Wednesday, March 10, 2010

ಪ್ರೀತಿಗಾಗಿ ಅಲೆದಾಗ

ನಿನ್ನ ಹುಡುಕುತ ಬಂದೆ ಎಲ್ಲೆಲ್ಲೋ ಅಲೆದಲೆದು
ಎನ್ನ ಸನಿಹದಿ ನೀನಿದ್ದರೂ
ಮಲೆಯನೆರುತಲಿದ್ದೆ, ಹೊಳೆಯ ದಾಟುತ ಬಂದೆ
ಎನ್ನ ಜೀವದ ಗೆಳತಿ ಬಳಿ ನೀನಿದ್ದರೂ

ಬಿಸಿಲ ಬೇಗೆಯೆ ಬರಲಿ ಬರವಾಗದೀ ಪ್ರೀತಿ
ನೆರಳಿಟ್ಟು ನೀರುಣಿಸಿ ತಂಪೆರೆವೆ  ನಾನು
ಕೂಗುತಾ ಇಹುದು ಬಹುದೂರದಾ ದನಿಯೊಂದು
ಕೇಳಿತೆ ಮನವೇ ನಮಗಿದೋ ಮಧು ಮಂಚವನ್ನು

ಚಂದ್ರನಿಲ್ಲದ ಬಾನು ಅಂದ ಕಾಣುವುದೇನು
ಚಂಚಕೋರಿಯೇ  ನೀ ನಿನ್ನುಸಿರ ತಾರಾ
ಎನ್ನ ಹೃದಯದ ಕದವ ತೆರೆದಿಟ್ಟು ಕಾದಿಹೆನು
ಬೆಚ್ಚನೆಯ ಗೂಡಿಹುದು ಬಂದೆನ್ನ ಸೇರಾ.

Friday, February 26, 2010

ಒಂದು ಮುತ್ತಿನ ಕತೆ

ಅಂದು ಮನದೊಳು ತಂಗಿ
ಎನ್ನ ಬೆಳದಿಂಗಳ ಮಲ್ಲಿ
ಚೆಂದುಟಿಯ ನಗೆ ಬೀರಿ
ತಿಂಗಳಾದಂತೆ ಕಳೆದಳು
ಗೆಳೆಯನೆಂದು ಮೆರೆದಳು

ಇಂದು ಬವಣೆಗಳ ತುಂಬಿ
ಕಂಬನಿಯ ತರುವಲ್ಲಿ
ಹುಸಿನಗೆಯ ಚೀರಿ
ಮರೆಯಾದಳು, ತಾರೆ
ಎದೆಯಲ್ಲಿ ಮಿನುಗಿ ಮರೆಯಾದಳು

ಇದ್ದ ದಿನಗಳ ತುಂಬ
ಹಬ್ಬಗಳ ತಲೆದಿಂಬು
ನಂಬಲಾಗದ ಹಾಗೆ ಹೋದವಳು ದೂರ
ಕತ್ತಲಲ್ಲಿಯೇ ಮುಳುಗಿ ಹುಡುಕುತಿದೆ ಈ ಹೃದಯ
ಬೆಳಕ ಹಿಡಿಯುವಳೆಲ್ಲೋ ಬಹುಬೇಗ ಬಾರಾ

ನಗ್ನ ಬದುಕಿಗೂ ಉಡುಪು
ತೊಡಲು ಹೊರಟವ ನಾನು
ಭಗ್ನ ಪ್ರೇಮಿಯ ಹಾಗೆ, ಈ ಮಂಕುತಿಮ್ಮ
ಮಗ್ನನಾದೊಡೇನು ಪ್ರೇಮದೊಳು ನಾನು
ತಿಳಿಯದನು ತಿಳಿಸುತಲಿ ತಾ ಪರಬ್ರಹ್ಮ .

