Thursday, April 9, 2009

ರಾಜಕೀಯ (ತಂತ್ರ-ಕುತಂತ್ರ)


ನುಡಿವುದೊಂದು ನಡೆವುದೊಂದು

ನಡುವಿನಲ್ಲಿ ನೆಡುವುದೊಂದು

ಹಡೆವುದೊಂದು ಒಡೆವುದೊಂದು

ಮುಗಿದ ಮೇಲೆ ತರುವುದೊಂದು


ಆದಿಯೊಂದು ಅಂತ್ಯವೊಂದು

ಆಸೆಯಿಟ್ಟು ಮುಡಿಸಿದೊಂದು

ಮೂರ್ಖಜನರು ನಂಬಲೆಂದು

ಹಬ್ಬವಿಲ್ಲ, ಬರೀ ಯುದ್ಧವಿಂದು


ಇರುವ ವೇಳೆ ಇಲ್ಲ ಒಂದೂ

ಸತ್ತ ಮೇಲೆ ಕೊಡುವುದೊಂದು

ಹೆಸರ ಕಲ್ಲ ಕೆತ್ತಲೆಂದು

ಪೂವ ಹಾಕಿ ಮುಗಿಸಿದಂದು


ಯಾನವೊಂದು ತಾಣವೊಂದು

ಕುಡಿತದಲ್ಲೇ ಮಗ್ನರೆಂದು

ಕಾಲನೆಳೆದು ನಗುವುದೊಂದು

ಇದೇ ರಾಜಕೀಯ ಕುತಂತ್ರವಿಂದು

Wednesday, April 8, 2009

ಕೊಲ್ಲದಿರಿ ನನ್ನನ್ನು - (ಮರಗಿಡಗಳು ಮತ್ತು ಆಮ್ಲಜನಕ)

ಉಸಿರು ಉಸಿರಲಿ ನನ್ನ ಹೆಸರು
ಕೊಡುವ ದಾತನೆ ಮರೆತಿರಾ?
ಕೊಚ್ಚಿ ಕೆಡುಹುತ ಪಸಿರು ಮರೆತರೆ
ಮುಂದೆ ದಿನಗಳ ಬಲ್ಲಿರಾ?

ನನ್ನ ಉಸಿರೊಳಗುಸಿರ ಜೀವ
ವನ್ಯ ಮೃಗಗಳ ಕಂಡಿರಾ?
ಗೆಳೆಯ ವರುಣನ ಕೂಗು ನಾನು
ಬರಡು ಭೂಮಿಯ ತಡೆಯಿರಾ?

ಇಳೆಯ ರಾಜನ ಸೊಬಗ ಅಂದ
ಕಂಪು ಪರಿಮಳ ತರಿಸಿರಾ?
ಹಕ್ಕಿ ಗೂಡೊಳು ಪುಟ್ಟ ಜೀವ
ನನ್ನ ಬೆಲೆಯನು ತಿಳಿಯಿರಾ?

ಎದೆಯ ಬಡಿತದ ಗುಟ್ಟು ನಾನು
ಇರದೆ ನಾನು ಬದುಕಿರಾ?
ನಾನು ಉಳಿದರಳಿಯದಿರುವಿರಿ
ಜಗದ ಸತ್ಯಕೆ ಮಣಿಯಿರಾ?

Monday, March 23, 2009

ಒಡೆದ ಮನಸು

ಹರಿದ ರವಿಕೆಯನುಟ್ಟು ಮೈಯೊಡ್ದಿ ನಗುತಿಹಳು
ಬಿಸಿಲಿನೊಳು ಚಲಿಸುತ್ತ ದನಕರುಗಳ ಬಳಗದಲಿ
ಕಲ್ಲಾಗಿ ಕಲ್ಲಿನೊಳು, ಮುಳ್ಳಾಗಿ ಮುಳ್ಳಿನೊಳು
ಕಟ್ಟಿತ್ತು ಹೆಪ್ಪುಂಡು ಪಾದಗಳು ಬಲವಾಗಿ

ಹಸಿದ ಹೊಟ್ಟೆಗೆ ಬೇಕು ಮೇವುಂಡ ಹಾಲಂತೆ
ಎರಡಾಣೆಯ ಗಳಿಕೆಯೊಳು ಒಪ್ಪತ್ತಿನ ಆಹಾರ
ನಗ್ನತೆಯ ಸತ್ಯಕ್ಕೆ ಬೆರಗಾದ ಬದುಕಂತೆ
ಮುಗ್ಧತೆಯು ಸಾಗುತಿದೆ ಆ ಬಡಕಲು ಶಾರೀರ

ಬರದಿರಲು ಮುಮ್ಮೋಡ ನೆನಸಿದಾ ಸಮಯದೊಳು
ಇಂಗುತ್ತ ಕ೦ಗಳಲಿ ಮುಚ್ಚಿಟ್ಟ ಕನಸುಗಳು
ಬಿರುಸಿನಲಿ ಹಬ್ಬಗಳು ಹೊಸಿಲಲ್ಲಿ ನಿಂತಿರಲು
ಇನ್ನೆಲ್ಲಿ ಹೊಸ ಉಡುಪು? ಶುಚಿ ಮಾಡಿ ಹಾಕಿರಲು..

ಮುಖದಲ್ಲಿ ಸಿಂಧೂರ, ಮೂಗುತಿಯ ಗತಿಯಿಲ್ಲ
ಆಸೆಗಳ ಬುತ್ತಿಯಲಿ ನಿಟ್ಟುಸಿರ ಸ್ಥಳವಿಲ್ಲ
ಆ ಒಡೆದ ತುಟಿಯೊಳಗೆ ಹುಡುಕಿದರೂ ಸಿಹಿಯಿಲ್ಲ
ಉಕ್ಕೇರದು ಮಂದಾರ, ನೆಲೆಯಿಲ್ಲ ಕಹಿಯೆಲ್ಲ..

Sunday, March 1, 2009

ಸಾವು‏

ಸಾವೇಕೆ ಬರ್ತಾಯಿಲ್ಲಾ ?

ಬಹುಷಃ ಕರ್ಮಗಳಿನ್ನೂ ಕಳೆದಿಲ್ಲ.

ಕರ್ಮಗಳೇಕೆ ಸಾವಿಗೆ ಆಧಾರವಾಗಿ ನಿಂತಿವೆ?

ಅದು ಬ್ರಹ್ಮನಿಗೂ ಸರಿಯಾಗಿ ತಿಳಿದಿಲ್ಲ.


ಪ್ರಯತ್ನಿಸಿದರೊಂದು ಬಾರಿ ಬಾಳೇಗೆ ಮೊನಚುವುದು?

ಕೊನೆವರೆಗೂ ಅದು ಹೇಡಿಯಾಗಿಯೇ ಉಳಿಯುವುದು.

ಹಾಗಾದರೆ ಹೇಡಿಗಳೇಕೆ ಬದುಕುವುದಿಲ್ಲ ?

ಜೀವನವನ್ನು ಸಾಗಿಸಲು ಬಾರದೇ ಸತ್ತಿದ್ದೆಲ್ಲ.


ನಿರಂತರ ಬದುಕಿನೊಳು ಮುಳ್ಳು-ಕಲ್ಲುಗಳೇ ಮೇಲೇಕೆ?

ನಂಬಿಕೆ ಛಲವೆರಡಿಟ್ಟು ದಾಟಿ ಬಾ ಎನಲಿಕ್ಕೆ.

ದಾಟಿ ಬರುವ ಸಮಯದಲಿ ಎಷ್ಟೋ ಜನ ಎಡವಿ ಬಿದ್ದದ್ದೇಕೆ?

ಅವರಿನ್ನೂ ಅದರಲ್ಲಿ ಪರಿಣಿತರಾಗದಿದ್ದುದ್ದಕ್ಕೆ.


ತಿಂದ ಮೇಲೆ ನೀರು ಕುಡಿಯಲೇಬೇಕು ಎನುವುದೇಕೆ?

ಇಳಿಯದಿದ್ದರೆ ಕೆಡಕಾಗುವುದು ಎನುವುದಕ್ಕೆ.

ಹಾಗಾದರೆ ಹಣ ತಿನ್ನುವವರು ಹೆಚ್ಚಿದರೇತಕೆ?

ಹಣವಿಲ್ಲದೆ ಹುಲ್ಲು ಕಡ್ಡಿಯೂ ಅಲ್ಲಾಡುವುದಿಲ್ಲವದಕ್ಕೆ.


ಕಷ್ಟ ಅನ್ನೋದು ಬರೀ ಮನುಷ್ಯರಿಗೇ ಇರೋದು ಅನುವುದೇತಕೆ?

ಪ್ರಾಣಿ-ಪಕ್ಷಿ-ಗಿಡ-ಮರಗಳಿಗೆ ಹೇಳಲಾಗುವುದಿಲ್ಲವಲ್ಲ ಅದಕ್ಕೆ.

ಆದರೂ ಸಾವು ಬರುತ್ತಾ ಇಲ್ಲ ಏತಕ್ಕೆ?

ತಾನಾಗಿಯೆ ಬರುವ ಸಾವಿಗೆ ಸೂಕ್ತ ಉತ್ತರ ಇದೆ ಅದಕ್ಕೆ.

ಕಲ್ಮಷ‏

ಮನಸಿನಲೊಂದು ಕಲ್ಮಷವು ಅರಿಯದೆಯೆ ಬೆಳೆದಿತ್ತು
ಅದು ನನ್ನೊಳು ಕೂತು ಲೀಲಾಜಾಲವಾಗಿ ಹಾಡಿತ್ತು


ಮೋಹದಿಂದೊಳು ಧೂಳ್ಗಟ್ಟಿತ್ತು, ಹೃದಯದಿ ಎಲ್ಲೋ
ಮೂಲೆಯಲಿ ಕೊಳೆತು ಸೂಸುತ ಜೀವನ ಸಾಗಿತ್ತು


ದಿನಗಳುರುಳುತಿರೆ ಮಾಸುತ್ತ ಮಾಗುತ್ತ ಮಂಕು ಕವಿದಿತ್ತು
ಬುದ್ಧಿವಿಕನಿಸದೆ ಅರೆಪರಿಯಾಗಿ ಮೆಲುಕು ಹಾಕಿತ್ತು


ಎನಿತು ಮಾಯೆಯೋ ಈ ಪ್ರೀತಿ ಮಸಣಕೆನಗೆ ದಾರಿ ತೋರಿತ್ತು
ದೇವನಿಟ್ಟ ಆಯಸ್ಸು ಲೆಕ್ಕಗಳೆಲ್ಲ ಒಂದು ಕಡೆ ತಪ್ಪಾಗಿತ್ತು


ಹಳ್ಳವಂತೆನಗೆ ಬಿದ್ದರೊಂದು ಬಾರಿ, ಹಣೆಯ ಬರಹದಿ ಸ್ಪಷ್ಟನೆ ಕೆತ್ತಿತ್ತು
ಯಾವ ಉಳಿಯು ಬೇಡವಿಲ್ಲಿ, ಬೆನ್ನ ಹಿಂದೆಯೇ ಬಂದೆನ್ನ ನೂಕಿತ್ತು


ಭಯದ ನೆರಳಲಿ ನಿಂತು ಬೆವೆತಂತೆ ಜೀವ ಸುಡುತ್ತಿತ್ತು
ಬದುಕಿನ ಮೂಲ ದಿಕ್ಕನರಿಯದೆ ಮನ ಪರಿತಪಿಸಿತ್ತು


ಎನ್ನ ಕನಸಿನರಮನೆಯಲೊಂದು ಹಾಡಿನ ಜೇಂಕಾರ ಕೂಗಿತ್ತು
ಹಾಡು ಹಾಡಾಗದೆಯೇ ಕಂಬಳಿಯೊದ್ದು ಹೆಪ್ಪುಗಟ್ಟಿ ಮಲಗಿತ್ತು


ಬದುಕು ಜ೦ಜಾಟದಲೂ ಮೋಹ ದಿಗ್ಭಂಧನಕ್ಕೊಳಗಾಗಿತ್ತು
ಹೊರದಾರಿ ಕಾಣದೆಯೆ ಅಂಧಯಷ್ಟಿಯನಿಡಿದು ಸಾಗಿತ್ತು


ವಿಧಿ ಬರೆದ ಆಟದೊಳು ನೋವಿನುಪಸ್ಥಿತಿಯೇ ಹೆಚ್ಚಿತ್ತು
ಬೆಳಕ ಕಾಣುವ ಮುನ್ನ ಕಾಲ ಚಿಗುರೊಡೆದು ಮೀರಿತ್ತು

ಭಾವನವನವೀನ


ನಿನ್ನಾ ಕರೆದು ಹೊಯ್ತಿನಮ್ಮಾ ಮುತ್ತಿನ ಮ್ಯಾಲೆ

ಸೂರೆ ಹೊಡೆದು ಹೊಯ್ತಿನ್ ಚಂದದ ಗುಟ್ಟಿನ ಲೀಲೆ ೨

ಊರಾಚೆಯಲ್ಲಿ ಒಂದು ಕಾಣದಾ ಲೋಕವಯ್ತೆ

ನಮಗಾಗಿ ಕಾಯುತಯ್ತೆ, ಹೊಸಮನೆಯು ಬೆಳಗುತಯ್ತೆ

ನಿನ್ನಂತರಂಗ ತಿಳಿಯೋ ಕ್ಷಣವಿಂದು ಬೆದಕುತಯ್ತೆ

ಹೊಸಬಾಳು ಸಾಗುತಯ್ತೆ, ಒಂಟಿಜೀವ ಬಿಡುವಂಗಯ್ತೆ


ನಿನ್ನಾ ಕರೆದು ಹೊಯ್ತಿನಮ್ಮಾ ಮುತ್ತಿನ ಮ್ಯಾಲೆ

ಸೂರೆ ಹೊಡೆದು ಹೊಯ್ತಿನ್ ಚಂದದ ಗುಟ್ಟಿನ ಲೀಲೆ ೨


ಹೆ:- ಒಳ ಆಸೆ ಮುಗಿವಾ ಕ್ಷಣದೀ ಹೊಸ ಆಸೆ ಉಕ್ಕುತಯ್ತೆ

ಈ ಮೀಸೆ ಮಾವನ್ ತೋಳು ಎಡೆಬಿಡದೆ ಅಪ್ಪುತಯ್ತೆ

ಅವನಿಡುವ ಹೆಜ್ಜೆಯಲ್ಲೇ ಈ ಬಾಳಿನ ದೀಪವಯ್ತೆ

ಏಳೇಳು ಜನುಮದಲ್ಲೂ ಸಂಗಾತಿ ನೀನಂದಯ್ತೆ


ನಿನ್ನಾ ಕರೆದು ಹೊಯ್ತಿನಯ್ಯಾ ಮುತ್ತಿನ ಮ್ಯಾಲೆ

ಸೂಟು ಬೂಟಿನ ಚೆಲುವಾ ನಾ ಬಲಿತಾ ಬಾಲೆ


ಗ:- ವನಜಾರಿ ಕಂಡು ನಮ್ಮ ಬೆರಗೆದ್ದು ಕುಣಿಯುತಯ್ತೆ

ಜೊತೆಗೊಂದು ಬೆಕಂದಯ್ತೆ, ಇಣುಕಿಣುಕಿ ನೋಡಕಯ್ತೆ

ಪಲ್ಲಂಗಕೆ ಪೂವ ತುಂಬಿ ತಂಗಾಳಿ ಬೀಸುತಯ್ತೆ

ಬಿಗುಮಾನ ಬಿಟ್ಟೋಗಯ್ತೆ, ಬಿಂಬಾಧರ ಸೆಳೆಯುತಯ್ತೆ


ನಿನ್ನಾ ಕರೆದು ಹೊಯ್ತಿನಮ್ಮಾ ಮುತ್ತಿನ ಮ್ಯಾಲೆ

ಸೂರೆ ಹೊಡೆದು ಹೊಯ್ತಿನ್ ಚಂದದ ಗುಟ್ಟಿನ ಲೀಲೆ ೨

ಪಾಪಿಯಂತೆ

ಯಾವ ಜನುಮದ ಹೊರೆಯೋ ಕಾಣೆ

ನನ್ನ ಬದುಕು ಹಳಸಿದೆ

ಯಾರ ಶಾಪದ ಫಲವೋ ಕಾಣೆ

ಇಂಚು ಇಂಚಲೂ ಹಿಂಡಿದೆ


ಮುಖದ ಕಳೆಯು ಇಲ್ಲವಾಗಿದೆ

ಮಂಕು ಉಂಡು ಮೆರೆದಿದೆ

ಎಲ್ಲ ಕಡೆಯೂ ನಾನೇ ಕೊನೆಯೂ

ಎದೆಯ ಕೆಚ್ಚು ಸವೆದಿದೆ



ವಿಧಿಯ ಆಟಕೆ ಕೊನೆಯೇಯಿಲ್ಲವೇ

ತನ್ನಿಚ್ಚೆಯಂತೆ ನಡೆಸಿದೆ

ಹೆಜ್ಜೆ ಹೆಜ್ಜೆಗೂ ನೋವನುಂಡು

ಬಾಧೆ ತಾಳದೆ ಮರುಗಿದೆ


ಓದಲಿರುವ ವಿದ್ಯೆ ಹತ್ತದೆ

ಬುದ್ದಿ ಕುರುಡು ಹಾಗಿದೆ

ನನಗೆ ತಿಳಿಯದು ಯಾಕೆ ಹೀಗೆ?

ಮುಂದೆ ತೋಚದ ಹಾಗಿದೆ


ದೇವರಂತಹ ತಂದೆ-ತಾಯಿಯು

ಕೊರಗುತಿಹರು ಮನದಲಿ

ಕಣ್ಣ ಒರಸು ಹರಿಸುತಿಹರು

ಮನದ ಮೌನದ ತಳದಲಿ


ಏನು ಕೇಳಲಿ ದೇವರೆಡೆಗೆ

ತೊಡೆದು ಹಾಕು ಎನ್ನಲೇ?

ನೋವನಿಟ್ಟು ನಗುವ ಬದಲು

ಮಣ್ಣ ಬಿಟ್ಟು ಕರೆಯಿರೆ..

Thursday, February 12, 2009

ಯಾರು ಹೊಣೆ?


ಕನಸುಗಳೂ ನನ್ನದೇ, ನೋವುಗಳೂ ನನ್ನದೇ

ಏನಿಹುದು ಈ ಬಾಳ ಲಹರಿಯಲಿ
ಪ್ರೀತಿ ಬಿತ್ತಿ, ಮೊಳಕೆಯೊಡೆಸಿ, ಕತ್ತಲೆರಚಿ
ಬೆನ್ನ ನೂಕೋ ಈ ವಿಧಿಗೆ ಯಾರು ಹೊಣೆ?

ಹುಟ್ಟು ಅವಳೇ, ಸಾವು ಅವಳೇ

ಮೋಹ ನಗೆಯ ಚೆಲ್ಲಿದವಳೇ
ತನು ಮನದಲಿ ಕುಳಿತಳವಳೇ
ಊಟ, ನಿದ್ದೆ ಕಸಿದುಕೊಂಡ ಈ ಸ್ಥಿತಿಗೆ ಯಾರು ಹೊಣೆ?

ಹಗಲು ಅವಳೇ, ಇರುಳು ಅವಳೇ
ಹೊಂಬೆಳಕಿನ ಧ್ಯಾನ ಅವಳೇ
ದೇವರಿಲ್ಲ ಕುಳಿತಳವಳೇ
ಎತ್ತ ನೋಡಿದರೆತ್ತ ಅವಳೇ.. ಈ ರೀತಿಗೆ ಯಾರು ಹೊಣೆ?

ವೃತ್ತಿ ಅವಳೇ, ಮನಸಳವಳೇ
ವೇಳೆ ಪರಿಯ ಮರೆಸಿದವಳೇ
ಮೂಕನಾಗಿ ಮಾಡಿದೋಳೆ
ಲಹರಿಯಲ್ಲಿ ನೂಕಿದೋಳೆ.. ಈ ಬದುಕಿಗೆ ಯಾರು ಹೊಣೆ?

