ್ರೀತಿಯ........ ಸ್ನೇಹದ ಮಡಿಲು ಸುನಿಲ್.... ಲವ್ ಮಿ ವೆನ್ ಐ'ಮ್ ಗಾನ್