Saturday, January 16, 2010

ನಿಮಗಿದು ತಿಳಿದಿರಲಿ:

ಆಟಿಕೆ ಕೊಟ್ಟು ನಿಮ್ಮ ಕಂದಮ್ಮನ ಕೊಲ್ಲದಿರಿ:

(ಸಂಗ್ರಹ: ವಿಜಯ ಕರ್ನಾಟಕ ದಿನಪತ್ರಿಕೆಯಿಂದ ದಿನಾಂಕ: ೧೫..೦೧..೨೦೧೦

ಆಟಿಕೆಗಳೆಂದರೆ ಮಕ್ಕಳಿಗೆ ಪ್ರಾಣ. ಆದರೆ ಅದರ ಅಡ್ಡ ಪರಿಣಾಮಗಳು ಪ್ರಾಣಾಂತಿಕ. ಮಕ್ಕಳ ಪಾಲಿಗೆ ಅವು ವಿಷ..!
ಹೌದು. ವಿಷಕಾರಿ ಆಟಿಕೆಗಳನ್ನು ಎಲ್ಲೆಡೆ ಮಾರಲಾಗುತ್ತಿದೆ. ಬ್ರ್ಯಾಂಡ್ ರಹಿತ ಮಾತ್ರವಲ್ಲ, ಬ್ರಾಂಡೆಡ್ ಆಟಕೆ ಗಳೂ ಅಸುರಕ್ಷಿತ ಎಂಬುದನ್ನು ವಿಜ್ಞಾನ ಮತ್ತು ಪರಿಸರ ಕೇಂದ್ರ(ಸಿ.ಎಸ್. ಇ) ನಡೆಸಿದ ಅಧ್ಯಯನ ಎಚ್ಚರಿಸಿದೆ.

ಮಕ್ಕಳು ಆಟಿಕೆ ಗಳನ್ನು ಕಚ್ಚುವುದು ಅಥವಾ ಚೀಪುವುದನ್ನು ಮಾದುತಿರುತ್ತಾರೆ. ಈ ಅಭ್ಯಾಸ ತಪ್ಪಿಸಡೀ ಹೋದರೆ ಆಸ್ತಮಾ, ಶ್ವಾಸಕೋಶ ಮತ್ತು ಉಸಿರಾಟ ಸಮಸ್ಯೆಗಳು ಎದುರಾಗುತ್ತವೆ. ಈ ವಿಷಕಾರಿ ವಸ್ತುಗಳು ಮಕ್ಕಳ ಆರೋಗ್ಯಕ್ಕೆ ಮಾರಕ ಎಂದು ಅಧ್ಯಯನ ಹೇಳಿದೆ.
ನಾನ ಮಾದರಿಯ ಆಟಿಕೆಗಳನ್ನು ಪ್ರಯೋಗಕ್ಕೆ ಒಳಪಡಿಸಿರುವ ಸಿ.ಎಸ್.ಇ ಯ ಮಾಲಿನ್ಯ ನಿಗಾ ಪ್ರಯೋಗಾಲಯ, ತೀವ್ರ ಕಳವಳ ವ್ಯಕ್ತಪಡಿಸಿದೆ. ಪ್ಲಾಸ್ಟಿಕ್ ಮೃದುಗೊಳಿಸಲು ಥ್ಯಾಲೇಟ್ಸ್ ಎನ್ನುವ ರಾಸಾಯನಿಕವನ್ನು ಬಳಸಲಾಗುತ್ತದೆ. ಇದು ಆಟಿಕೆ ಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿದ್ದು, ಮಕ್ಕಳ ಪಾಲಿಗೆ ಇದು ವಿಷವಾಗುತ್ತಿದೆ.
ಸಾಮಾನ್ಯವಾಗಿ ಮೂರು ವರ್ಷದೊಳಗಿನ ಮಕ್ಕಳ ದೇಹವನ್ನು ಥ್ಯಾಲೇಟ್ಸ್ ಸೇರುತ್ತಿದೆ. ಏಕೆಂದರೆ ತಿಳುವಳಿಕೆ ಕೊರತೆಯಿಂದ ಆ ವಯಸ್ಸಿನ ಮಕ್ಕಳು ಆಟಿಕೆ ಗಳನ್ನು ಜಗಿಯುವುದು ಸಾಮಾನ್ಯ ಎನ್ನುತ್ತಾರೆ ಸಿ.ಎಸ್.ಇ ನಿರ್ದೇಶಕಿ ಸುನಿತಾ ನಾರಾಯಣ್.