ಬಿಸಿಲು ಅವಳೇ, ಮಳೆಯು ಅವಳೇ
ಗಾಳಿ ಗುಡುಗು ಎಲ್ಲ ಆವಳೇ
ಮುಖದ ತೊಗರು ಕಪ್ಪು ಅವಳೇ
ಕೊನೆಯ ಕ್ಷಣದ ನೆರಳು ಅವಳೇ.. ಈ ಪಾಡಿಗೆ ಯಾರು ಹೊಣೆ?

ಪುಸ್ತಕದಲೂ ಕುಂತಲವಳೇ
ಮಸ್ತಕದಲೂ ನಿಂತಲವಳೇ
ತುದಿ ಲೇಖನಿಯ ಉಗುಳು ಆವಳೇ
ಹಿಂದೆ ನಿಂತು ನಡೆಸಿದವಳೇ.. ಈ ಪರಿಗೆ ಯಾರು ಹೊಣೆ?

ಸ್ನೇಹದ ದಿನ


ಮುಗಿಲ ಕಡಲ ನಡುವೆ ಇಹುದು

ಮಧುರ ಪ್ರೀತಿ ಸ್ನೇಹವು
ಮುಗಿಲ ಹರಸಿ, ಮಳೆಯ ಸುರಿಸಿ
ಹರುಷ ತಂದ ರೀತಿಯು

ಅಲೆಯ ನಾಟ್ಯ, ಹಾವ ಭಾವ
ಮನಕೆ ತಂಪು ತಣಿಸಲು
ದೂರ ದಿಗಂತ ರೇಖೆ ಮೂಡಿ
ಒಂದುಗೂಡಿ ಹಾಡಲು

ಹೃದಯ ಮನೆಯ ಹೊಸ್ತಿಲಲ್ಲಿ
ಶಶಿಯ ಸೊಬಗು ನಿತ್ಯವು
ಹೂವ ಕಿರಣ ಅರಳಿ ಜಗಕೆ
ಬೆಳಕನಿಟ್ಟ ಸತ್ಯವು

ಇಳೆಯ ತನಕೆ ರಂಜಿಸುತಲಿ
ಸಾರುತಿಹವು ಹಕ್ಕಿಯು
ರೆಕ್ಕೆ ಕೆದರಿ ಭಾವ ಬಿರಿದು
ಚುಂಬಿಸುತಲಿ ಮೇಘವು

ಇರುಳಿನಲ್ಲಿ ಮೋಹಗೊಂಡು
ಚಂದ್ರ ಉದಯವಾಗಲು
ಒಂಟಿತನವ ಸ್ನೇಹ ಬಯಸಿ
ತಾರೆ ಗುಂಪು ಮಿನುಗಲು

ಬಳ್ಳಿಯಗಲ ಉದ್ದ ಹಬ್ಬಿ
ಮರದ ನೆರವು ಪಡೆಯಲು
ಬನದ ಕಂಪು ಇಚ್ಚಿಸುತಲಿ
ವನ್ಯಪ್ರಾಣಿ ಸೇರಲು

ರಮ್ಯವಿಹಂಗಮ ನೋಟವಿಹುದು
ಜಗದ ಗುಟ್ಟು ಅರಿಯಲು
ಒಂದಕೊಂದ ಬೆಸೆದ ಸ್ನೇಹ
ಬೆಲೆಯ ಕಟ್ಟಲಾಗದು

ಆತ್ಮೀಯ ಸ್ನೇಹಿತರೇ,ಆಗಸ್ಟ್ ೩, ೨೦೦೮ ವಿಶ್ವ ಗೆಳೆತನದ ಸಂಭೋಗದ ಅಪ್ಪುಗೆಯ ದಿನ. ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು ಮತ್ತಿನ್ನೆಲ್ಲೋ ಸೇರಿ ಬೆರೆತು ಒಬ್ಬರೊನ್ನೊಬ್ಬರನ್ನು ಅರಿತುಕೊಂಡು ಅಪ್ಪುಗೆಯ ಮೂಲಕ ಆಚರಿಸುವ ದಿನ. ಈ ಸುಮಧುರ ಕ್ಷಣಗಳಲ್ಲಿ ನಾನೊಬ್ಬ ಭಾವುಕ ಜೀವಿಯಾಗಿ ಎಲ್ಲರಿಗೂ ಸ್ನೇಹವೆಂಬ ಸಂಕೋಲೆಯಿಂದ ಬಂಧಿಸುತ್ತ ನನ್ನ ಯೋಚನಾಶಕ್ತಿಯ ಮೇರೆಗೆ ತಕ್ಕ ಮಟ್ಟಿಗೆ ಈ ಕವನದ ಮೂಲಕ ನಿಮ್ಮ ಹೃದಯದ ಗೂಡನ್ನು ಸೇರುತ್ತಿದ್ದೇನೆ.

ಬುದ್ಧಿಜೀವಿಗಳಾದ ನಾವು ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು ಗೆಳೆತನವೆಂಬ ಮಹಲ್ಲನ್ನು ಕಟ್ಟಿ ಮತ್ತಿನ್ನೆಲ್ಲೋ ತೆರಳಿ ಕೊನೆಗೊಂದು ದಿನ ಸದಾಕಾಲ ಮಂಜು ಮುಸುಕಿದ ಗೂಡಿನಂತೆ ದಿನಕಳೆದಂತೆ ಒಬ್ಬರನ್ನೊಬ್ಬರು ಮರೆತು ಬಿಡುತ್ತೇವೆ. ಈ ಜಗತ್ತಿನ ಅಂದರೆ ವರ್ತಮಾನ ಯುಗದ ಈ ಕ್ಷಣಗಳಲ್ಲಿ ಬುದ್ಧಿಜೀವಿಗಳಾದ ಮನುಷ್ಯನು ತನ್ನ ಉದ್ಧಾರತೆಗೆ ತನ್ನನ್ನು ತಾನು ತೊಡಗಿಸಿಕೊಳ್ಳುವಾತುರದಲ್ಲಿ ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ತು ಮತ್ಸರಗಳನ್ನು ಉಪಯೋಗಿಸಿಕೊಂಡು ಗೆಳೆತನವನ್ನು ಮರೆತು ಮುನ್ನುಗ್ಗುತ್ತಿದ್ದಾನೆ. ಪುಂಡಾಟಿಕೆಯ ಪುಂಡರಾಗಿದ್ದ ಆ ದಿನದ ಶಾಲಾ-ಕಾಲೇಜಿನ ವಯಸ್ಸಿನಲ್ಲಿ ನಾವಾಡಿದ ಆಟ-ಪಾಠಗಳು ಮಗದೊಮ್ಮೆ ಬರಬೇಕೆಂಬುದು ಸೋಜಿಗವಷ್ಟೇ ಆದರೂ ಹಳೆ ನೆನಪುಗಳನ್ನು ಮೆಲಕು ಹಾಕುತ್ತ ಕಾಲ ಕಳೆಯುತ್ತಿದ್ದೇವೆ. ಆದ್ದರಿಂದ ನಾ ನಿಮಗೆ ಕೇಳಿಕೊಳ್ಳುವುದೇನೆಂದರೆ ದಿನದ ೨೪ ಘಂಟೆಗಳಲ್ಲಿ ಕೇವಲ ೫ ನಿಮಿಷ ನಿಮ್ಮ ವಿಧ್ಯಾರ್ಥಿತನದ ಆ ಸವಿನೆನಪಿನ ದಿನಗಳನ್ನು ಒಂದು ಬಾರಿ ಯೋಚಿಸಿ ನೋಡಿ? ನಿಮ್ಮ ತರಗತಿಯಲ್ಲಿದ್ದ ಸುಮಾರು ೫೦ ಸ್ನೇಹಿತರಲ್ಲಿ ಈಗಲೂ ನಿಮ್ಮ ಹೃದಯದ ಹಾದಿಯಲ್ಲಿ ಅಲೆದಾಡುತ್ತಿರುವವರು ಎಷ್ಟು ಜನರೆಂಬುದು ನಿಮಗೇ ಅರ್ಥವಾಗುತ್ತದೆ.

ಈ ಕವನದ ಭಾವಾರ್ಥ:- ಆ ಭಗವಂತನಾದ ವಿಷ್ಣುದೇವನು ಪಂಚಭೂತ ಸ್ನೇಹಿತರಾದ ಪೃಥ್ವಿ, ಅಪ್ಪು, ತೇಜಸ್ಸು, ವಾಯು ಮತ್ತು ಆಕಾಶವೆಂಬುದನ್ನು ಹೇಗೆ ಸೃಷ್ಟಿಸಿದ್ದಾನೆ ಎಂದರೆ, ಮೊದಲಿಗೆ ಆ ಮುಗಿಲಿಗೂ ಕಡಲಿಗೂ ಎಷ್ಟು ಸ್ನೇಹವಿಹುದೆಂದರೆ ಕಡಲು ಯಾವ ಸಮಯಕ್ಕೂ ಬತ್ತದಿರಲೆಂದು ಸ್ನೇಹವ ಬಯಸಿ ಸದಾಕಾಲ ಮಳೆನೀರು ಸುರಿಸುವುದರ ಮೂಲಕ ತುಂಬಿ ತುಳುಕಿಸುತ್ತಿದ್ದಾನೆ. ಹಾಗೆಯೇ ಸ್ನೇಹ ಬಯಸಿದ "ಹನಿಹನಿಗೂಡಿದರೆ ಹಳ್ಳವೆಂಬಂತೆ" ಅಲೆಯು ತುಳುಕುತ್ತ ಮಧುರವಾದ ನಾಟ್ಯವಾಡಿ ಜುಳುಜುಳು ಎಂಬ ಗಾನಸುಧೆಯ ಹರಿಸಿ ಮನಕ್ಕೆ ಮುದನೀಡುತ್ತಿದ್ದಾನೆ. ಸಮುದ್ರದ ಮುಂಭಾಗದಲ್ಲಿ ನಿಂತು ವೀಕ್ಷಿಸಿದರೆ ಆ ದೂರ ದಿಗಂತ ರೇಖೆಯು ಒಟ್ಟುಗೂಡಿ ಮುಗಿಲು ಮತ್ತು ಕಡಲು ಒಂದೇ ದೇಹದಂತೆ ಭಾಸವಾಗುತ್ತದೆ. ಈ ಒಂದು ಅದ್ಭುತವಾದ ರಮ್ಯರಮಣೀಯ ನೋಟವ ಕಂಡು ಆಶ್ಚರ್ಯ ಚಕಿತನಾದ ಸೂರ್ಯನು ದಿಗಂತ ರೇಖೆಯಾದ ಆ ಹೃದಯಭಾಗದಲ್ಲಿ ಶಶಿಕಿರಣಗಳ ಚೆಲ್ಲುವುದರ ಮೂಲಕ ಜಗತ್ತಿಗೆ ಬೆಳಕನ್ನು ನೀಡಿ ಸ್ನೇಹದ ಮಟ್ಟವನ್ನು ಹೆಚ್ಚಿಸಿಕೊಳ್ಳುತ್ತಿದ್ದಾನೆ. ಇಂತಹ ನೋಟವನ್ನು ಕಂಡು ಬೆರಗಾದ ಬಾನಾಡಿಗಳು ಇವುಗಳ ಮಧ್ಯೆ ಒಂದುಗೂಡಿ ರೆಕ್ಕೆ ಕೆದರಿ ಭಾವ ಬಿರಿದು ಹಾರಾಡಿ ಊರಿಂದ ಊರಿಗೆ ತೆರಳಿ ಸ್ನೇಹದ ಪತಾಕೆಯನ್ನು ನೆಟ್ಟು ಅದರ ಮಹತ್ವರ್ವನ್ನು ಸಾರುತ್ತಿದ್ದೆ. ಚೆಂಡಿನಂತೆ ದುಂಡಾಗಿರುವ ಈ ಭೂಮಿಯಲ್ಲಿ ಆ ಸೂರ್ಯನ ಶಶಿಕಿರಣಗಳನ್ನು ಬಯಸಿ ವಿಶ್ರಾಂತಿದಾತನಾದ ಕತ್ತಲೆ ರಾಜನು ಚಂದ್ರ-ನಕ್ಷತ್ರಗಳನ್ನು ಪರಿಚಯಿಸುವುದರ ಮೂಲಕ ಸ್ನೇಹದ ತನವನ್ನು ತೋರಿಸಿಕೊಳ್ಳುತ್ತಿದ್ದಾನೆ. ಇದರಂತೆ ಬಳ್ಳಿಗಳೂ ಸಹ ತನ್ನ ಸ್ನೇಹಿತನಾದ ಮರದ ಆಶ್ರಯ ಪಡೆದು ತನ್ನ ಭಾರವನ್ನು ಹಂಚಿಕೊಳ್ಳುವ ಸಮಯದಲ್ಲಿ ಪ್ರಕೃತಿಯ ಕಂಪು ಸೊಬಗನು ಕಂಡು ಮೃಗ-ಖಗಗಳು ಒಂದಕ್ಕೊಂದು ಸ್ನೇಹವ ಹಂಚಿ ಮೆರೆದಾಡುತ್ತಿದೆ. ಈ ಒಂದು ಅದ್ಭುತವಾದ ರಮಣೀಯ ವಿಹಂಗಮ ನೋಟವನ್ನು ಕಂಡು ಬೆರಗಾದ ಮನುಷ್ಯಜೀವಿಗೆ ಇದರ ಗುಟ್ಟನ್ನೇ ಅರಿಯಲು ಅಸಾಧ್ಯವಾಗಿದೆ. ಇದರಲ್ಲಿ ನಮಗೆ ಕಾಣುವುದೇನೆನ್ದರೆ ಆ ಮುಗಿಲು ಸ್ನೇಹ ಬಯಸಿ ಕಡಲು, ಕಡಲ ಸ್ನೇಹ ಬಯಸಿ ಅಲೆಗಳ ನಾಟ್ಯ ಗಾನ, ಇದನೂ ಕಂಡು ಬೆರಗಾಗಿ ಆ ಶಶಿಕಿರಣದ ಬೆಳಕು, ಈ ಬೆಳಕಿನ ಸ್ನೇಹವ ಮಾಡಿ ಆ ಬಾನಾಡಿಗಳು ಇದರಂತೆ ಚಂದ್ರ, ನಕ್ಷತ್ರ, ಬಳ್ಳಿ ಮರ ಮತ್ತು ವನ್ಯ ಪ್ರಾಣಿಗಳು ಒಂದಕ್ಕೊಂದು ಸರಪಳಿಯಂತೆ ಸ್ನೇಹವ ಬಯಸಿ ಬದುಕುತ್ತಿರುವ ನಿಷ್ಕಲ್ಮಶ ಜೀವಿಗಳು. ನಮಗೂ ಇಂತಹ ಬದುಕು ಬೇಕಲ್ಲವೇ?

- ಧನ್ಯವಾದಗಳು

Wednesday, February 11, 2009

ಯಾರಿವಳು..?


ಕಂಪ ಸೂಸೋ ಹೊಳಪಿನವಳ

ಜಡೆಯು ನನ್ನ ಕುಕ್ಕಿದೆ

ಹಣೆಯ ಬೊಟ್ಟು ಭವ್ಯವಂತೆ

ಪೂರ್ಣ ಶಿಲೆಯ ಹಾಗಿಹೆ..


ಮುಡಿಯ ಹೂವು ಗಮಲು ಬಿಡುತ

ನನ್ನನಿಂದು ಸೆಳೆದಿದೆ

ಉಬ್ಬ ತುದಿಯ ವಾರೆ ನೋಟ

ಹೃದಯಕಿಂದು ಮುಟ್ಟಿದೆ


ಕಣ್ಣ ಕಪ್ಪು ಅಚ್ಚು ಮೆಚ್ಚು

ಕೊಂಚ ಮನವ ತಣಿಸಿದೆ

ತುಟಿಯ ಮೆಲ್ಲು ನಗೆಯು ನನ್ನ

ಬಾರಿ ಬಾರಿ ಮೀಟಿದೆ


ಹಲ್ಲು ಮುತ್ತು ರತ್ನದವಳ

ಏನೋ ಹೇಳಲಾಗಿದೆ

ನುಡಿವ ದನಿಗೆ ನನ್ನ ಮೌನ

ಕಟ್ಟು ಬಿಚ್ಚಿ ನಡೆಸಿದೆ


ಕತ್ತು ನವಿಲು, ಗಿಳಿಯ ಮೂಗು

ಗಾಳಿ ಮತ್ತನೆರಚಿದೆ

ಕೈಯ ಬಳೆಯ ಗಲುವ ನಾದ

ಹುಡುಕಿ ಅಲೆಯೋ ಹಾಗಿದೆ


ಎದೆಯ ಭಾರ ನನ್ನ ಪ್ರೀತಿ

ಹಾಗೆ ತೂಕ ಮಾಡಿದೆ

ಉದರ ಮುದ್ದೆ, ತುಪ್ಪದಂತೆ

ಅಪ್ಪಿ ಹಿತವ ಲೇಪಿದೆ.


ಟೊಂಕ ಶಿಲೆಯ ಕೆತ್ತಿದಾತ

ಮನಸು ಲೂಟಿ ಹೋಗಿದೆ

ನಡೆವ ಭಂಗಿ, ನಡುವ ರೀತಿ

ನಯನ ಹಿಡಿತ ಮೀರಿದೆ


ಮಡಿಲ ತೊಗಲು ಸ್ವರ್ಗದಂತೆ

ಕಿಚ್ಚು ಹತ್ತಿ ಉರಿದಿದೆ

ಹೆಜ್ಜೆ ಗುರುತು, ಗೆಜ್ಜೆ ಸಪಳ

ಎದೆಯ ಮೇಲೆ ಮೂಡಿದೆ


ಯಾರೇ ನೀನು ಚೆಲುವೆ ನನ್ನ

ಶಾಂತಿ ಭಂಗ ಮಾಡಿದೆ

ಎಲ್ಲಿ ನೀನೋ ಅಲ್ಲೇ ನಾನು

ಅಂತ ಮನವು ಹೇಳಿದೆ

Friday, February 6, 2009

ಚುನಾವಣೆ

೨೦೦೮ ರಂದು ಚುನಾವಣೆ ನಡೆಯುವ ಸಂದರ್ಭದಲ್ಲಿ ಬರೆದದ್ದು.

ನಮ್ಮೆಲ್ಲರ ಮತ ರಾಜ್ಯಕ್ಕೆ ಹಿತ

ನಮ್ಮೆಲ್ಲರ ಮತ ರಾಜ್ಯಕ್ಕೆ ಹಿತ

ಹಿತ ಮತಗಳ ಎಣಿಕೆಯಲ್ಲಿ

ಯಾರೊಡೆಯುವರು ಗೋತಾ?

ಹಣ ಹೊಸತು ಮನ ಹೊಸತು

ಯೋಜನೆಗಳೆಲ್ಲ ಹೊಸ ಹೊಸತು

ಹೊಸ ಕಥೆಗೆ ಹೊಸ ನಾಂದಿ

ಉಚಿತ ಕೊಡುಗೆಯಿದು ವಿಷ ಭ್ರಾ೦ದಿ



ಬರಿ ಹರಟೆ ಮಾತುಗಳು

ಕಿಸೆ ತುಂಬೋ ಕಾತುರಗಳು

ಮತ ನೀಡಿ ಮತ ನೀಡಿ

ನಮ್ಮೊಟ್ಟಿಗೆ ಮೆರೆದಾಡಿ



ಸೀರೆ ಕೊಡುವ, ಟಿ.ವಿ ಕೊಡುವ

ಪುಸ್ತಕದಲಿ ನೋಟನಿಡುವ

ಕಂತೆ ಕಂತೆ ಚೆಲ್ಲಿರಲು

ನಕಲಿಯೋಲೆ ಕೊಡಿಸಿ ಬಿಡುವ


ಬಯಸಿ ಬಂದ ಮಾತುಗಳಿವು

ಏಳಿಗೆಗೆ ದುಡಿಯುವೆವು

ಕೊಟ್ಟು ನೋಡಿ ನಿಮ್ಮ ಮತ

ನಾವ್ ಕೊಡುವೆವು ಜನಕೆ ಹಿತ

ನಮ್ಮ ಚಿಹ್ನೆ ಆನೆ

ಕುದುರೆ, ಒಂಟೆ ಬಾಲ

ತಿಳಿಯದಾಗಿ ಬಂದು ಹೋಯ್ತೆ

ಚುನಾವಣೆಯ ಪರಿಯ ಮೂಲ


ನೋಡುತಲೇ ಬರುತಿಹೆವು

ಹಲವು ವರುಷದಿಂದ ನಾವು

ಕಾಣದಾಗಿ ಬಂದು ಹೋಯ್ತೆ

ದುಡಿದುದಿಲ್ಲ ಕೊಂಚ ನೋವು..

Tuesday, February 3, 2009

ಮುಗಿಯದ ಪ್ರೀತಿ

ದೂರ ಸರಿ ನೀನ್ ಗೆಳತೀ ದೂರ ಸರಿ

ಇರುವ ಜಾಗದಿಂದೊಡನೆ ನೀನ್ ದೂರ ಸರಿ

ಎನ್ ಉಸಿರು ಸೊರಗಿ ಗಾಳಿಗರಸಿ

ಲೀನವಾದರೇನ್, ದಹಿಸಿ ಕರಗದಿರು ಮನ ಸಹಿಸಿ

ಎನ್ ಪ್ರೀತಿಯನ್ ಮರೆಮಾಚಿ, ಎಲೆಮರೆಕಾಯಿಯಂತಿರಿಸಿ

ಮಿನ್ ನೆನಪಿನಲೋಳ್ ಸಾವುಂಡರದಕೆಂದೇ ನಮಿಸಿ

ಪೂಜೆಗೈವೆನ್ ಆತ್ಮಭಾವನೆಯಿಂದೋಳ್ ನಿನಗಿರಿಸಿ

ಹೊಸ ಬಣ್ಣವನ್ ಸ್ವರ್ಗದಲಿ ತಂದು ನವ್ಯತೆಯನೊದಗಿಸಿ

ನೆಪಕಲ್ಲವಿಹುದೆನ್ ಪ್ರೀತಿ, ಹಿಂಟೆ ಗಂಟೆಗಳಿಗೂ ತರಿಸಿ

ಜ್ಞಾನಜ್ಯೋತಿಯನ್ ಇರಿಸಿ ಮನದಭಿಪ್ರಾಯವನ್ ತಿಳಿಸಿ

ಪ್ರೇಮಗುಡಿಯ ಬೆಳೆಸಿ ನಿನ್ ಇಡುವೆನ್ ಉಸಿರಿಸಿ

ಬಲು ಚಂದದೋಳ್ ಕರ್ಮ ಬದುಕಿನ ಮರ್ಮವನ್ ಉರಿಸಿ

- ಸುನಿಲ್ ಕುಮಾರ್.ಎನ್


ಓ ನನ್ನ ಗೆಳತಿ, ಸ್ನೇಹ ಮಾಡಿ ಪ್ರೀತಿ ಮಾಡಬಹುದು ಆದರೆ ಪ್ರೀತಿ ಮಾಡಿ ಸ್ನೇಹಿತರಾಗಬಹುದೇ.? ಇದೊಂದು ಅರ್ಥವಿಲ್ಲದ ಮಾತಾಗುತ್ತದೆ ಅಲ್ಲವೇ?. ಆದ್ದರಿಂದ ನಮ್ಮಿಬ್ಬರ ಸ್ನೇಹದ ಮಧ್ಯೆ ಬಂದ ಈ ಪ್ರೀತಿ ನಮ್ಮ ಭಾಂಧವ್ಯತೆಗೆ ಧಕ್ಕೆ ತರದಿರಲೆಂದು ಕಠಿಣ ನಿರ್ಧಾರವೊಂದನ್ನು ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ಪದೇ ಪದೇ ಸ್ನೇಹದ ಹೆಸರಿನಲ್ಲಿ ನೀನು ಬಂದು ನನ್ನನ್ನು ಮಾತನಾಡಿಸುವುದು, ಪದೇ ಪದೇ ಆ ನಿನ್ನ ನಿಷ್ಕಲ್ಮಶ ನಗು ನನ್ನನ್ನು ಈ ಹಾಳು ಪ್ರೀತಿಗೆ ನೂಕುವುದು, ಇವೆಲ್ಲ ರಂಪ ಬೇಡವೆಂದು ನಿರ್ಧರಿಸಿ ಆ ನಮ್ಮ ಸವಿ ನೆನಪಾದ ಕೆಲಕಾಲದ ಗೆಳೆತನವೇ ಅಮರವಾಗಲೆಂದು ಆಶಿಸಿ ನಿನ್ನಿಂದ ದೂರ ಸರಿಯುತ್ತಾ ನಿನಗಾಗಿ ಈ ಸಾಲುಗಳನ್ನು ಬರೆಯುತ್ತಿದ್ದೇನೆ. ಒಂದು ಬಾರಿ ಖೈದಿ ಸೆರೆಮನೆ ವಾಸವನ್ನು ಮುಗಿಸಿ ಬಂದ ನಂತರ ಅವನು ಎಷ್ಟೇ ಒಳ್ಳೆಯವನಾದರೂ ಹಿಂದೆ ಮಾಡಿದ ಹಳೆಯ ಕಪ್ಪು ಚುಕ್ಕೆ ಬಿಳಿ ಹಾಳೆಯ ಮೇಲೆ ಬಿದ್ದ ಕಲೆಯಂತಾಗಿ ಪದೇ ಪದೇ ನೆನಪಿಸುತ್ತದೆ. ಅದೇ ರೀತಿ ಒಮ್ಮೆ ಪ್ರೀತಿಯೆಂಬ ಮೋಹಕ್ಕೆ ಬಿದ್ದ ನನಗೆ ಮತ್ತೆ ಹಳೆಯ ಗೆಳೆಯನಂತಿರಲು ಆಗುತ್ತಿಲ್ಲ. ಆದುದರಿಂದ ಆದಷ್ಟೂ ಈ ನನ್ನ ಸ್ನೇಹದ ಒಡನಾಟದಿಂದ ದೂರವಿರು. ನೀನು ಹತ್ತಿರ, ಹತ್ತಿರ ಬರುತಿರಲು ಹೊತ್ತು ಉರಿಯುವುದು ಈ ಪ್ರೀತಿಯ ಹಸಿವು. ಬೇಡವೆಂದು ಎಷ್ಟೇ ನಿರ್ಧರಿಸಿದರೂ ಪ್ರೀತಿಯ ಪ್ರಪಾತಕ್ಕೆ ಬಿದ್ದು ಸೊರಗುವೆನು, ನಿನ್ನನ್ನೂ ಸೊರಗಿಸುವೆನು. ನನಗೆ ಈ ಒಂಟಿ ಪ್ರೀತಿಯೇ ಖುಷಿ ಕೊಟ್ಟಿದೆ.ಒಂದು ವೇಳೆ ನಿನ್ನ ನೆನಪಿನಲ್ಲಿ ಸೊರಗಿ ನನ್ನ ಉಸಿರು ಗಾಳಿಯಲಿ ಬೆರೆತು ಲೀನವಾದರೆ ದಯವಿಟ್ಟು ನನಗಾಗಿ ಯಾವುದೇ ರೀತಿಯ ಶೋಕದ ಸ್ಥಿತಿಯಲ್ಲಿ ಮುಳುಗಬೇಡ. ಪ್ರಾಣ ಇರುವಾಗಲೇ ಅರ್ಥಮಾಡಿಕೊಳ್ಳುವುದಕ್ಕೆ, ನೋಡುವುದಕ್ಕೆ ಬರದ ನೀವು, ಧೇಹ ನಿರ್ಜೀವಕ್ಕೆ ತಳೆದ ಮೇಲೆ ನೋಡುವುದು ತಪ್ಪಾಗುತ್ತದೆ. ನನಗೆ ಎಷ್ಟೇ ನೋವಾದರೂ ಪರವಾಗಿಲ್ಲ, ನನ್ನ ಪ್ರೀತಿಯನ್ನು ನನ್ನಲ್ಲೇ ಬಚ್ಚಿಟ್ಟುಕೊಂಡು, ಎಲೆಮರೆಕಾಯಿಯಂತಿರಿಸಿ ನಿನ್ನ ನೆನಪಿನಲ್ಲಿ ಸತ್ತರೆ ಆ ಸಿಹಿಘಳಿಗೆಗೆ ನಮಿಸುತ್ತಾ ಪೂಜೆಮಾಡುತ್ತ ಆತ್ಮ ಭಾವನೆಯಿಂದ, ನಿಷ್ಕಲ್ಮಶದಿಂದ ಲೋಕದಲ್ಲಿ ನಾವ್ಯಾರೂ ನೋಡದ ಬಣ್ಣವೊಂದನ್ನು ಸ್ವರ್ಗಕ್ಕೆ ತಂದು ಚುಕ್ಕೆ ಚಂದ್ರಮಕ್ಕೆ ನಿನ್ನ ಹೆಸರಿನಲ್ಲಿ ಪ್ರೀತಿಯೌತಣವನ್ನು ಬಡಿಸುತ್ತೇನೆ. ಗೆಳತಿ, ಈ ನನ್ನ ಪ್ರೀತಿ ಬರೀ ಕ್ಷಣಿಕವಲ್ಲ, ನೆಪಕೆಂದೇ ಮಾಡಿದ ಪ್ರೀತಿಯಂತೂ ಅಲ್ಲ. ಜನುಮದಲಿ ಜೊತೆಯಾದರೆ ಅದು ನಿನ್ನಲ್ಲೇ ಎಂದು ಇಚ್ಚಿಸಿದ್ದೆ. ಈ ನನ್ನ ಪ್ರೀತಿಯ ಘಾಢತೆಯನ್ನು ಬೆಲೆಯುಳ್ಳದ್ದು ಎಂದು ನಿರ್ಜೀವ ವಸ್ತುಗಳಾದ ಮಣ್ಣ ಕಣ ಕಣ ಹಿಂಟೆಗಳಿಗೂ, ದೇವಾಲಯದ ಘಂಟೆಗಳಿಗೂ ಸಾರುತ್ತಾ ಮಹತ್ವತೆಯ ಜ್ಞಾನ ಜ್ಯೋತಿಯನ್ನು ಇರಿಸುತ್ತ ಪ್ರೇಮ ಗುಡಿಯೊಂದನ್ನು ಕಟ್ಟಿ ಬಸಿದ ಉಸಿರಲಿ ನಿನ್ನ ನೆನಪಿನ ಛಾಯೆಯನ್ನಿಟ್ಟು ಚಂದದಲಿ ಅಲಂಕರಿಸಿ ಇದು ಪ್ರೀತಿಯ ಕರ್ಮವಲ್ಲ, ಇದು ಆ ದೇವರ ಆಶೀರ್ವಾದ ಎಂದು ಲೋಕಕ್ಕೆಲ್ಲ ಹೇಳುವೆ.

Thursday, January 29, 2009

ನಗು ತಂದ ನೀನು

ಮರೆತ ನಗುವನು ಮತ್ತೆ ನೆನಪಿಸಿ
ಬೆಳಕ ದಾರಿಯ ತೋರಿಹೆ
ಗೆಳತಿ ನಿನ್ನಯ ನಗುವೆ ಚೆಂದ
ಮಿನುಗುತೆದೆಯಲಿ ಜಿಗಿದಿಹೆ

ನಿನ್ನ ಕಾಣುವ ತವಕದಂಬಲ
ಸ್ನೇಹದೊಡಲಲಿ ಸ್ಮರಿಸಿಹೆ
ಹೆಜ್ಜೆ ಹೆಜ್ಜೆಗೂ ಗೆಲುವ ಸಾಧಿಸು
ಒಳಿತು ಕಾಣಲಿ ಬಯಸಿಹೆ

ಚಿಪ್ಪಿನೊಳಗಿನ ಮುತ್ತಿನಂತಿಹೆ

ಕಾಲವೆಮ್ಮನು ಕೂಡಿದೆ
ಕೊಂಬೆಯೊಂದರ ಕವಲು ನಾವು
ಜೊತೆಗೆ ಸಾಗುವ ಛಲವಿದೆ

ಯಾವ ಜನುಮದ ಉಳಿಕೆ ಕಾಣೆ

ಎನಗೆ ನೀನೂ ದೊರಕಿದೆ
ಉಸಿರು ಹೋದರು, ನಲಿವು ನಿಂತರೂ
ಬರುವೆ ಮುಂದಕೂ ಋಣವಿದೆ.

ಈ ಕವನದ ಭಾವಾರ್ಥ :- ಎಲ್ಲೋ ಹುಟ್ಟಿ, ಮತ್ತಿನ್ನೆಲ್ಲೋ ಬೆಳೆದು, ಧ್ವಂಧ್ವ ಬದುಕಿನಲ್ಲಿ ತುಸು ಸೊರಗಿ ಸಾಗುವಾಗ ಸಿಕ್ಕ ನೀನು ನನ್ನೆದೆಯನಾವರಿಸಿ ತಂದುಕೊಟ್ಟ ಖುಷಿಯ ನೆನಪೀಗ ಅಚ್ಚಿಳಿದು ಬೆಳಕು ಕಾಣುತ್ತಿದೆ. ಆ ನಿನ್ನ ನಿಷ್ಕಲ್ಮಶ ನಗುಧ್ವನಿಯೇ ಸಾಕಿಂದು ಬದುಕಿಗೆ ಸಂಪೂರ್ಣತೆಯ ಕೊಟ್ಟು ಸ್ಪೂರ್ತಿ ನೀಡಿ ಜಿಂಕೆಯ ಹಾಗೆ ಜಿಗಿದು ಮಿಂಚಿ ಓಡುತ್ತಿದೆ. ಮೊದಲು ಕಂಡ ಆ ಒಂದು ಗಳಿಗೆಯೇ ಸಾಕು ನನಗೆ ನಿನ್ನನ್ನು ಮತ್ತೆ ಮತ್ತೆ ನೋಡಬೇಕೆಂದು ಅನಿಸಿದರೂ, ಅನಿಸದೆ ಹೋದರೂ ಆ ನಮ್ಮ ಸ್ನೇಹದ ಸವಿನೆನಪನ್ನೇ ಸ್ಮರಿಸಿ ಲೀನನಾಗುತ್ತಿದ್ದೇನೆ. ಗೆಳತಿ, ನೀನು ಎಲ್ಲೇ ಇರೂ, ಹೇಗೆ ಇರೂ, ನೀನಿಡುವ ಹೆಜ್ಜೆಯ ಹಾದಿ ಸುಖಕರವಾಗಿ ಒಳಿತು ಕಾಣಲಿ ಎಂದು ಆಶಿಸುತ್ತೇನೆ.

ನಿನಗೆ ತಿಳಿದಿರಬಹುದು?, ಭೂಗರ್ಭದಲ್ಲಿ ಹೂತಿಟ್ಟ ಚಿನ್ನದ ಗಣಿಯಂತೆ, ಕಪ್ಪೆ ಚಿಪ್ಪಿನೊಳಗೆ ಮುಚ್ಚಿಟ್ಟ ಮುತ್ತಿನಂತಿರುವ ನಿನ್ನನ್ನು ಕಾಲ ಅನ್ನೋದು ಅಲೆಯ ಮುಖಾಂತರ ತೇಲಿಸಿ ನನಗಾಗಿ ದಡಸೇರಿಸಿದೆ. ಜೀವನ ಅನ್ನೋದು ಕವಲೊಡೆದ ಕೊಂಬೆಯಿದ್ದ ಹಾಗೆ. ನೀನು ನಾನು ಜೊತೆಯಲ್ಲಿಯೇ ಒಂದೇ ಪರಿಸರದ ಸಾಲಿನಲ್ಲಿ ಸಾಗುತ್ತಿರುತ್ತೇವೆ ಅನ್ನೋ ನಂಬಿಕೆ ನನಗಿದೆ.

ಬಹುಷಃ ಹಿಂದಿನ ಜನುಮದಲ್ಲಿ ನಿನ್ನ ಸ್ನೇಹದ ಋಣ ಮರೆತು ಹಾಗೆಯೇ ಬಿಟ್ಟು ಬಂದಿದ್ದೆ ಅಂತ ಅನ್ಸುತ್ತೆ, ಹಾಗಾಗಿ ಮತ್ತೆ ಅದರ ಭಾಗ್ಯ ನನಗೆ ಲಭಿಸಿದೆ. ಹೇಳುವುದಕ್ಕೆ ಇನ್ನೇನು ಇಲ್ಲ ಗೆಳತಿ, ಮತ್ತೆ ಮರೆತು ಈ ನನ್ನ ಉಸಿರು ಹೋದರೂ, ನಮ್ಮಿಬ್ಬರ ಸವಿ-ಭಾವನೆಗಳು ಅಳಿದರೂ ಮುಂದಿನ ಜನುಮಕ್ಕೂ ಬರುವೆ, ಬರುತ್ತಲೇ ಇರುತ್ತೇನೆ. ಸ್ನೇಹಿತನಾಗಿಯೇ ಉಳಿಯುತ್ತೇನೆ.

ಮಾತು ಬೆಳ್ಳಿ, ಮೌನ ಬಂಗಾರ

*ಒನ್ ಸೈಡ್ ಪ್ರೀತಿ :- ಪ್ರೀತಿಯೆಂಬುದು ನೀರಿರದ ಬಾವಿಯಂತೆ, ಜನ ತಿಳಿದು ತಿಳಿದೂ ಅಲ್ಲಿಗೆ ಧುಮುಕುತ್ತಾರೆ, ಆಳವಿದ್ದರೆ ಸಾವು, ಇಲ್ಲದಿದ್ದರೆ ನೋವು - ಸುನಿಲ್ ಕುಮಾರ್. ಎನ್
 _____________________________________________________
* "ಪ್ರೀತಿಯೆಂಬುದು ದೇಹ ಸ್ಪರ್ಶಕ್ಕಲ್ಲ, ಅದು ಹೃದಯ ಸ್ಪರ್ಶಕ್ಕೆ".
- ಸುನಿಲ್ ಕುಮಾರ್.ಎನ್
______________________________________________________

* "ಅಸಾಮಾನ್ಯ ಬುದ್ಧಿಗಿಂತಲೂ ಅದರ ಅಸಾಮಾನ್ಯ ಉಪಯೋಗ ಅಧಿಕ ಶ್ರೇಷ್ಠ" - ಲೋಕಮಾನ್ಯ ಬಾಲಗಂಗಾಧರ ತಿಲಕ್
______________________________________________________
* "ನರಿಯ ನೂರು ವರ್ಷಗಳ ಜೀವನಕ್ಕಿಂತ ಹುಲಿಯ ಒಂದು ದಿನದ ಜೀವನವು ಉತ್ತಮ.!" - ಮೈಸೂರು ಹುಲಿ ಟಿಪ್ಪು
______________________________________________________
* " ನಾನು ಪಾಪಿ ಎಂದು ಕುಗ್ಗುವುದಕ್ಕಿಂತ ಬೇರೆ ಮಹಾ ಪಾಪವು ಇನ್ನೊಂದಿಲ್ಲ.!ನಿರ್ಭಯತೆಯೇ ಜೀವನದ ರಹಸ್ಯ, ಮುಕ್ತಿಯೆಂದರೆ ಭಯದ ವಿನಾಶ" - ವಿವೇಕಾನಂದ ಸ್ವಾಮೀಜಿ

_____________________________________________________________
* "ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು"
- ಕುವೆಂಪು
_____________________________________________________________
* "ವ್ಯಕ್ತಿಯಿಂದ ಪ್ರಶಸ್ತಿಗೆ ಬೆಲೆಯೇ ಹೊರತು ಪ್ರಶಸ್ತಿಯಿಂದ ವ್ಯಕ್ತಿ ದೊಡ್ಡವನೆನಿಸುವುದಿಲ್ಲ"
- ಎಸ್.ಎಲ್. ಬೈರಪ್ಪ