ಚೀನಾ ಆಟಿಕೆಗಳಲ್ಲಿ ಹೆಚ್ಚು ವಿಷ: ಅಧ್ಯಯನದ ವೇಳೆ, ದಿಲ್ಲಿಯ ನಾನ ಭಾಗಗಳಲ್ಲಿ ೨೪ ಆಟಿಕೆಗಳನ್ನು ಖರೀದಿಸಿದೆವು. ಮಕ್ಕಳು ಸಾಮಾನ್ಯವಾಗಿ ಚೀಪುವ, ಬಾಯಲ್ಲಿ ಅಗಿಯುವ ಆಟಿಕೆಗಳನ್ನೇ ಹೆಚ್ಚಾಗಿ ಆರಿಸಿದೆವು. ಚೀನಾ (೧೫), ಭಾರತ (೭), ತೈವಾನ್ (೨), ಥಾಯ್ಲೆಂಡ್ನಲ್ಲಿ (೧) ತಯಾರಾದ ಆಟಿಕೆಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಯಿತು. ಚೀನಾ, ತೈವಾನ್ ನ ಆಟಿಕೆಗಳಲ್ಲಿ ಹೆಚ್ಚು ವಿಷ ಕಂಡು ಬಂದಿದೆ ಎನ್ನುತ್ತಾರೆ ಸಿ.ಎಸ್.ಇ ಸಹ ನಿರ್ದೇಶಕ ಚಂದ್ರ ಭೂಷಣ್.

ಫನ್ ಸ್ಕೂಲ್ ಮತ್ತು ಮತ್ತೆಲ್ ಸೇರಿದಂತೆ ಪ್ರತಿಷ್ಟಿತ ಬ್ರಾಂಡ್ ಗಳ ಆಟಿಕೆಗಳನ್ನು ಪ್ರಯೋಗದ ವೇಳೆ ಬಳಸಿಕೊಳ್ಳಲಾಗಿತ್ತು. ಈ ವೇಳೆ ಎಲ್ಲ ಆಟಿಕೆಗಳಲ್ಲೂ ಹೆಚ್ಚಿನ ಥ್ಯಾಲೇಟ್ಸ್ ಕಂಡುಬಂತು. ಪ್ರಯೋಗಕ್ಕೆ ಬಳಸಿಕೊಳ್ಳಲಾದ ಚೀನಾದ ೧೪ ಆಟಿಕೆಗಳ ಪೈಕಿ ೮ರಲ್ಲಿ ಈ ಪ್ರಮಾಣ ಹೆಚ್ಚಾಗಿತ್ತು. ಭಾರತದ ಆಟಿಕೆಗಳ ಪೈಕಿ ಒಂದು ಕಂಪನಿಯ ಆಟಿಕೆ ಯಲ್ಲಷ್ಟೇ ಹೆಚ್ಚಿನ ಹಾನಿಕಾರಕ ವಸ್ತು ಪತ್ತೆಯಾಗಿದೆ ಎಂದು ಭೂಷಣ್ ಹೇಳಿದ್ದಾರೆ.
ಏನಿದು ಥ್ಯಾಲೇಟ್ಸ್ ?
ಪ್ಲಾಸ್ಟಿಕ್ ಮೃದುಗೊಳಿಸಲು ಈ ವಿಷಯುಕ್ತ ರಾಸಾಯನಿಕ ಬಳಸುತ್ತಾರೆ. ಈ ರಾಸಾಯನಿಕ ಪುರುಷರ ಸಂತಾನ ಶಕ್ತಿ ಕುಗ್ಗಿಸುತ್ತದೆ. ಶ್ವಾಸಕೋಶಕ್ಕೆ ತೊಂದರೆ, ಗರ್ಭಕ್ಕೆ ತೊಡಕು, ಆಸ್ತಮಾ, ಅಲರ್ಜಿ ಮತ್ತಿತರ ತೊಂದರೆಗೆ ಇದು ಕಾರಣವಾಗುತ್ತದೆ. ಅಲ್ಲದೆ ವೀರ್ಯದ ಫಲವತ್ತತೆ ಕಡಿಮೆ ಯಾಗುತ್ತದೆ. ಅಪ್ರಾಪ್ತ ವಯಸ್ಸಲ್ಲೇ ಎದೆ ಬೆಳೆಯುತ್ತದೆ.