______________________________________________________________
* ಅವರು ನನ್ನನ್ನು ಭಾರತದ ಪ್ರಧಾನಿ ಎಂದು ಕರೆಯುತ್ತಾರೆ. ಆದರೆ ಅವರು ನನ್ನನ್ನು ಭಾರತದ ಮೊಟ್ಟ ಮೊದಲ ಸೇವಕ ಎಂದು ಕರೆದರೆ ಉತ್ತಮವೆನಿಸುತ್ತದೆ - ಜವಹರಲಾಲ್ ನೆಹರು
_________________________________________________________
* ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ನೀಡುವೆ - ನೇತಾಜಿ ಸುಭಾಷ್ ಚಂದ್ರಬೋಸ್
__________________________________________________________
* ಏಳು, ಎದ್ದೇಳು, ಗುರಿ ಮುಟ್ಟುವ ತನಕ ನಿಲ್ಲದಿರು - ಸ್ವಾಮೀ ವಿವೇಕಾನಂದ
__________________________________________________________
* ಮಾನವ ಜನ್ಮ ದೊಡ್ಡದು, ಅದನ್ನು ಹಾಳು ಮಾಡಿಕೊಳ್ಳಬೇಡಿರೋ ಹುಚ್ಚಪ್ಪಗಳಿರಾ - ಪುರಂದರದಾಸರು
__________________________________________________________
* ವಿದ್ಯೆಯ ಹೊಳೆಯಲ್ಲಿ ಈಜಿದರೆ ದಡವೇ ಸಿಗುವುದಿಲ್ಲ - ಸ್ವಾಮೀ ವಿವೇಕಾನಂದ
__________________________________________________________
* ತೃಪ್ತಿ ಸಿಗುವುದು ಪ್ರಯತ್ನದಲ್ಲಿ, ಸಿದ್ಧಿಯಳಲ್ಲ - ಮಹಾತ್ಮ ಗಾಂಧೀ
__________________________________________________________
* ಮನುಷ್ಯನು ತಾನೇ ತನ್ನ ಆತ್ಮಶಿಲ್ಪಿ - ಷೇಕ್ಸ್ ಪಿಯರ್
__________________________________________________________
* ಜೀವನವನ್ನು ಧೂಷಿಸುವುದು ದೇವರನ್ನು ದೂಶಿಸಿದಂತೆ - ಸ್ವಾಮೀ ವಿವೇಕಾನಂದ
__________________________________________________________
* ಬದುಕು ಜಟಕಾ ಬಂಡಿ, ವಿಧಿ ಅದರ ಸಾಹೇಬ - ಡಿ.ವಿ.ಜಿ (ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ)
__________________________________________________________
* ಸತ್ಯವೇ ಸರ್ವಶ್ರೇಷ್ಠ ಧರ್ಮ, ಸತ್ಯಕ್ಕಿಂತ ದೊಡ್ಡದಾದ ಧರ್ಮವಿಲ್ಲ - ವಿನೋಬಾಭಾವೆ
__________________________________________________________
* ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ - ಕುವೆಂಪು
__________________________________________________________
* ಯಾರ ಆಸೆ ದೊಡ್ಡದೋ ಅವನೇ ದರಿದ್ರ - ಭರ್ತೃಹರಿ

________________________________________________________________

dow

ನನ್ನವಳಿಗಾಗಿ

ನಾನು ಬರೆವ ಕವನಗಳಲಿ ನಿನ್ನ ಪಾಲೆ ಹೆಚ್ಚು ಹೆಚ್ಚು
ನಿನ್ನ ತನವು ನಿನ್ನ ಮನವು ಕಣ್ಣ ಮುಂದೆ ತುಂಬಾ ಅಚ್ಚು
ಸಾಲುಗಳಿಗೆ ಕೊರತೆಯಿಲ್ಲ, ಬರೆದೆ ನಿನ್ನ ವರ್ಣಿಸೆಲ್ಲ
ಎಂತ ಮಧುರ, ಎಂತ ಮಧುರ, ನಿನ್ನ ಬಗೆಗೆ ಬರೆದುದೆಲ್ಲ..

ನೀನೆ ತಾನೆ ನನ್ನ ಕೀರ್ತಿ, ನೀನೆ ನನ್ನ ಪ್ರಾಣ ಸ್ಫೂರ್ತಿ
ಕೇಳೆ ಚೆಲುವೆ, ಕೇಳೆ ಒಲವೆ, ನಿನ್ನ ಮನವ ನಾನು ಗೆಲುವೆ
ಎಂದೂ ಬಿಡದ ಹಾದಿಯಿಹುದು, ಬಾಳ ಯಾನ ಸಾಗುತಿಹುದು
ದೈವ ಕೊಟ್ಟ ಶಕ್ತಿಯಲ್ಲಿ ಮನದ ಮಾತು ಕುಂದದಿಹುದು..

ವಿದ್ಯೆ ಕಲಿಯಲಿಲ್ಲ ನಾನು, ಅದಕೆ ಇಂತ ಕೋಪವೇನು?

ಎಲ್ಲ ದೈವ ಲೀಲೆಯು.. ಎಲ್ಲ ಅವನ ಲೀಲೆಯು
ಬಾಳ ಪುಟದಿ ಯಾವ ಬದುಕೋ, ಯಾವ ಕ್ಷಣದಿ ಯಾರ ಬೆಳಕೋ?
ಇಂದು ದಿನವು ಸತ್ಯವು.. ಸಿಗಲಿ ಒಳಿತು ನಿತ್ಯವೂ..

ಬರೆಯಲಿಲ್ಲವಲ್ಲ ನಾನು, ಕವಿಗಳಂತೆ ಕವಿತೆಯನ್ನು

ಹೇಳ ಪರಿಯೇ ತಿಳಿಯದು.. ಹೇಳ ಪರಿಯೇ ತಿಳಿಯದು..
ಆದರೇಕೋ ಇಂಥ ಮೋಹ, ಪುಟದಿ ಗೀಚೊ ಪೂರ್ಣ ದಾಹ
ಹಾಳೆ ತುಂಬ ಬರೆದುದು.. ನಿನ್ನ ಬಗೆಗೆ ಬರೆದುದು..

ಬರೆದ ಕವನ ಮೌನವಾಗಿ, ನಿನ್ನ ಮನದ ಕದಕೆ ತಾಗಿ

ಒಂದು ದಿನವು ಸೇರ್ಪುದು.. ಮನದ ಕೋಣೆ ಸೇರ್ಪುದು
ಹಸಿರು ಪ್ರೀತಿ ಚಿಗುರಪೊರೆದು, ಮೊಗ್ಗಿನಲ್ಲಿ ನಗುವ ಬಿರಿದು
ನನ್ನ ಕಾದು ಕುಳಿಪುದು.. ದಾರಿ ಕಾದು ಕುಳಿಪುದು..

Wednesday, January 28, 2009

ಮೈಸೂರಲ್ಲೊಂದು ದಿನ



ಒಮ್ಮೆ ನನ್ನ ಲೋಕಕ್ಕೂ ಬನ್ನಿ ಗೆಳೆಯರೇ .....!!!!

ಜನ..ಜನ.. ಜನ.. ಎಲ್ಲೆಲ್ಲಿ ನೋಡಿದರೂ ಜನ. ಅದರಲ್ಲೂ ಬೆಂಗಳೂರಿಗೆ ಒಮ್ಮೆ ಬಂದು ನೋಡಿದರೆ ಹೃದ್ರೋಗಿಗಳಿಗೆ ಕೂಡಲೇ ಸಾವು ಬರುವುದು ನಿಶ್ಚಿತ. ಆ ಟ್ರಾಫ್ಫಿಕ್ಕೂ, ಆ ಹೊಗೆ, ಆ ಶಬ್ದ ಮಾಲಿನ್ಯ, ಸರ್ಕಾರದವರು ಎಷ್ಟು ಬಸ್ಸುಗಳನ್ನು ಬಿಟ್ಟರೂ ಜೋತು ಬೀಳುವ ಜನ, ನೆನಪಿಸಿಕೊಂಡರೆ ಮತ್ತ್ಯಾವ ಜನ್ಮದಲ್ಲೂ ಬೆಂಗಳೂರಿಗೆ ಬರಬಾರದು ಅಂತ ಅನ್ಸುತ್ತೆ. ಅದರಲ್ಲೂ ಕನ್ನಡಿಗರಿಗಿಂತ ಯು.ಪಿ.ವಾಲಾಗಳು, ತೆಲಗುವಾಲಾಗಳು, ತಮಿಳುವಾಲಾಗಳು, ಕೇರಳವಾಲಾಗಳೇ ಹೆಚ್ಚು. ಇದೊಂದು ಮಿಶ್ರಿತ ಕುಟುಂಬ ಅಂದರೆ ಬೆಂಗಳೂರಿಗೊಂದು ಅರ್ಥ. ಸದ್ದು-ಗದ್ದಲ ಮಾಡಿಕೊಂಡು ನಿಂತ ನಿಂತ ಜಾಗದಲ್ಲಿ ಗಾಂಜಾ-ಅಫೀಮು, ಚುಟ್ಟ ಅಗಿದು ರಸವನ್ನು ಹೊರಗೆ ಹಾಕಿ ಯು.ಪಿ.ವಾಲಾಗಳು ಗಬ್ಬೆದ್ದಿಸಿದರೆ, ಒಬ್ಬೊಬ್ಬರೂ ಒಂದೊಂದು ಶೈಲಿಯಲ್ಲಿ ಕುಲಗೆಡಿಸುತ್ತಿದ್ದಾರೆ.

ತಾನು, ತನ್ನದು, ತನಗಾಗಿ, ತನಗೋಸ್ಕರವೆಂದು ಬದುಕುವ ಬಿಡುವಿಲ್ಲದ ಅವಿರತದ ಜೀವನದಲ್ಲಿ ಎಂತವನಿಗಾದರೂ ಒಂದು ಕ್ಷಣ ಎಲ್ಲೋ ಒಂದು ಕಡೆ ತನ್ನ ತಂದೆ-ತಾಯಿಯ ಜೊತೆ, ಅಥವಾ ತನ್ನ ಹೆಂಡತಿ-ಮಕ್ಕಳ ಜೊತೆ, ಅಥವಾ ಇನ್ನೂ ಮದುವೆಯಾಗಿಲ್ಲದ ತರುಣರಿಗೆ ತನ್ನ ಸ್ನೇಹಿತರ ಜೊತೆ ಕೆಲಕಾಲ ತಮ್ಮೊಳಗಿನ ಭಾವ ಪ್ರತಿನಿಧಿಗಳಾದ ಕನಸುಗಳನ್ನು ಹಂಚಿಕೊಳ್ಳಬೇಕೆಂದು ಆಸೆಯಿರುತ್ತದೆ. ಅದೇ ರೀತಿ ಎನ್ನೆದೆಯಾಳದ ಸ್ನೇಹಸದನದೊಳು ಬಣ್ಣ ತುಂಬಿ ತಂಪಿಟ್ಟ ಕೆಲ ಸ್ನೇಹಿತರೆಲ್ಲರೂ ಸೇರಿ ನಮ್ಮದೇ ರಾಜ್ಯವಾದ, ಅದರಲ್ಲೋ ನಮ್ಮದೇ ನಗರವಾದ ಅದ್ಭುತ, ಪ್ರಶಾಂತ, ಸುಂದರ ಬಣ್ಣದ ನಗರಿಯಾದ ಮೈಸೂರನ್ನು ವಿಹರಿಸಲೆಂದು ನಿರ್ದಿಷ್ಟವಾದ ನಿರೀಕ್ಷೆಯ ನಿರ್ಧಾರವನ್ನು ತೆಗೆದುಕೊಂಡೆವು...

ಅಂದು ದಿನಾಂಕ ೧/೧೧/೦೮, ನಮ್ಮ ನಾಡಿನ ಭಾವೈಕ್ಯತೆ ಬೀರುವ ಎಲ್ಲರ ಹೃದಯ ಕಮಲದೊಳು ತಾಯಿ ಭುವನೇಶ್ವರಿಯ ಹೆಸರನ್ನು ಪಟಿಸುತ್ತ ವಿಜೃಂಭಣೆಯಿಂದ ಆಚರಣೆ ಮಾಡಿದ ಹಬ್ಬ ಕನ್ನಡ ರಾಜ್ಯೋತ್ಸವ. ಆಗ ಬೆಳಿಗ್ಗೆ ಸಮಯ ೯.೦೦ಆಗಿತ್ತು. ನಾನಿನ್ನೂ ಬೆಂಗಳೂರಿನಲ್ಲಿಯೇ ನನ್ನ ಮನೆಯೊಳಗೆ ದರ್ಪಣದ ಮುಂದೆ ನಿಂತು ತಲೆ ಬಾಚುತ್ತ ಕುಳಿತಿದ್ದೆ. ಸಮಯಕ್ಕೆ ಸರಿಯಾಗಿ ಪಾಯಸಕ್ಕೆ ಬಿದ್ದ ನೊಣದಂತೆ ನನ್ನನ್ನು ಊರೆಡೆಗೆ ಎಳೆದೊಯ್ಯಲು ಒಂದು ಕರೆ ಬಂತು. ಕರೆ ಮಾಡಿದ ತರುಣ ಕುಮಾರ. ಮನಸಿಲ್ಲದ ಮನಸ್ಸಿನಲ್ಲಿ ಕೊನೆಗೂ ಕರೆ ಸ್ವೀಕರಿಸಿ ಹಲೋ... ಕುಮಾರ್ ಎಂದೆ.. (ಹಿಂದಿನ ದಿನವಷ್ಟೇ ನಾನು ನಾಳೆ ಸಂಪೂರ್ಣ ಕನ್ನಡದಲ್ಲೇ ಮಾತನಾಡಬೇಕೆಂದುಕೊಂಡಿದ್ದು, ನಿರಂತರ ಬದುಕಿನ ದಿನನಿತ್ಯದ ಬಳಕೆಯ ಮಾತಿನಂತೆ ಮೊತ್ತ ಮೊದಲೇ "ಹಲೋ" ಎಂಬ ಆಂಗ್ಲ ಭಾಷೆಯನ್ನು ಸ್ಪಟಿಸಿಬಿಟ್ಟೆ. ಇನ್ನೇನು....? ಸ್ವಲ್ಪ ಕದ್ದರೂ ಕಳ್ಳನೇ , ಹೆಚ್ಚು ಕದ್ದರೂ ಕಳ್ಳನೇ ಎಂದು ಕನ್ನಡಾಂಗ್ಲವನ್ನು ಮಿಶ್ರಿಸಿ ಮಾತನಾಡಲು ಶುರುಮಾಡಿ ಬಿಟ್ಟೆ).


ಕುಮಾರ :- "ರಾಜ್ಯೋತ್ಸವ ಹಬ್ಬದ ಶುಭಾಶಯಗಳು"


ನಾನು :- ನಿಮಗೂ ನನ್ನ ಕಡೆಯಿಂದ ಶುಭಾಶಯಗಳು


ಕುಮಾರ :- ಏನ್ ಸಾರ್, ಇನ್ನೂ ಹೊರಟಿಲ್ವ? ನಾನಾಗಲೇ mejestic ನಲ್ಲಿ ಇದ್ದೇನೆ. ಈಗ satellite ಗೆ ಹೊರಟಿದ್ದೇನೆ. ಏನ್ ಮಾಡತಾಯಿದ್ದೀರಾ?


ನಾನು :- ಹೊರಟೆ ಕುಮಾರ್. ನಿನ್ನ ಹಿಂದೆಯೇ ಹಿ೦ಬಾಲಿಸುತ್ತೆನೆ. ನೀನು ಹೊರಟಿರು ಎಂದು ಫೋನ್ ಕಟ್ ಮಾಡಿದೆ.ಇತ್ತ ನಾನು ಚಾರಣಿಗನಾಗಿ ಮೈಸೂರಿಗೆ ಹೋಗುವ ವಿಷಯ ಹಿಂದಿನ ದಿನದಷ್ಟರಲ್ಲಿಯೇ ನಾನು ನನ್ನ ತಂದೆ-ತಾಯಿಗೆ ವಿಷಯ ತಿಳಿಸಿದ್ದೆ. ಇಬ್ಬರೂ ಮೌನದಲ್ಲಿಯೇ ಒಪ್ಪಿಗೆ ಸೂಚಿಸಿದ್ದರು. ಆದರೆ ಆ ದಿನ ಬೆಳಿಗ್ಗೆ ಅದೇನಾಯಿತೋ ಏನೋ.. ನನ್ನಪ್ಪ ಬೈಗುಳ ಕಿತ್ತಿದ್ದರು. "ಎಲ್ಲವೂ ಸುಮ್ಮನೇ ದುಡ್ಡು ಖರ್ಚು ಮಾಡಲು ಹೋಗುತ್ತಿದ್ದೀಯಾ" ಎಂದು ಹೇಳಿದ್ದರು. ಅದೇ ಸಪ್ಪೆ ಮೋರೆ ಹಾಕಿಕೊಂಡು ಹೊರಟ ನಾನು ಸಿಟಿ ಬಸ್ ಹಿಡಿದು ಮೆಜೆಸ್ಟಿಕ್ ತಲುಪುವಾಗ ಸಮಯ ಸರಿಯಾಗಿ ೧೦.೩೦ಆಗಿಹೋಗಿತ್ತು. ನಮ್ಮೂರ ತರುಣ ಹೈಕಳ ನೋಡಲೊರಟ ತರಾತುರಿಯಲ್ಲಿದ್ದ ನನಗೆ ಸಮಯ ಜೊತೆ ಬಸ್ ಕೈಕೊಟ್ಟಿತ್ತು. ಮೆಜೆಸ್ಟಿಕ್ ನಿಂದ ಚಾಮರಾಜನಗರ ವಯಾ ಕೊಳ್ಳೇಗಾಲಕ್ಕೆ ಒಂದು ಬಸ್ಸೂ ಇರಲಿಲ್ಲ. ಮಂದಗತಿಯ ಮುಖಮಾಡಿ ಮೊನಚಿಟ್ಟ ಚಿಗುರಂತೆ ಪಕ್ಕದಲ್ಲೇ ಇದ್ದ ಗೋಡೆಗೆ ಒರಗಿ ಆಸುಪಾಸಿನಲ್ಲಿ ಓಡಾಡುತ್ತಿದ್ದ ತರುಣಿಯರನ್ನು ಗಮನಿಸುತ್ತಾ ನಿಂತುಕೊಂಡೆ. ಅದೇ ಸಮಯಕ್ಕೆ ಅಲ್ಲೇಲ್ಲೋ ಕ್ಯಾಂಟೀನ್‌ನಲ್ಲಿ ಕಾಫೀ-ಟೀ ಕುಡಿಯುತ್ತಿದ್ದ ಇಬ್ಬರು ಪೋಲಿಸರು ಹರಿಬರಿಯಲ್ಲಿ ತನ್ನ ಆಫೀಸರ್ ಬಂದರೆಂಬ ಭಯಕ್ಕೆ ಓಡೋಡಿ ಬಂದು ಮೇಲ್ಮನೆ (ಮೇಲ್ಸೇತುವೆ) ಇಂದ ಇಳಿದು ಬರುತ್ತಿದ್ದ ಪ್ರಯಾಣಿಕರ ಬ್ಯಾಗುಗಳನ್ನು ಶೋಧಿಸಲು ಮುಂದಾದರು. ನಿಮಗೆ ಗೊತ್ತಲ್ಲ, ಎತ್ತ ನೋಡಿದರೂ ಬಾಂಬ್ ಬಾಂಬ್ ಬಾಂಬ್...ಸಮಯ ೧೦.೫೦ ಆಯಿತು. ಇನ್ನೂ ಒಂದು ಬಸ್ಸೂ ಬಂದಿಲ್ಲ. ಶನಿವಾರ ಬೇರೆ. ಕನ್ನಡ ರಾಜ್ಯೋತ್ಸವದ ಕಹಳೆಯ ರಜಾ.. ಹಿಬ್ಬೆರಗುಗೊಳಿಸುವಂತಹ ಜನ ಸ೦ಧಣಿ. ಇನ್ನು ಸೀಟು ಗಿಟ್ಟಿಸಿಕೊಳ್ಳಲು ಎಲ್ಲರೂ ತನ್ನ ತನ್ನ ಸಾಹಸ ಪ್ರೌಢಮೆಯನ್ನು ನಿಂತಲ್ಲೇ ವೈರಿಯನ್ನು ಬಡಿದೋಡಿಸುವ ಸೈನಿಕರಂತೆ ಪ್ರದರ್ಶಿಸುತ್ತಿದ್ದರು. ನಾನಂತೂ ಗಲ್ಲದ ಮೇಲೆ ಕೈಹಾಕಿ "ಬಸ್ ಬರಲಿ, ಮುಂದಕ್ ಇದೆ ಮಾರೀ ಹಬ್ಬ" ಅಂತ ಕುಳಿತಿದ್ದೆ. ಕೊನೆಗೂ ಎಲ್ಲೋ ಬಿರುಬಿಸಿಲಿನಲ್ಲಿ ಧೂಳೆಬ್ಬಿಸಿ ತನ್ನ ಮೈಮನಸ್ಸನ್ನೆಲ್ಲಾ ಕೊಳೆ ಮಾಡಿಕೊಂಡು ಎದ್ದೂ-ಬಿದ್ದೂ ಓಡೋಡಿ ಬಂದಂತೆ ಕೊಳ್ಳೇಗಾಲದ ಬಸ್ಸೊಂದು ಏದುಸಿರು ಬಿಟ್ಟುಕೊಂಡು ಬಂದು ನಿಂತಿತು. ಅಲ್ಲಿಯವರೆಗೂ ಜನ ಒಬ್ಬರನ್ನೊಬ್ಬರು ಮಿಕಮಿಕನೆ ನೋಡುತ್ತಿದ್ದವರು ಮೈಮೇಲೆ ದೇವರೇ ಬಂದಂತೆ ತನ್ನ ತನ್ನ ಬ್ಯಾಗು ಲಗೇಜುಗಳನ್ನು ಎತ್ತಿಕೊಂಡು ಸೀಟು ಹಿಡಿಯಲು ಸಜ್ಜಾದರು. ನಿಂತ ಬಸ್ಸಿನ ಕಿಟಕಿಯಿಂದ ತಾವು ತಂದಿದ್ದಂತಹ ಬ್ಯಾಗು, ಕರವಸ್ತ್ರಗಳನ್ನು ಇಟ್ಟು ರಿಸರ್ವ್ ಮಾಡಿಕೊಂಡರು. ಇನ್ನೂ ಕೆಲವು ಬುದ್ಧಿವಂತರು ಡ್ರೈವರ್ ಸೀಟಿನ ಬಾಗಿಲಿನಿಂದಲೇ ಹತ್ತಿ ಲಗ್ಗೆ ಇಟ್ಟಿದ್ದರು. ನಾನು ಹೇಗೋ ಹಾಗೂ-ಹೀಗೂ ನನ್ನ ಬ್ಯಾಗನ್ನು ಇಟ್ಟು ರಿಸರ್ವ್ ಮಾಡಿಬಿಟ್ಟೆ.

ಮೊದಲೇ ಬೆಂಗಳೂರಿನಲ್ಲಿ ಆಮ್ಲಜನಕದ ಕೊರತೆ.. ಇನ್ನು ಕುರಿ ದೊಡ್ಡಿಯಲ್ಲಿ ತುಂಬಿದ ಕುರಿಗಳಂತೆ ಕುಳಿತಿದ್ದ ನಮಗೆ ಉಸಿರಾಡಲು ಒಂದಿಷ್ಟೂ ಗಾಳಿ ಸಿಗಲಿಲ್ಲ. ಇನ್ನೇನು ಮಾಡುವುದು? ಎಲ್ಲರೂ ಹೊಂದಿಕೊಂಡು ಹೋಗಬೇಕು ಎಂದು ಕುಳಿತಿರಲು, ಮತ್ತೊಂದು ಬಸ್ ೧೧.೩೫ಕ್ಕೆ ಹೊರಡುವುದಾಗಿ ಹೇಳಿ ಬಂದು ನಿಂತಿತು. ಅಬ್ಬಾ.. ಆ ಕ್ಷಣದಲ್ಲಿ ಎಷ್ಟೋ ಜನ ನಿಂತಿದ್ದವರು ಜಾಗ ಖಾಲಿ ಮಾಡಿದರು. ಕಿಟಕಿಯ ಬಳಿ ಕುಳಿತಿದ್ದ ನನಗೆ ಮೊದಮೊದಲೇ ಇದ್ದಕ್ಕಿದ್ದ ಹಾಗೆ ನಿದ್ರಾದೇವತೆ ಬಂದು ಅವರಿಸಿದ್ದಳು. ರಾಮನಗರ - ಮದ್ದೂರು ಅಂತರದವರೆಗೂ ಚೆನ್ನಾಗಿ ನಿದ್ರೆಯ ಸಾಲ ಮುಗಿಸಿ ಅವಳಿಗೆ ತಾಂಬೂಲ ಕೊಟ್ಟು ಕಳುಹಿಸಿದೆ.. ಏಕೆಂದರೆ ಬೆಂಗಳೂರಿಂದ ಮದ್ದೂರಿನವರೆಗೂ ರಸ್ತೆ ತುಂಬಾ ಚೆನ್ನಾಗಿದೆ. ಇನ್ನು ನಿದ್ರೆ ಬರದೇ ಇರುತ್ತದೆಯೇ? ಮದ್ದೂರಿನ ನಂತರ ನೀವು ಎಷ್ಟೇ ನಿದ್ರೆ ಮಾಡಲು ಪ್ರಯತ್ನಿಸಿದರೂ ಅದು ಬರಲು ಸಾಧ್ಯವೇ ಆಗುವುದಿಲ್ಲ. ಮದ್ದೂರಿಂದ ಕೊಳ್ಳೇಗಾಲದವರೆಗೂ ಬರೇ ಹಳ್ಳ ದಿಣ್ಣೆ ಧೂಳಿಡಿದು ಕುಳಿತಿರುವ ಮರ-ಗಿಡಗಳ ಪರಿಚಯ ಅಷ್ಟೇ. ಕಿಟಕಿಯನೊರಗಿ ಬಿಟ್ಟ ಕಣ್ಣಲ್ಲಿ ಹಾಗೆಯೇ ದಿಟ್ಟಿಸಿ ಹೊರ ಪ್ರಪಂಚ ನೋಡುತ್ತ ಮೈಮರೆತೆ.


ಮದ್ದೂರು-ನಗರದವರೆಗೂ ಧೂಳಿನ ಶಿಖರಗಳು


ಎಡೆಬಿಡದೆ ಉದುರುತಿತ್ತು ಎಮ್ಮೊಳ ಹೊಕ್ಕಲು


ರಸ್ತೆಯ ತುಂಬಾ ಬರೀ ಹಳ್ಳಕೊಳ್ಳದ ದರಬಾರು


ವರುಷಗಳು ಉರುಳಿದರೂ ಮಾಸಿಲ್ಲ ಆ ಸೌಂದರ್ಯದ ಕರಾರು




ತಂಪಿಟ್ಟ ತೊರೆಗಳಲ್ಲಿ ಬೆಳ್ಳಕ್ಕಿಯ ದಂಡುಗಳ ಸಾಲು


ಹಾರುತ್ತ ನಲಿಯುತ್ತ ಹೆಕ್ಕುವುದರೊಳು ತಯಾರು


ತುಸುಹಿಡಿಯ ಮೀನುಗಳದಕೆ ನುಂಗಿತ್ತು ಸುಮಾರು


ಇಡಬಹುದಿತ್ತಲ್ಲವೇ ನಾವ್, ನಗರದೊಳಗೊಂದು ಬಜಾರು?




ಕ್ಷಣನಿಮಿಷದಾವೂಟ ತೇಗುತ್ತ ಮರೆಯಾಯ್ತು ನೂರಾರು


ತಿಳಿಯಲಿಲ್ಲವೆನಗೆ ಬಸ್ಸೊಳಗೊ೦ದಿತ್ತು ಪುಕಾರು


ಶಪಿಸಿದ್ದರು ಚಾಲಕನಿಗೆ ಓಡಿಸುವುದೇ ಹೊ೦ದೇರು


ಆಗಿರಲಿಲ್ಲವಲ್ಲ ಆ ದಿನಗಳಲ್ಲಿ ಮುಂಗಾರು?




ಹೊ೦ದೇರು - ಚಿನ್ನದ ರಥ




ಹೀಗೆ ನನ್ನ ಮನಸಿನ ಪಾತ್ರೆಯೊಳಗೆ ಭಾವನೆಯ ಬಿಸಿನೀರು ಕುದಿಯುವಂತೆ, ಉಕ್ಕುವ ಮಾತುಗಳನ್ನು ಅದುಮಿಟ್ಟು ಕೊಳ್ಳೇಗಾಲ ತಲುಪಿದೆ. ಆಗ ಸಮಯ ಸುಮಾರು ೨.೩೦ ಮಟ ಮಟ ಮಧ್ಯಾಹ್ನವಾಗಿತ್ತು. ಬರೇ ಧೂಳನ್ನೇ ಕುಡಿದು ಹೊಟ್ಟೆ ತುಂಬಿಸಿಕೊಂಡಿದ್ದ ನನಗೆ ಊಟದ ಅವಶ್ಯಕತೆಯೇನೂ ಅಷ್ಟಿರಲಿಲ್ಲ. ನನಗಾಗಿ ನಗರಕ್ಕೆ ಖಾಸಗೀ ಬಸ್‌ಸೊಂದು ಕಾಯುತ್ತಿತ್ತು. ಹೊಟ್ಟೆಯಲ್ಲಿದ್ದ ಧೂಳು ದೃಢವಾಗಿ ಅಂಟದಿರಲಿ ಎಂದು ಒಂದು "ಸಿಪ್" ಮಾವಿನ ರಸ ಕುಡಿದು ಬಸ್ ಹತ್ತಿ ಹೊರಟೆ. ಇಲ್ಲಿಂದ ಶುರುವಾಯಿತು ನೋಡಿ ನಮ್ಮೂರಿನ ವೇಷಭೂಷಣ, ಭಾಷಾ ಶೈಲಿಯ ಗತ್ತು ಗಮ್ಮತ್ತುಗಳು. ನಾನು ನೋಡಿ ಕೇಳಿರುವ ಮಟ್ಟಿಗೆ ಪ್ರತಿಯೊಂದು ಸ್ಥಳದಿಂದ ಸುಮಾರು ೨೫-೩೦ಕಿ.ಮೀ ದೂರದ ಸ್ಥಳದಲ್ಲಿ ವಾಸಿಸುವ ಜನರಿಗೆ ತನ್ನದೇ ಆದ ಸಮೂಹಾನುಸಮೂಹವಾಗಿ ಮಾತಿನ ಶೈಲಿ, ವೇಷಗಳು ಬದಲಾಗಿರುತ್ತದೆ. ಹಾಗೆಯೇ ಮಂಡ್ಯ-ಮದ್ದೂರಿನ ಜನರು ಎಲ್ಲಾ ಮಾತಿನ ಕೊನೆಯ ಸಾಲಿನಲ್ಲಿ "ಏನ್ಲ" "ಹೋಗ್ಲ" "ಬಾರ್‍ಲ""ಸುಮ್ಕಿರು" ಎಂದು ಉಚ್ಚಾರಣೆ ಮಾಡಿದರೆ, ನಮ್ಮೂರೈಕ್ಳು "ಯ್ಯಾನುಡಾ ಅದೂ" ಹೋಗುಡಾ""ಬಾರುಡಾ" ಎಂದು ಮಾತನಾಡಲು ಶುರುಮಾಡಿದ್ದರು. ನನಗೂ ನಮ್ಮೂರಿನ ವಾಸನೆ, ನಮ್ಮೂರಿನ ಸೊಗಡು, ನಮ್ಮೂರಿನ ಜನ ಕಂಡು ತುಂಬಾ ದಿನವಾದ್ದರಿಂದ ಅವರ ಮಾತಿನ ಧಾಟಿ ಸ್ವಲ್ಪ ನನ್ನ ಕಿವಿಗಳಿಗೆ ಮೃದುವಾಗಿ ಹಿತನೀಡಿತ್ತು. ಬಸ್ ಹತ್ತಿ ಕುಳಿತ ನನಗೆ "ತನ್ನದೇ ಆದ ಲೋಕದಲ್ಲಿ ನಿಂತು ಮೈಮರೆತಿದ್ದ ಒಬ್ಬ ಯುವಕನನ್ನು ನೋಡಿ ಆಶ್ಚರ್ಯಚಕಿತನಾದೆ. ಆಗ ಸಮಯ ೨.೩೦ ಎಂದಿದ್ದೆನಲ್ಲಾ., ಕಾಲೇಜು ಬಿಟ್ಟ ಸಮಯ. ನಾನು ಕುಳಿತ ಬಸ್ಸಿನಲ್ಲಿ ನನ್ನ ಮುಂದೆಯೇ ಒಂದಿಬ್ಬರು ಮೂವರು ಹುಡುಗಿಯರು (ನಟನಾಮಣಿಗಳು) ಕುಳಿತು ಮಾತಿನಲ್ಲಿ ಮಗ್ನರಾಗಿದ್ದರು. ಈ ಹೈದನಿಗೆ ಏನಾಯ್ತೋ, ಬಸ್ಸಿನಲ್ಲಿ ಅಷ್ಟು ಖಾಲೀ ಸೀಟುಗಳಿದ್ದರೂ ಕುಳಿತುಕೊಳ್ಳದೇ ಬಾಗಿಲ ಬಳಿ ನಿಂತು ಹುಡುಗಿಯರ ನೋಡಿ "ಫೋಜು" ಕೊಡುತ್ತಿದ್ದ. ಬಹುಶಹ "ಸಿಕ್ಕರೆ ಯಾರಾದರೂ ಸಿಗಲಿ" ಎಂದು ನಿಷ್ಟೆಯಿಂದ ಕಾಳು ಹಾಕುತ್ತಿದ್ದ ಅಂತ ಕಾಣ್ಸುತ್ತೆ. ಆ ಹುಡುಗಿಯರ ಹಿಂದೆಯೇ ಕುಳಿತಿದ್ದ ನನಗೆ ಅವನಾಡುತ್ತಿದ್ದ ಆಟ ಪಾಟಗಳನ್ನು ನೋಡಿ "ಭ್ರಮರಾಂಬ" ಥಿಯೇಟರಿನಲ್ಲಿ ಕುಳಿತು ರಜನೀಕಾನ್ತ್ ಫಿಲಂ ನೋಡಿದ ಹಾಗಿತ್ತು. ನೋಡಲು ಸ್ವಲ್ಪ ಕಪ್ಪಿದ್ದರೂ ತೆಳ್ಳನೆ ಲಕ್ಷಣವಾಗಿ ಕೃತಕ ಕಣ್ಣುಗಳನ್ನು(ಕನ್ನಡಕ) ಹಾಕಿ-ತೆಗೆದು ಮಾಡುತ್ತಿದ್ದ. ಈ ಲಲನಾಮಣಿಗಳೂ ಸಹ ಅವನ ನೋಡಿ ಒಳಒಳಗೇ ಪಿಸುಗುಟ್ತುಕೊಳ್ಳುತ್ತಿದ್ದರು. ಆ ಮೂವರಲ್ಲಿ ಅದ್ಯಾರು ಶಕುಂತಲೆಯೋ ನಾಕಾಣೆ. ಆದರೆ ನಮ್ಮ ದುಶ್ಯ೦ತ ಮಹಾರಾಜರು ಪ್ರಣಯಗೀತೆ ಹಾಡಲು ಸಿದ್ದವಾಗಿದ್ದರು.ಹೀಗೆ ಇವರ ಕಣ್ಣಿನ ಮಾತುಗಳು ಎಸ್.ಎಂ.ಎಸ್ ನಂತೆ ಬಸ್ ಸೀಟಿನಡಿಗೆ ನುಗ್ಗಿ ಕಬ್ಬಿಣದ ರಾಡುಗಳಿಗೆ ಡಿಕ್ಕಿ ಹೊಡೆದು ಅವನ ಬಳಿಗೆ ಸೇರುವ ವೇಳೆಗೆ ಬಸ್ ಹೊರಟು ಯಳ೦ದೂರು ತಲುಪಿತ್ತು.ಬಹುಶಹ ಅವರೆಲ್ಲರೂ ಯಳ೦ದೂರಿನವರೇ ಅನ್ಸುತ್ತೆ. ಬಸ್ ನಿಲ್ಲುತ್ತಿದ್ದಂತೆ ಎಲ್ಲರೂ ಮಾಯವಾಗಿದ್ದರು. ನನ್ನ ಊರು ಇನ್ನೇನು ೩೦ ನಿಮಿಷದಲ್ಲಿ ಸಿಗುತ್ತದಲ್ಲ ಅನ್ನೋ ಸಂಭ್ರಮದಲ್ಲಿ ನಾನೂ ಸಹ ನಿದ್ರೆ ಮಾಡದೇ ಹಾಗೆಯೇ ಪಳೆಯುಳಿಕೆ ಶಿಲೆಗಳನ್ನು ಕಂಡಂತೆ ಊರಿನ ಸ್ಥಿತಿ-ಗತಿಗಳನ್ನು ದಿಟ್ಟಿಸಿ ನೋಡುತ್ತಿದ್ದೆ. ಸುಮಾರು ೧೦ ವರ್ಷಗಳಿಂದಲೂ ನೋಡಿದ ನೆನಪು.. ಯಳ೦ದೂರು ಬಸ್ ನಿಲ್ದಾಣ ಯಾವುದೇ ರೀತಿಯ ಬದಲಾವಣೆ ಹೊಂದಿಲ್ಲ. ತನ್ನದೇ ಆದ ವೈಶಿಷ್ಟತೆ ಹೊಂದಿದಂತೆ ಬಸ್ ನಿಲ್ದಾಣದ ಶೀಲ, ಸೌಂದರ್ಯವನ್ನು ಕಾಪಾಡಿಕೊಂಡು ಬಂದಿದ್ದಾರೆ ಈ ನಮ್ಮ ರಾಜಕಾರಣಿಗಳು. ಎಂದಿನಂತೆ ಬಸ್ ಹೊರಟಿತು... ಹಳೆಯ ಕೆಲನೆನಪುಗಳನ್ನು ಮರುಕಳಿಸುತ್ತ ಆ ಕೆಂಗಣ್ಣನ ಧೂಳಿನಲ್ಲಿ ಬಡಕಲಾದ ಮರಗಳನ್ನು ನೋಡುತ್ತಾ ಅಂತರ್ಮನಸ್ಕನಾದೆ.

ಹರಿದ ರವಿಕೆಯನುಟ್ಟು ಮೈಯೊಡ್ದಿ ನಗುತಿಹಳು
ಬಿಸಿಲಿನೊಳು ಚಲಿಸುತ್ತ ದನಕರುಗಳ ಬಳಗದಲಿ
ಕಲ್ಲಾಗಿ ಕಲ್ಲಿನೊಳು, ಮುಳ್ಳಾಗಿ ಮುಳ್ಳಿನೊಳು
ಕಟ್ಟಿತ್ತು ಹೆಪ್ಪುಂಡು ಪಾದಗಳು ಬಲವಾಗಿ


ಹಸಿದ ಹೊಟ್ಟೆಗೆ ಬೇಕು ಮೇವುಂಡ ಹಾಲಂತೆ
ಎರಡಾಣೆಯ ಗಳಿಕೆಯೊಳು ಒಪ್ಪತ್ತಿನ ಆಹಾರ
ನಗ್ನತೆಯ ಸತ್ಯಕ್ಕೆ ಬೆರಗಾದ ಬದುಕಂತೆ
ಮುಗ್ಧತೆಯು ಸಾಗುತಿದೆ ಆ ಬಡಕಲು ಶಾರೀರ


ಬರದಿರಲು ಮುಮ್ಮೋಡ ನೆನಸಿದಾ ಸಮಯದೊಳು
ಇಂಗುತ್ತ ಕ೦ಗಳಲಿ ಮುಚ್ಚಿಟ್ಟ ಕನಸುಗಳು
ಬಿರುಸಿನಲಿ ಹಬ್ಬಗಳು ಹೊಸಿಲಲ್ಲಿ ನಿಂತಿರಲು
ಇನ್ನೆಲ್ಲಿ ಹೊಸ ಉಡುಪು? ಶುಚಿ ಮಾಡಿ ಹಾಕಿರಲು..


ಮುಖದಲ್ಲಿ ಸಿಂಧೂರ, ಮೂಗುತಿಯ ಗತಿಯಿಲ್ಲ
ಆಸೆಗಳ ಬುತ್ತಿಯಲಿ ನಿಟ್ಟುಸಿರ ಸ್ಥಳವಿಲ್ಲ
ಆ ಒಡೆದ ತುಟಿಯೊಳಗೆ ಹುಡುಕಿದರೂ ಸಿಹಿಯಿಲ್ಲ
ಉಕ್ಕೇರದು ಮಂದಾರ, ನೆಲೆಯಿಲ್ಲ ಕಹಿಯೆಲ್ಲ..

ಹೀಗೆ ಬಸ್ಸಿನೊಳಗೆ ಕುಳಿತು ಹೊರಬಯಲಿನ ಆ ಬಿಸಿಲಿನಲಿ ಒಬ್ಬಾಕೆಯು ದನ-ಕರುಗಳನ್ನು ಮೇಯಿಸುತ್ತಾ ಜೀವನವೇ ಬೇಡವೆಂಬಂತೆ ಕುಳಿತ ಅವಳ ಭಾವನೆಗಳನ್ನು ಸೆರೆಹಿಡಿದು ನನ್ನದೇ ಶೈಲಿಯಲ್ಲಿ ಹೇಳಿದ್ದೇನೆ. ಇಷ್ಟೆಲ್ಲಾ ಆಗುವುದರೊಳಗೆ ನಾನಿದ್ದ ಬಸ್ಸು ನಮ್ಮೂರಿನ ಮುಂಭಾಗಕ್ಕೆ ಕಾಲಿಟ್ಟಿತ್ತು. ಅಲ್ಲಿಂದ ಇಳಿದದ್ದೆ ತುಂಬಾ ದಿನವಾದ ನಂತರ ಬಹಳ ದೂರದವರೆಗೆ ಪ್ರಯಾಣಿಸಿದ್ದರಿಂದ ಸ್ವಲ್ಪ ಮನಸ್ಸಿಗೆ ಸಂತೋಷವಾಗಿದ್ದರೂ ದೇಹಕ್ಕೆ ಆಯಾಸವಾಗಿತ್ತು. ಸ್ವಲ್ಪ ಕಾಲ ನಿಂತು ಕಣ್ಣಾಯಿಸುವುದಕ್ಕೂ ನನಗೆ ಆಗುತ್ತಿರಲಿಲ್ಲ. ಕೂಡಲೇ ಗೆಳೆಯ ನವೀನನಿಗೆ ಕರೆ ಮಾಡಿ ನನ್ನನ್ನು ಬಂದು ಕರೆದುಕೊಂಡು ಹೋಗು ಎಂದು ಆ ಸುಡುಬಿಸಿಲಿನಲಿ ಜಗಮಗಿಸುವ ಪಚ್ಚಪ್ಪ ಸರ್ಕಲ್ಲಿನ ನಂದಾದೀಪ ಉರಿಯುತ್ತಿರುವುದನ್ನು ನೋಡಿ ನಮ್ಮೂರಿನ ರಾಗ-ತಾಳಗಳು ಬದಲಾಗಿಲ್ಲವೆಂದು ಮನಸ್ಸಿನೊಳಗೇ ಹುಸಿನಗೆಯ ಹರಿಸುತ್ತ ಕೆನರಾ ಬ್ಯಾಂಕಿನ ಬಳಿ ನಿಂತೆ.

--------------------------------------------------------@@@@@@@@@@@@@@@@@@@@@@@@@@@@@-----------------------------------------------------------------------


ರಾಜನ ಪಚೀತಿ

ನಮ್ಮೂರ ಹುಡುಗರ ಸ್ನೇಹ ಕುಟುಂಬದಲ್ಲಿ ತನ್ನದೇ ಆದ ಲೋಕದಲ್ಲಿ ಮೈಮರೆತು ನಿಂತಿರುವ ವ್ಯಕ್ತಿ ರಾಜೇಂದ್ರ ಪ್ರಸಾದ್ ಅಲಿಯಾಸ್ ಕೊತ್ಮ ಎಂದರೆ ತಪ್ಪಾಗಲಾರದು....
ಸಾಧಾರಣ ಮೈಕಟ್ಟು ಹೊಂದಿ ತನ್ನದೇ ಆದ ಶೈಲಿಯಲ್ಲಿ ಮಾತು ಮಾತಿಗೂ "ಕಪಿ" ಎಂದು ಕೊನೆಯಲ್ಲಿ ಸೇರಿಸಿಕೊಂಡು, ಒಂದು ಕೈ ಉದ್ದನೆ, ಇನ್ನೊಂದು ಕೈ ಮಡಚಿದ ಹಾಗೆ ಮಾಡಿಕೊಂಡು ನಡೆದಾಡುತ್ತ ಮಾತಾಡುವ ಯುವಕ. ಈ ಗೆಳೆಯನ ಕಥೆ ಕೇಳಿ :- ನಾವೆಲ್ಲ ಹುಡುಗರು ಸೇರಿ ಅಂದರೆ, ನಾನು, ಕುಮಾರ, ಮಧು, ಆದಿ, ರಮೇಶ, ನವೀನ, ಸುನೀಲ(ಟೈಲರ್) ಮತ್ತು ಪ್ರವೀಣ ಎಲ್ಲರೂ ಒಟ್ಟು ಗೂಡಿ ಮೈಸೂರು ಸುತ್ತಿಬರಲು ಮೂರುವಾರದ ಹಿಂದೆಯೇ ನಿರ್ಧರಿಸಿದ್ದರೆ, ಈ ಪುಣ್ಯಾತ್ಮ ರಾಜೇಂದ್ರ ಅಲಿಯಾಸ್ ಕೊತ್ಮ ಅನ್ನೋನು ನಾನಂತೂ ಜಪ್ಪಯ್ಯಾ ಅಂದ್ರೂ ಬರೋಲ್ಲ, ನನಗೆ ಉಷಾರಿಲ್ಲ.. ಯಾಕೋ ಜ್ವರ ಬಿಟ್ಟು ಬಿಟ್ಟು ಬರುತ್ತಿದೆ ಮತ್ತು ಇದ್ದಕ್ಕಿದ್ದ ಹಾಗೆ ನನಗೆ ಜಾನ್ಡೀಸ್ ಬಂದು ವಕ್ಕರಿಸ್‌ಕೊಂಡಿದೆ ಎಂದು ಹೇಳಿದ. ಇವನ ಮಾತು ಕೇಳಿದ ನಾನು ನಿಜ ಎಂದು ತಿಳಿದುಕೊಂಡು, ಹೌದೇನೋ, ಇರಲಿ ಬಿಡು ಅಂದು ಕೊಂಡಿದ್ದೆ.ಆದರೆ ನಾನು ನಗರಕ್ಕೆ ಕಾಲಿಟ್ಟಾಗಲೇ ನನಗೆ ಗೊತ್ತಾಗಿದ್ದು, ಅವನಾಡುತ್ತಿರುವುದೆಲ್ಲ ಬರೀ ಸುಳ್ಳೂರಿನಿಂದ ತಂದಿಟ್ಟಿದ್ದ ಸುಳ್ಳುಗಳೇ ಎಂದು.ಅಬ್ಬಾಆಆ... ಅಬ್ಬಾಆಆ.. ಅಬ್ಬಾಆಆಆ... ಅವನಿಗೆ ಉಷಾರಿಲ್ಲ ಅಂತ ತೋರಿಸ್ಕೊಳ್ಳೋದಿಕ್ಕೆ ಏನೇನ್ ನಾಟಕ ಆಡಿದಾ ಅಂತೀರಾ? ನಾನು ಅವನ ಮನೆಗೆ ಹೋಗಿದ್ದೆ ತಡ ಸಾಯಂಕಾಲದಿಂದ ರಾತ್ರಿಯವರೆಗೂ ಕೆಮ್ಮಲು ಪ್ರಾರಂಭಿಸಿದ್ದ. ಅಲ್ಲಿದ್ದ ಸ್ನೇಹಿತರೆಲ್ಲರೂ ಸೇರಿ ನೀನು ಬರದಿದ್ದರೆ ಇನ್ಮುಂದೆ ನಿನಗೆ ಕಾದಿದೆ ಎಂದು ದ್ವೇಷ ಕಟ್ಟಿಕೊಳ್ಳಲು ಸಿದ್ಧವಾಗಿದ್ದರು. ಬತ್ತಿ ಜಾಗನೇ ನಿನಗೆ ಖಾಯಂ ಆಗುತ್ತೆ ಎಂದು ಎದುರಿಸಿದ್ವಿ.ನಿಧಾನವಾಗಿ ಅವನ ಮನಸ್ಸನ್ನು ನಮ್ಮತ್ತ ಸೆಳೆದುಕೊಳ್ಳಲು ಪ್ರಯತ್ನಿಸಿದೆವು. ಕೊನೆಗೂ ಬಿಡಲಿಲ್ಲ, ನಮ್ಮ ಘಟೋದ್ಗಜನ ಅಂಗಡಿಯ ಮುಂದೆ ನಮ್ಮ ಕೊತ್ಮನಿಗೆ ಪಾನೀಪುರಿ, ಮಸಾಲೆಪುರಿ, ಕೊಡಿಸಿ ಕಬ್ಬಿಣ ಕಾಯಿಸಿ ಅದಕ್ಕೊಂದು ಆಕಾರ ಕೊಟ್ಟ ಹಾಗೆ ಅವನ ಮನಸ್ಸನ್ನು ಹದ ಮಾಡಿ ಬಿಟ್ಟೆವು. ಅವನಿಗೆ ತೊಂದರೆ ಇದ್ದಿದ್ದು ಸ್ವಲ್ಪ ಹಣದ ವ್ಯವಸ್ಥೆಯೇ ಹೊರತು ಯಾವುದೇ ರೀತಿಯ ದೊಡ್ಡ ರೋಗನೂ ಇರಲಿಲ್ಲ. ಬಿಟ್ಟರೆ ಸಾಕು ಆಕಾಶ ಚುಂಬಿಯಾಗಿ ಎಲ್ಲರಿಗೂ ಪ್ರಚಾರ ಮಾಡಿಬರುವ ಉತ್ಸಾಹ ಅವನಲ್ಲಿತ್ತು. ಕೊನೆಗೂ ನಾ ಮಲಗಿದ ಮೇಲೆ ರಾತ್ರಿಯೆಲ್ಲಾ ಯೋಚನೆ ಮಾಡಿದ ಅಂತ ಅನ್ಸುತ್ತೆ, ಗಟ್ಟಿ ಮನಸ್ಸು ಮಾಡಿ ನನಗಿಂತ ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ಬಟ್ಟೆ ಹಾಕಿಕೊಂಡು ರೆಡಿಯಾಗಿ ನಿಂತಿದ್ದ. ಒಂದು ವೇಳೆ ಅವನೇನಾದರೂ ಬರದಿದ್ದರೆ ನಾವು ಅವನ ಮನೆಯಲ್ಲಿರುವ "ರಿಮ್ಮಿ"ಯನ್ನೇ ಕರೆದುಕೊಂಡು ಹೋಗಲು ನಿರ್ಧರಿಸಿದ್ದೆವು. ಏಕೆಂದರೆ ನಾವು ಮಾತನಾಡುವ ಮಾತುಗಳನ್ನು ಆ ರಿಮ್ಮಿಯೇ ಹಲವಾರು ಬಾರಿ ಗ್ರಹಿಸಿಕೊಂಡು ಕೇಳಿರುವ ನಿದರ್ಶನಗಳುಂಟು. ಇಲ್ಲಿಗೆ ಸಾಕಲ್ಲವಾ ಇವನ ಬಗ್ಗೆ?!!! ಇವನ ಬಗ್ಗೆ ಹೇಳೋದು ಸುಮಾರಿದೆ.. ಆದರೆ ಒಂದೇ ಬಾರಿ ಹೇಳಿದರೆ ಮುಂದೆ ಮಜಾ ಸಿಗೋಲ್ಲ. ಸದ್ಯಕ್ಕೆ ಇಷ್ಟಿರಲಿ. ತದನಂತರ ಅವನಿಗೇ ಆದ ಒಂದು ಪುಸ್ತಕ ಇಟ್ಟು ಬರೆಯೋಣವನ್ತೆ.

ಆಶ್ಚರ್ಯ ಏನಪ್ಪಾ ಅಂದರೆ "ಮೈಸೂರು" ನಮಗೆ ಒಂದು ರೀತಿ ಹೆಣ್ಣು ಕೊಟ್ಟ ಮಾವನ ಮನೆ ಇದ್ದ ಹಾಗೆ. ಮೊದಮೊದಲು ಮದುವೆ ನಿಶ್ಚಯ ಆದ ಹುಡುಗ ತನ್ನ ಹುಡುಗಿಯನ್ನು ನೋಡಲು ಭಾವೀಮಾವನ ಮನೆಗೆ ಅದೆಷ್ಟು ಬಾರಿ ಹೋಗಿ ಬರುತ್ತಾನೋ, ಅದಕ್ಕಿಂತ ಹೆಚ್ಚಾಗಿ ನಾವೆಲ್ಲರೂ ಮೈಸೂರಿನ ಗಲ್ಲು ಗಲ್ಲು ಪೋಣಿ ಕೇರಿಗಳನ್ನು ಸುತ್ತಿ ಬಂದಿದ್ದೇವೆ. ಆದರೂ ನಾವ್ಯಾರೂ ಸರಿಯಾಗಿ ಶೈಕ್ಷಣಿಕ ಸ್ಥಳಗಳಾದ ವಿಶ್ವದ ಮೂಲೆ ಮೂಲೆಯಿಂದ ಬಂದು ನೋಡುವಂತ ಅರಮನೆ, ಬಲ್ಮುರಿ, ಚಾಮುಂಡಿ ಬೆಟ್ಟ ಸರಿಯಾಗಿ ನೋಡಿಲ್ಲ. ಹೋಗಿದ್ದರೂ ಅವೆಲ್ಲವೂ ಹಳೇಯ ಚಿಕ್ಕಂದಿನ ಕಪ್ಪು-ಬಿಳುಪಿನ ನೆನಪುಗಳಷ್ಟೆ ನಮ್ಮ ಕಣ್ಣು ಮುಂದೆ. ನಾವೆಲ್ಲರೂ ಸ್ಥಳಿಕರಾಗಿದ್ದರಿಂದ ಅದರಲ್ಲೂ ತಿಂಗಳಿಂದೆಯಷ್ಟೇ ದಸರಾ ಹಬ್ಬ ಬಂದುಹೋಗಿದ್ದರಿಂದ ಅದರ ನೆನಪು, ಮೈಸೂರಿನ ಸೌಂದರ್ಯದ ಸೊಗಡಿನ ಛಾಯೆ ಇನ್ನೂ ನಮ್ಮ ಮನಸ್ಸಿನಿಂದ ಪೂರ್ತಿಯಾಗಿ ಮಾಸಿರಲಿಲ್ಲ.



ಅದೇ ಮತ್ತಿನಲ್ಲಿ ಅಂದು ದಿನಾಂಕ ೨/೧೧/೦೮ರಂದು ಗಾಂಧೀ ಜಯಂತಿ ಹಬ್ಬದಂದು ಬೆಳಿಗ್ಗೆ ೮.೩೦ಕ್ಕೆ ನಾನು ಮತ್ತು ರಾಜ, ಗೆಳೆಯ ಮಧು ಮನೆಗೆ ಹೋದೆವು. ನಾವಿಬ್ಬರೂ ಅವನ ಮನೆಗೆ ಹೋಗಲೂ ನಮಗಾಗಿ, ನಮ್ಮನ್ನು ಕರೆದುಕೊಂಡು ಹೋಗುವ ಇಂದ್ರನ ವಾಹನದನ್ತಿದ್ದ ಕ್ವಾಲೀಸ್ ಗಾಡಿ ಬಂದು ನಿಂತಿತ್ತು. ಹಾಗೆಯೇ ನಮೈಕ್ಳು ನವೀನ, ರಮೇಶ, ಸುನೀಲ.ಎಂ ಮೂವರನ್ನೂ ಹತ್ತಿಸಿಕೊಂಡು ನಮ್ಮೂರಿನ ಮುಂಭಾಗದ ಚರ್ಚಿನ ಹತ್ತಿರ ಹೊರಟೆವು. ಅಲ್ಲಿಯೇ ನಮಗಾಗಿ ಕಾದು ನಿಂತಿದ್ದ ಇನ್ನೊಬ್ಬ ಶಿಷ್ಯ, ಜಾಣರ ಜಾಣ ಪ್ರವೀಣ, ಎಂದೂ ಖರ್ಚು ಮಾಡಲು ಹಿಂದೂ-ಮುಂದೂ ನೋಡುವಾತ, ಅ.ಭಾ.ಜೀ.ಸಂ. ಅಧ್ಯಕ್ಷತೆಯ ಪ್ರತಿಯಾದ ಇವನು ಅಂದೇನೋ ವಾರದ ಹಿಂದೆಯಷ್ಟೇ ತೆಗೆದುಕೊಂಡಿದ್ದ ೨೫೦೦ರೂಪಾಯಿ ಬೆಲೆ ಬಾಳುವ ರಿಬಾಕ್ ಶೂ, ಕೈಗೆ ೧೭೦೦ರೂಪಾಯಿ ಬೆಲೆಬಾಳುವ ಎಂತದೋ ಪಾಸ್ಟ್ ಟ್ರ್ಯಾಕ್ ರಿಸ್ಟ್ ವಾಚನ್ನೂ ಹಾಗೂ ಕೊನೆಯಲ್ಲಿ ೬೦೦೦ ರೂಪಾಯಿ ಬೆಲೆಬಾಳುವ ಕ್ಯಾಮರಾ ಇರುವಂತಹ ಮೊಬೈಲನ್ನೂ ತೆಗೆದುಕೊಂಡು ಟ್ರಿಮ್ ಆಗಿ ಲಿಫ್ಟ್ ಕೇಳುವ ಹಾಗೆ ರಸ್ತೆಯ ಬದಿಯಲ್ಲಿ ಪ್ರೇಯರ್ ಮಾಡಿ ಸ್ಟೈಲ್ ಆಗಿ ಬಂದು ನಿಂತಿದ್ದ. ಈತನ ಕಥೆಯೂ ಅಷ್ಟೇ, ಹೇಳಲು ಹೋದರೆ ದಿನಗಟ್ಟಲೇ, ವಾರಗಟ್ಟಲೆ ಕೂತು ಬರೆದರೂ ಮುಗಿಯದ ಬರಹವಾಗುತ್ತದೆ. ಚಲನಚಿತ್ರದಲ್ಲಿ ಜಿಪುಣರ ಜಿಪುಣನಾಗಿ ನಟಿಸಿರುವ ದೊಡ್ಡಣ್ಣನ ಪಾತ್ರ ಹೇಗೋ, ನಿಜ ಜೀವನದಲ್ಲಿ ಈ ನಮ್ಮ ಪ್ರವೀಣನೂ ಹಾಗೆ.ತಮ್ಮ ಶೋಕಿಲಾಲ ಆದರೆ, ಅಣ್ಣ ಜುಗ್ಗರ ಜುಗ್ಗಾ ಅಂದೇ ಪ್ರಖ್ಯಾತಿಯಾಗಿದ್ದಾನೆ. "ನಿನಗೇನೋ ಕೊರತೆ ಇದೆ?", ಯಾವುದಾದರೂ ಒಳ್ಳೆ ಮಾಡಲ್ ಕ್ಯಾಮರ ಇರುವ ಮೊಬೈಲ್ ಫೋನ್ ತಗೆದುಕೊಳ್ಳುವುದಲ್ವಾ? ಅಂತ ಕೇಳಿದ್ರೆ ಉರ್‍ರ್‍ರ್ ಅಂತ ನಮ್ಮ ಮೇಲೆಯೇ ತಿರುಗಿ ಬೀಳುತ್ತಿದ್ದ.ಸುಮ್ಮನೇ ಏಕೆ ಖರ್ಚು? ಮೊಬೈಲಿನಲ್ಲಿ ಬರುವ ಎಸ್.ಎಂ.ಎಸ್ ಗಳನ್ನು ಹಾಗೂ ಅವರಿವರಿಗೆ ಕಾಲ್ ಮಾಡಿಕೊಂಡು ಮಾತಾಡಿದ್ರೆ ಸಾಕಾಗಲ್ವ ಅಂತ ನಮಗೆ ಪ್ರತಿವಾದಿಸುತ್ತಿದ್ದ. ದೇವರು ಎನ್ ಬುದ್ಧಿ ಕೊಟ್ರೋ ಏನೋ ಅವನಿಗೆ, ಬುದ್ಧನಿಗೆ ಭೋಧಿವೃಕ್ಷದ ಕೆಳಗೆ ಮೋಕ್ಷವಾದರೆ ಈ ಪ್ರವೀಣನಿಗೆ ಮೈಸೂರಿನ ಎಲ್ಲೋ ಮೂಲೆಯಲ್ಲಿ ಯಾರಿಂದಲೋ ಮೋಕ್ಷವಾಗಿ ಬಿಟ್ಟಿದೆ. ಬಹುಶಹ ಅವನ ಜೀವನದಲ್ಲಿ ಯಾರೋ ಹುಡುಗಿ ಎಂಟ್ರಿ ಕೊಟ್ಟಿರಬಹುದು ಅನ್ಸುತ್ತೆ. ಬುದ್ಧಿ ವಿಕಲ್ಪವಾಗುವುದಕ್ಕೂ , ಬುದ್ಧಿ ವಿದೀರ್ಣವಾಗುದಕ್ಕೂ ಹೆಣ್ಣಲ್ಲವೇ ಕಾರಣ. ಅಣ್ಣನ ಆಟ-ಪಾಠಗಳನ್ನು ಗಮನಿಸುತ್ತಿರುವ ತಮ್ಮ ಸುನೀಲ್ ಅಂತೋನಿ, ನನ್ನ ಅಣ್ಣನಿಗೆ ಏನೋ ಆಗಿದೆ ಎಂದು ಬಾಯ್ ಬಾಯ್ ಬಿಟ್ಟು ಕೊಂಡು ನೋಡುತ್ತಿದ್ದಾನೆ. ಹೀಗೆ ಸ್ಟೈಲ್ ಆಗಿ ಜೀನ್ಸ್ ಪ್ಯಾಂಟಿನ ಬಲ ಜೇಬಿಗೆ ಕೈ ಹಾಕಿ ನಿಂತಿದ್ದ ಪ್ರವೀಣನನ್ನು ಎತ್ತುಹಾಕಿಕೊಂಡು ನಂಜನಗೂಡು ಮೈಸೂರಿನತ್ತ ಹೊರಟೆವು.



ಎಲ್ಲರೂ ಹರಟೆ ಹೊಡೆದುಕೊಂಡು ಎಫ್.ಎಂ ರೇಡಿಯೋ ಬಾನುಲಿಯ ಹಾಡುಗಳನ್ನು ಕೇಳಿಕೊಂಡು ನಂಜನಗೂಡು ನಂಜುಂಡೇಶ್ವರ ದೇವಸ್ಥಾನಕ್ಕೆ ತಲುಪಿದೆವು. ಅಲ್ಲೊಬ್ಬ ನೆಚ್ಚಿನ ಗೆಳೆಯ ಕುಮಾರ ನಮಗಾಗಿ ಕಾದೂ ಕಾದೂ ಸಾಕಾಗಿ ದೇವಸ್ಥಾನವನ್ನೇ ಮೂರ್ನಾಲ್ಕು ಬಾರಿ ಸುತ್ತು ಹೊಡೆದು ಹತ್ತಿರವಿದ್ದ ಬೀದಿಗಳಿಗೆ ಬೀಟ್ ಹೊಡೆದು ಬಂದು ಕೂತಿದ್ದ. ಮೈಸೂರಿಗೆ ಹೊರಡುವ ಮುನ್ನ ದೇವಸ್ಥಾನದ ಮುಂಭಾಗಕ್ಕೆ ಹೋಗಿ ದೇವರಿಗೆ ನಮಸ್ಕರಿಸಲು ಪಕ್ಕದಲ್ಲೇ ನಿಂತಿದ್ದ ದೇವಸ್ಥಾನದ ಆನೆಯ ಬಳಿ ಆಶೀರ್ವಾದ ತೆಗೆದುಕೊಂಡು ಹೊರಟೆವು. ಆನೆ ಒಂದು ಮೂಕಪ್ರಾಣಿಯಾದರೂ ಯಾವುದೋ ಒಂದು ಗ್ರಹಿಕೆಯಲ್ಲಿ ಕಲಿತ ಆ ಆಶೀರ್ವಾದ ನೀಡುವ ಭಂಗಿಯನ್ನು ನೋಡಿ ನಮಗೂ ಅನೆಯಿಂದ ಆಶೀರ್ವಾದ ಪಡೆದುಕೊಳ್ಳಬೇಕೆಂಬ ಆಸೆಯಿಂದ ಅದರ ಸೊ೦ಡಲಿನ ಸ್ಪರ್ಶ ಮಾಡಿಸಿಕೊಂಡೆವು. ಅಂತಹ ದೈತ್ಯಕಾರದ ಆನೆ ಅಪ್ಪಿ-ತಪ್ಪಿ ನಮಗೆ ಅಪ್ಪಳಿಸಿದರೆ ಎನ್ ಗತಿ? ಅ೦ತಹಾ ಸಮಯದಲ್ಲಿ ನಮ್ಮ (ಟೈಲರ್)ಸುನೀಲನೇ ಬಂದು ಬಿಡಿಸಬೇಕಾಗುತ್ತದೆ. ಹೀಗೆ ನಂಜುಂಡೇಶ್ವರನ ದರ್ಶನ ಪಡೆದು ಹೊರಟ ನಾವು ಅಲ್ಲಿಂದ ಸೀದ ಕಾಲ್ಕಿತ್ತಿದ್ದು ಮಸೂರಿಗೆ.ಹೊರಟ ಹುಮ್ಮಸ್ಸಿನ ಪ್ರಯಾಣದಲ್ಲಿ ನಮ್ಮ ಮೊದಲನೇ ಸ್ಕೆಚ್ಚು ಚಾಮುಂಡಿ ಬೆಟ್ಟವಾಗಿತ್ತು.ಹೊರಡುವ ಮುನ್ನ ನಮ್ಮ ಮತ್ತೊಬ್ಬ ಅಚ್ಚು ಮೆಚ್ಚಿನ ಗೆಳೆಯ ಆದರ್ಶ ನಮಗಾಗಿ ಒಪ್ಪತ್ತಿಗೇ ಮಂಜು ಉದುರುವ ಸಮಯದಲ್ಲಿ ಬೆಂಗಳೂರಿನಿಂದ ನೈಟ್ ಶಿಫ್ಟ್ ಮುಗಿಸಿಕೊಂಡು ಆರು-ಗೇಟಿನ ಬಳಿ ಕಾದು ನಿಂತಿದ್ದ. ಅವನಿಗೂ ನಿಂತೂ ನಿಂತೂ ಸಾಕಾಗಿ ರೋಸಿ ಹೋಗಿತ್ತು ಅಂತ ಅನ್ಸುತ್ತೆ. ಕಾರ್ ಹತ್ತಿದ ೫ ನಿಮಿಷದಲ್ಲೇ ಮಧ್ಯ ಮಧ್ಯ ಕಳ್ಳ ನಿದ್ರೆಗೆ ಹೋದ. ಒಟ್ಟು ನಾವು ಮಾತನಾಡಿಕೊಂಡಿದ್ದ ಎಲ್ಲ ಹುಡುಗರೂ ತಪ್ಪಿಸಿಕೊಳ್ಳದೆ ಹಾಜರಾಗಿದ್ದೆವು. ಅಲ್ಲಲ್ಲಿ ಬೆಟ್ಟದ ಮಧ್ಯ ಭಾಗದಲ್ಲಿ ಕಾರು ನಿಲ್ಲಿಸಿ ರಸ್ತೆ ಬದಿ ನಿಂತು ಫೋಟೋ ತೆಗೆಸಿಕೊಂಡಿದ್ದು, ನಾವಾಡಿದ್ದ ಆಟ, ಅದೆಲ್ಲ ಇನ್ನೂ ನೆನಪಿಸಿಕೊಂಡರೆ ಮೈ ಪುಳಕಿತವಾಗುತ್ತದೆ. ಅಲ್ಲಿ ನಮ್ಮ ಇಂಗ್ಲೀಷ್ ಮ್ಯಾನ್ ಪ್ರವೀಣನದ್ದೇ ಎಲ್ಲಾ ಕಾರುಬಾರು. ತನ್ನದೇ ಆದ ರೂಪವಿನ್ಯಾಸ, ತನ್ನದೇ ಆದ ಮಾತಿನ ಶೈಲಿಯಲ್ಲಿ ಮೋಜು ನೀಡುತ್ತಿದ್ದ. ಹೀಗೆ ಆಟವಾಡಿಕೊಂಡು ಚಾಮುಂಡೇಶ್ವರಿಯ ಸನ್ನಿಧಾನಕ್ಕೆ ನಾವು ತಲುಪುವಾಗ ಸಮಯ ಸುಮಾರು ೧೦.೧೫ ಆಗಿತ್ತು. ಮೊದಲೇ ಭಾನುವಾರ, ತುಂಬಾ ಜನ ಭಕ್ತರು ನೆರೆದಿದ್ದರು. ಆ ಜನರ ಗುಂಪಿನಲ್ಲಿ ನಿಂತು ಸಾಲಾಗಿ ಹೋಗಿ ದೇವರ ದರ್ಶನ ಪಡೆದರೆ ಮುಂದಿನ ಎಲ್ಲಾ ಸ್ಥಳ ವೀಕ್ಷಣೆಗೆ ಚಕ್ಕರ್ ಹಾಕೋ ಪರಿಸ್ಥಿತಿ ಇತ್ತು. ಆ ಜನಜಂಗುಳಿಯನ್ನೇ ನೋಡಿಕೊಂಡು ದೇವಸ್ಥಾನದ ಮುಂಭಾಗದಲ್ಲಿ ನಿಂತು ಭಕ್ತಿಯಿಂದ ನಮಸ್ಕರಿಸಿ ಮುಂದಿನ ಸ್ಥಳಕ್ಕೆ ಹೊರಟೆವು. ಹಾಂ ಇನ್ನೊಂದು.. ಈ ನಮ್ಮ ಯುವಪ್ರತಿನಿಧಿಗಳು ಮೈಸೂರು ತಲುಪುವವರೆಗೂ ಯಾರೂ ತಿಂಡಿ ತಿನ್ನೋದು ಬೇಡ, ಎಲ್ಲರೂ ಒಟ್ಟಿಗೇ ತಿನ್ನೋಣ ಎಂದು ಹೇಳಿ ಕದೀಮರಂತೆ ಗುಟ್ಟಾಗಿ ತಾವೇ ಮನೆಯಲ್ಲಿ ಹೊಟ್ಟೆಗೆ ಸ್ವಲ್ಪ ಹಾಕಿಕೊಂಡು ಬಂದಿದ್ದರು. ಅಲ್ಲಿಗೆ ಮೋಸ ಹೋಗಿದ್ದವರು ಅಂದರೆ ನಾನು, ರಾಜೇಂದ್ರ, ಪ್ರವೀಣ. ಕೇವಲ ಒಂದು ಲೋಟ ಹಾಲು ಕುಡಿದುಕೊಂಡು ಬಂದ ನಮಗೆ ಹೊಟ್ಟೆಯಲ್ಲಿ ಏನೂ ಇಲ್ಲದೇ ಜಠರ ಹಾಗೆಯೇ ಅಂಟಿಕೊಂಡು ಬಿಟ್ಟಿತ್ತು. ಸರಿಯಾಗಿ ನಗುವುದಕ್ಕೂ ಉತ್ಸಾಹವಿರಲಿಲ್ಲ. ಕೊನೆಗೂ ಮಿಕ್ಕವರನ್ನು ಬೈದುಕೊಂಡು ಚಾಮುಂಡೇಶ್ವರಿಯ ಸನ್ನಿಧಾನದಲ್ಲೇ ತಿಂಡಿ ಮುಗಿಸಿ ತುಸು ಹರುಷದಿಂದ ಮುಂದಿನ ಸ್ಥಳವಾದ ಮೈಸೂರು ಅರಮನೆಗೆ ಹೊರಟೆವು. ಇದಿಷ್ಟು ಮುಗಿಯುವವರೆಗೆ ೧ ತಾಸು ಮುಗಿದಿತ್ತು. ಬಾಯಿ ಚಪ್ಪರಿಸಿಕೊಂಡು ಕಾರು ಹತ್ತಿ ಕುಳಿತ ನಮ್ಮನ್ನು ಡ್ರೈವರ್ ಅಣ್ಣಾವ್ರು ಇಳಿಜಾರಿನ ಜಾರುಗುಪ್ಪೆಯಂತೆ ಕೇವಲ ೧೫ ನಿಮಿಷಕ್ಕೆ ಕರೆದೊಯ್ದರು. ಸುಮಾರು ೧೧.೪೫ಕ್ಕೆ ನಾವೆಲ್ಲರೂ ಅರಮನೆಯ ಮುಂಭಾಗದಲ್ಲಿದ್ದೆವು.

ಸರ್ಕಾರದವರು ಏನೋ ದೂರಾಲೋಚನೆ ಮಾಡಿದ ಹಾಗೆ ಹಿಂದಿನ ವರ್ಷಕ್ಕಿಂತ ಈ ವರ್ಷ ಪ್ರವೇಶ ದರವನ್ನು ಶೇಕಡ ೫೦ರಷ್ಟು ಇಳಿಸಿದ್ದರು. ಎಲ್ಲರೂ ಯಡ್ಡಿಗೆ ಜಯ್ ಅನ್ನಬೇಕಲ್ಲವಾ? ಸಂತಸದಿಂದ ಟಿಕೆಟ್ ತೆಗೆದುಕೊಂಡು ಹೊರದೇಶಗಳಿಂದ ಬಂದಿದ್ದ ಆಂಗ್ಲದ ಕೆಂಚ-ಕೆಂಚಿಯರನ್ನು ನೋಡಿಕೊಂಡು ಮುನ್ನುಗ್ಗಲು ಪ್ರಾರಂಭದಲ್ಲೇ ಅರಮನೆಯ ಸಂಪೂರ್ಣ ವೀಕ್ಷಣೆಯಲ್ಲಿ ನಿರತರಾದೆವು. ಬಹುಶಹ ಅರಮನೆಗೆ ಬಂದ ಖುಷಿಯಲ್ಲಿ ಮುಂಭಾಗದಲ್ಲಿದ್ದ ಫಲಕಗಳನ್ನು ಸರಿಯಾಗಿ ಗಮನಿಸಲಿಲ್ಲ ಅಂತ ಅನ್ಕೋತಿನಿ. ಅಲ್ಲಿ ಫೋಟೋ ತೆಗೆಯೋದು ನಿಷೇಧಿಸಲಾಗಿದೆ ಅನ್ನೋ ಬೋರ್ಡನ್ನು ಗಮನಿಸದೆ ಬೃಹದಾಕಾರದ ನಡುಗಂಬಗಳನ್ನು ನೋಡಿಕೊಂಡು ಮೇಲ್ಛಾವಣಿಯ ಕೆತ್ತನೆಯ ಕಲಾಕೃತಿ ಚಿತ್ರಗಳನ್ನು ರೆಪ್ಪೆ ಮಿಟುಕಿಸದೆ ಬೆರಗುಗೊಂಡವರಂತೆ ನೋಡುತ್ತಾ ನೋಡುತ್ತಾ ರಾಜ ಸಭೆ ನಡೆಯುವ ಜಾಗಕ್ಕೆ ತೆರಳಿದೆವು. ತೆರಳುವ ಮುನ್ನ ಆರಂಭದಲ್ಲೇ ಚಿನ್ನದ ಅಂಭಾರಿಯನ್ನೂ ಮತ್ತು ಹಳೇಕಾಲದಲ್ಲಿ ಉಪಯೋಗಿಸುತ್ತಿದ್ದ ಸಲಕರಣೆಗಳು ಮತ್ತು ಬೆಳ್ಳಿಯ ಪ್ರಶಸ್ತಿಗಳನ್ನು ವೀಕ್ಷಣೆಗೆ ಇಟ್ಟಿದ್ದರು. ಅವುಗಳನ್ನು ನೋಡುತ್ತಿದ್ದರೆ ನಾವೇ ಹೋಗಿ ಪ್ರತಿಯೊಂದನ್ನೂ ಸ್ಪರ್ಶಿಸಬೇಕು, ಅದರ ಮೇಲೆ ಕೂರಬೇಕು ಅಂತ ಅನ್ನಿಸುತ್ತದೆ. ಆದರೆ ಎನ್ ಮಾಡೋದು? ಎಲ್ಲವನ್ನೂ ಗಾಜಿನ ಪೆಟ್ಟಿಗೆಯೊಳಗೆ ಭದ್ರವಾಗಿ ಮುಚ್ಚಿ ಬೀಗ ಹಾಕಿದ್ದರು. ಕಣ್ಣು ಕೋರೈಸುವಂತೆ ಮಿಂಚುತ್ತಿದ್ದ ಆ ಸಲಕರಣೆ-ಸಾಮಾಗ್ರಿಗಳನ್ನು ಕಂಡ ನಮಗೆ ಶಾಶ್ವತವಾಗಿ ಮೊಬೈಲಿನಲ್ಲಿ ಭಾವಚಿತ್ರಗಳನ್ನು ತೆಗೆಯುವ ಮುಖಾ೦ತರ ಪ್ರಯತ್ನಿಸಲು ಇದ್ದಕ್ಕಿದ್ದ ಹಾಗೆ ಹಿಂದೆಯಿಂದಲೇ ಇಬ್ಬರು ದಫೇದಾರರು ಬಂದು ಕುಮಾರನ ಮೊಬೈಲನ್ನೂ, ಮತ್ತು ಪ್ರವೀಣನ ಮೊಬೈಲನ್ನೂ ಕಿತ್ತುಕೊಂಡರು. ಹಿಂದಿನ ಜನ್ಮದಲ್ಲಿ ಅರಮನೆಯ ಸೈನಿಕರಾಗಿದ್ದ ಅವರಿಗೆ ಈ ಜನ್ಮದಲ್ಲೂ ಕಾಲಕ್ಕೆ ತಕ್ಕಂತೆ ಪ್ರಗತಿಕಂಡ ಕೆಲಸದಂತೆ ಪೋಲೀಸ್ ಕೆಲಸ ಪ್ರಾಪ್ತಿಯಾಗಿತ್ತು. ಅಷ್ಟೊಂದು ದೊಡ್ಡ ಅರಮನೆಯಲ್ಲಿ ಅವರಾಡಿದ್ದೇ ಆಟವಾಗಿತ್ತು. ಎಷ್ಟು ಕೇಳಿದರೂ, ಅಂಗಲಾಚಿದರೂ ಮೊಬೈಲ್ ಅನ್ನು ಕೊಡುತ್ತಿರಲಿಲ್ಲ. ಮೊಬೈಲ್ ಕಿತ್ತುಕೊಂಡ ಅವರ ಬಾಯಿಂದ ಬಂದ ಮೊದಲ ಪ್ರಶ್ನೆಯೇ ನೀವು ಯಾವ ಊರಿನವರು ಎಂದು? ಬಹುಶಹ ನಾವೇನಾದರೂ ಹೊರ ರಾಜ್ಯದವರಾಗಿದ್ದಾರೆ ನಮಗೆ ಬೇರೆ ರೀತಿಯ ಅವರದೇ ಆದ ನಿಯಮದಂತೆ ಚಿಕಿತ್ಸೆ ದೊರೆಯುತ್ತಿತ್ತು ಅನ್ಸುತ್ತೆ. ಅದಕ್ಕೆ ನಾವೆಲ್ಲರೂ ಚಾಮರಾಜನಗರದಿಂದ ಬಂದಂತವರು. ಗೊತ್ತಿಲ್ಲದೆ ಫೋಟೋ ಕ್ಲಿಕ್ಕಿಸಿದ್ದೇವೆ. ದಯಮಾಡಿ ಕೊಡಿ ಎಂದು ಕೇಳಿದೆವು. ಊಹೂಂ... ಜಪ್ಪಯ್ಯ ಅಂದ್ರೂ ಆ ಕಾಂಚಾಣ ಸಿಪಾಯಿಗಳು ಜಗ್ಗುತ್ತಿಲ್ಲ.ಬಕ್ರಗಳು ಸಿಕ್ಕಿದ್ದಾರೆ, ಸ್ವಲ್ಪ ಕಾಲಕಳೆಯೋಣ ಎಂದು ಪ್ರಶ್ನೆ ಮೇಲೆ ಪ್ರಶ್ನೆ ಹಾಕತೊಡಗಿದರು. ಗುಂಪಿನಲ್ಲಿದ್ದ ನಮ್ಮನ್ನು ಚದುರಿಸಿದ ಪೊಲೀಸರು ಫೊಟೋ ತೆಗೆದ ಇಬ್ಬರನ್ನು ಬಿಟ್ಟು ಇನ್ಯಾರೂ ನಮ್ಮ ಮುಂದೆ ನಿಲ್ಲಬೇಡಿ ಎಂದು ಕಳುಹಿಸಿಬಿಟ್ಟರು. ನಾವು ಅಲ್ಲೇ ಮೂಲೆಯಲ್ಲಿ ನಿಂತು ಅವರ ಆಟ-ಪಾಟಗಳನ್ನು ಕೇಳಿಸಿಕೊಳ್ಳುತ್ತಿದ್ದೆವು. ಅವರ ಬಾಯಿಂದ ಬಂದ ಎರಡನೇ ಪ್ರಶ್ನೆ ನೀವಿಬ್ಬರೂ ಏನು ಓದುತ್ತಿದ್ದೀರಾ... ಕನ್ನಡ ಓದೋಕೆ ಬರೆಯೋಕೆ ಬರುತ್ತಾ..? ಎಂದು ಕೇಳಿದರು. ಅದಕ್ಕೆ ನಮ್ಮ ಪ್ರವೀಣ, ನಾವಿಬ್ಬರೂ ಇಲ್ಲೇ ಮೈಸೂರಿನಲ್ಲಿ ಎಂ.ಟೆಕ್ ಮಾಡುತ್ತಿದ್ದೇವೆ ಎಂದ. ಇದ್ಯಾವುದೋ ಬಾರೀ ಕುಳ ಎಂದು ತಿಳಿದ ಪೊಲೀಸರು, ನೀವು ಎಂ.ಟೆಕ್ ವಿದ್ಯಾರ್ಥಿಗಳಾಗಿ ಅದರಲ್ಲೂ ನಮ್ಮ ಕನ್ನಡಿಗರೇ ಆಗಿ ಫೋಟೋ ತೆಗಿದಿದ್ದೀರಲ್ಲಾ ಅದೂ ಇದೂ ಅಂತ ಕುಯ್ಯುವುದಕ್ಕೆ ಶುರುಮಾಡಿದರು. ನಾವಿದ್ದ ಸ್ಥಳದಲ್ಲಿ ಜನರ್ಯಾರೂ ಇಲ್ಲದಿದ್ದರೆ ನಾವೆಲ್ಲರೂ ಸೇರಿ ಆ ಇಬ್ಬರು ಪೊಲೀಸರಿಗೆ ನಾಲ್ಕು ತದುಕಿ ಮೂಲೆಯಲ್ಲಿ ಸುಣ್ಣ ಹೊಡೆದ ಮಂಗನಂತೆ ಕೂರಿಸಿ ಹೋಗುತ್ತಿದ್ದೆವು. ವೀಕ್ಷಣೆಗೆ ನೆರದಿದ್ದ ಜನರೆಲ್ಲರೂ ಪೊಲೀಸರನ್ನೇ ದುರುಗುಟ್ಟಿಕೊಂಡು ನೋಡಲು, ಇನ್ನೂ ಹೆಚ್ಚು ಗಲಭೆ ಮಾಡಿಕೊಳ್ಳುವುದು ಬೇಡ ಎಂದು ನೇರವಾಗಿ ೫೦ ರೂಪಾಯಿ ಕೊಡಿ ಎಂದು ನಾಚಿಕೆ ಇಲ್ಲದೇ ಬಾಯಿಬಿಟ್ಟು ಕೇಳಿಬಿಟ್ಟಿದ್ದಾರೆ. ಅಪ್ಪಿ-ತಪ್ಪಿ ಪೊಲೀಸರು ಬಾಯಿ ಬಿಟ್ಟು ಕೇಳದಿದ್ದರೆ ಇವರಿಬ್ಬರೂ ೧/೨ಕ್ಕೆ ೧ರಷ್ಟು ಕೊಟ್ಟು ಬರುತ್ತಿದ್ದರು.ಏನೋ ಸುಲಭವಾಗಿ ಗರ್ಭ ಧರಿಸಿದಂತೆ ಈ ನಮ್ಮ ಕುಮಾರ, ಪ್ರವೀಣ ಇಬ್ಬರಿಂದ ೫೦ ರೂಪಾಯಿ ಕೊಟ್ಟು ಮೆಲ್ಲನೆ ಮೊಬೈಲ್ ಕೈಗೆ ಸೇರುತ್ತಿದ್ದಂತೆಯೇ ಜಾರಿಕೊಂಡರು. ಏನೇ ಆಗಲಿ, ಈ ಪೊಲೀಸರ ಜೊತೆ ಆಟ ಆಡೋದು ಕಷ್ಟ ಅಲ್ವಾ? ಕಡಿಮೆ ಮಾತಾಡುದ್ರೂ ದಂಡ, ಹೆಚ್ಚಗೆ ಮಾತಾಡುದ್ರೂ ದಂಡ ಹಾಕ್ತಾರೆ. ಒಂದು ರೀತಿಯ ಬೇಟೆ ನಾಯಿಗಳಿದ್ದ ಹಾಗೆ ಅಂದರೆ ತಪ್ಪಾಗಲಾರದು. ಈ ಗೋಜಿನ ಮಧ್ಯೆ ನನಗೆ ನಗೂ ಬಂದ ವಿಷಯ ಎಂದರೆ, ನಮ್ಮ ರಾಜಾಧಿ ರಾಜ ಇವರಿಬ್ಬರ ಮೊಬೈಲ ಅನ್ನು ಕಿತ್ತುಕೊಂಡಿದ್ದು ನೋಡಿ ಡೈರೆಕ್ಟ್ ಆಗಿ ತನ್ನ ಮೊಬೈಲ್ ನನ್ನು ಸ್ವಿಚ್ ಆಫ್ ಮಾಡಿ ಇಟ್ಟು ಬಿಟ್ಟ. ಅವನಿಗೆ ಅಷ್ಟೊಂದು ಹೆದರಿಕೆ ಆಗಿದ್ದರೆ ಸೈಲೆಂಟ್ ಮೋಡಿನಲ್ಲಾದರೂ ಇಡಬಹುದಿತ್ತಲ್ಲವಾ...!!!? ಒಳಗೊಳಗೇ ನಕ್ಕ ನಾನು ಪೊಲೀಸರಿಂದ ಬಿಡಿಸಿಕೊಂಡು ಬಂದ ಸಂಭ್ರಮದಲ್ಲಿ ಮುಂದಿನ ವೀಕ್ಷಣೆಗೆ ಬೇಗಬೇಗನೆ ಪಲಾಯನ ಮಾಡಿದೆವು. ಆ ಅರಮನೆಯ ಮಧ್ಯ ಭಾಗದಲ್ಲಿ ನಾಟ್ಯಕಲಾವಿದರ ನೃತ್ಯ ಪ್ರದರ್ಶನಕ್ಕೆಂದೇ ಕಟ್ಟಿಸಿದ್ದ ಸ್ಥಳ ಎಂದರೆ, ನಾವು ಟೀ.ವೀಲಿ ನೋಡಿರುವ ಇನ್ನೂ ಮಾಸದಿರುವ "ಯಜಮಾನ" ಚಿತ್ರದ "ಪ್ರೇಮ ಚಂದ್ರಮಾ ಕೈಗೆ ಸಿಗುವುದೇ ಹೇಳೆ ತನ್ಗಾಳಿ" ಅನ್ನೋ ಹಾಡಿನ ಚಿತ್ರೀಕರಣ ಆ ಸ್ಥಳದಲ್ಲೇ ತೆಗೆದದ್ದು. ಆ ನೀಳವಾದ ಉದ್ದನೆಯ ಕಂಬಗಳು ತನ್ನ ಬೃಹದಾಕಾರದ ವರ್ಣರಂಜಿತ ಹಸಿರುಗಾಜಿನ ಗೋಪುರವನ್ನು ಹೊತ್ತು ಮೆರೆಯುತ್ತಾ ನಮ್ಮನ್ನೂ ಆ ಐತಿಹಾಸಿಕ ಕಾಲಕ್ಕೆ ಕರೆದೊಯ್ಯುವ ಹಾಗೆ ಬಲೆಬೀಸಿ ನಮ್ಮಿಂದಲೂ ಒಂದೆರಡು ಸ್ಟೆಪ್ ನೃತ್ಯ ಮಾಡುವ ಹಾಗೆ ಅಲ್ಲಿ ಆವರಿಸಿದ್ದ ಮೌನ ಮುದ ತಂದಿತು.ಹೀಗೆಯೇ ಅರಮನೆಯಲ್ಲಿದ್ದ ರಾಜನ ಕಿರೀಟ, ಕತ್ತಿ ಮುಂತಾದ ಮುಖ್ಯವಾದ ವಸ್ತುಗಳನ್ನು ಪ್ರದರ್ಶನಕ್ಕಿಟ್ಟಿದ್ದಾರೆ. ನಿಜಕ್ಕೂ ಹೇಳಬೇಕೆಂದರೆ ಹಿಂದಿನ ಕಾಲದಲ್ಲಿ ಪ್ರತಿಯೊಂದು ಕಲೆಗೂ, ಪ್ರತಿಯೊಂದು ಸಾಹಿತ್ಯಕ್ಕೂ, ಪ್ರತಿಯೊಂದು ಮನೋರಂಜನೆಯ ಆಟಗಳಿಗೂ ತನ್ನದೇ ಆದ ಪ್ರಖ್ಯಾತಿಯ ಜೊತೆಗೆ ಆಗಿನ ಕಾಲದ ಸಮಾಜದಲ್ಲಿ ತಲೆಯೆತ್ತಿ ನಿಂತಿತ್ತು ಅಂತ ಹೇಳಿದ್ರೆ ತಪ್ಪಾಗಲಾರದು. ಆದರೆ ಈಗಿನ ಕಾಲದಲ್ಲಿ ಚಿತ್ರಕಲೆಗೆ ನಮ್ಮ ಜನ, ನಮ್ಮ ಸರ್ಕಾರ ಆದ್ಯತೆ ಕೊಡದಿರುವುದು ಒಂದು ರೀತಿಯ ದುರಾದೃಷ್ಟಕರವಾದ ವಿಷಯ. ಅರಮನೆಯ ಪ್ರತಿಯೊಂದು ಗೋಡೆಯೂ ಬಣ್ಣ ಬಣ್ಣಗಳಿಂದ ಕೂಡಿ ವಿಶಿಷ್ಟತೆಯ ನೇರಕ್ಕೆ ತನ್ನದೇ ರೀತಿಯಲ್ಲಿ ಪ್ರತಿಯೊಬ್ಬರಿಗೂ ಅರಿವು ಮೂಡುವ ಹಾಗೆ ಚಿತ್ರಗಳಲ್ಲಿಯೇ ತಿಳಿಹೇಳುತ್ತಿದ್ದುದ್ದು ನಿಜ ಸಂಗತಿ. ಅರಮನೆಯ ಸಭೆ ಸೇರುವ ಜಾಗದಲ್ಲೂ ಸಹ ಪ್ರತಿಯೊಂದು ಗೋಡೆಯಲ್ಲಿ ಮುದ್ರಿತವಾಗಿದ್ದ ಅಚ್ಚ ಕನ್ನಡತಿ ನಮ್ಮ ತಾಯಿ ಭುವನೇಶ್ವರಿಯ ಚಿತ್ರಗಳು., ಮತ್ತು ಆ ತಾಯಿಯ ಕೋಮಲ ಮೃದುಗೆನ್ನೆಯ ತಂಪು ತಟ್ಟಿ ನೆಮ್ಮದಿಯಿಂದ ನೇವರಿಸುವ ಮೂಲಕ ಆಡಳಿತವಾಡಿದ ಆಸ್ಥಾನ ಪ್ರಭುಗಳ ನಾಡು ಎಂದರೆ ನಮ್ಮ ಮೈಸೂರು. ಹೀಗೆ ಅರಮನೆಯ ವೀಕ್ಷಣೆ ಮುಗಿಸಿ ಹಿಂಭಾಗದಲ್ಲಿದ್ದ ವಿಶೇಷವಾದ ರಾಜ-ಮಹಾರಾಜರುಗಳು ಮಲಗುತ್ತಿದ್ದಂತಹ ಹಾಗೂ ವಸ್ತು ಪ್ರದರ್ಶನ ಏರ್ಪಡಿಸಿದ್ದ ಜಾಗಕ್ಕೆ ತಲಾ ೧೦ರೂಪಾಯಿ ಕೊಟ್ಟು ಒಳಸೇರಿದೆವು. ಆ ಕಟ್ಟಡದಲ್ಲಿ ಹಿಂದಿನ ಕಾಲದಿಂದಲೂ ಉಪಯೋಗಿಸಿದ ವಿಧವಿಧವಾದ ಕತ್ತಿಗಳು, ಈಟಿ, ಭರ್ಜಿಗಳು, ಮತ್ತು ನಾಟ್ಯಕ್ಕೆ ಉಪಯೋಗಿಸಿದ್ದ ಕಾಲುಗೆಜ್ಜೆ, ವಸ್ತ್ರ ವೈಡೂರ್ಯ ಹಾಗೂ ರಾಜರು ಉಡುತ್ತಿದ್ದ ಉಡುಪುಗಳಿಂದ ಹಿಡಿದು ಎಲ್ಲವನ್ನೂ ವೀಕ್ಷಣೆಗೆ ಇಟ್ಟಿದ್ದಾರೆ. ಇನ್ನೂ ಮೊದಲನೆ ಅಂತಸ್ತಿಗೆ ಹೋದರೆ ಹಳೇಕಾಲದಲ್ಲಿ ಆಗ ತಾನೇ ಆಂಗ್ಲಿಗರು ಕಂಡುಹಿಡಿದಿದ್ದ ಟಿ.ವಿ, ಗ್ರಾಮಾಫೋನುಗಳು, ಸುಗಂಧದ್ರವ್ಯಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದರು. ಈ ನಮ್ಮ ಗೆಳೆಯರೆಲ್ಲರೂ ಹಳೇಕಾಲಕ್ಕೆ ಹೋಗಿಬ೦ದಿದ್ದರೋ ನನಗೆ ಗೊತ್ತಿಲ್ಲ. ಆದರೆ ನಾನಂತೂ ಚಾಚೂ ತಪ್ಪದೇ ಸೈನಿಕನಿ೦ದ ಹಿಡಿದು ರಾಜನವರೆಗೂ ಕೇವಲ ೩೦ನಿಮಿಷದಲ್ಲಿ ಆಳ್ವಿಕೆ ಮಾಡಿ ಬಂದೆ.ಹೀಗೆ ಹೆಜ್ಜೆ ಹೆಜ್ಜೆಗೂ ನಮಗೊ೦ದೊ೦ದು ಹೊಸ ಹೊಸ ವಿಷಯಗಳು, ಆಲೋಚನೆಗಳು, ಹೊಸ ಹೊಸ ಪ್ರಪಂಚಕ್ಕೆ ಕರೆದೊಯ್ದಿದ್ದರಿಂದ ನಮಗ್ಯಾರಿಗೂ ಬೇಜಾರು ಅಂತ ಅನ್ನಿಸಲಿಲ್ಲ. ಅರಮನೆಯ ಮೂಲೆ ಮೂಲೆಯಲ್ಲಿಯೂ ಆರಡಿ-ಮೂರಡಿ ಅಳತೆ ಮಾಡಿಕೊನ್ಡು ಬಂದ ನಮಗೆ ಮುಂದಿನ ಬೇಟೆ ನಮ್ಮ ನೆಚ್ಚಿನ ಸ್ಥಳ ಅರೆನಗ್ನರಾಗುವ ಆಸೆಯ ತಾಣ ಬಲ್ಮುರಿಯಾಗಿತ್ತು. ಅರಮನೆಯ ವೀಕ್ಷಣೆಯನ್ನು ಮುಗಿಸಿ ಬ೦ದಾಗ ಸಮಯ ಸುಮಾರು ೧.೩೦ ಆಗಿತ್ತು ಅನ್ಸುತ್ತೆ. ತುಂಬಾ ದಿನ ಆದ ನಂತರ ಮೈಸೂರು ವೀಕ್ಷಣೆಯ ಬಗ್ಗೆ ಬರೆಯುತ್ತಿರುವುದರಿಂದ ನಿಖರವಾದ ಸಮಯ ನನಗೆ ಮರೆತುಹೋಗಿದೆ. ಅರಮನೆಯ ಮುಂದೆಯೇ ಮಾರಾಟಕ್ಕಿಟ್ಟಿದ್ದ ವಸ್ತುಗಳನ್ನು ನೋಡಿಕೊಂಡು ಕಾರುಹತ್ತಿದ ನಾವು ೩೫ ರಿಂದ ೪೦ ನಿಮಿಷದೊಳಗೆ ಬಲ್ಮುರಿಯ ತಂಪು ತಾಣಕ್ಕೆ ಲಗ್ಗೆ ಹಾಕಿದೆವು. ಅಗಲೆ ಹೇಳಿದ ಹಾಗೆ ಪ್ರತಿಯೊಂದು ಸ್ಥಳದಲ್ಲೂ ಕುತೂಹಲ, ಹುಮ್ಮಸ್ಸಿದ್ದರಿ೦ದ ನಮಗ್ಯಾರಿಗೂ ಹೊಟ್ಟೆ ಹಸಿವು ಅನ್ನಿಸಲೇ ಇಲ್ಲ. ಪಾಪ, ನಮ್ಮ ಡ್ರೈವರ್ ಅಣ್ಣಾವ್ರು ಗಡಿಯಾರದ ಕಾಲಚಕ್ರಕ್ಕೆ ಪಣತೊಟ್ಟು ನಿಂತಂತೆ ಎಫ್.ಎಂ ರೇಡಿಯೋ ಹಾಡು ಹಾಕಿಕೊಂಡು ಸರಾಗವಾಗಿ ಲೆಕ್ಕಹಾಕಿದ ವೇಳೆಗಿಂತಲೂ ಬೇಗ ಕರೆದೊಯ್ಯುತ್ತಿದ್ದರು.

ಮೊದಲೇ ಹೇಳಿದ್ದೆನಲ್ಲಾ ನಾವು ಹೋಗಿದ್ದು ಭಾನುವಾರ ಅಂತಾ... ಚಾಮರಾಜನಗರದಲ್ಲಿ ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗಿಂತಲೂ ಹೆಚ್ಚಾಗಿ ಬಲ್ಮುರಿಯಲ್ಲಿ ಜನರು ಹೆಚ್ಚಾಗಿ ಸೇರಿದ್ದರು. ಪುಟಾಣಿಗಳಿಂದ ಹಿಡಿದು, ಪ್ರಾಯಕ್ಕೆ ಬಂದ ಯುವಕ, ಯುವತಿಯರು, ಮತ್ತು ಆಗ ತನೇ ಮದುವೆಯಾಗಿದ್ದ ದಂಪತಿಗಳು, ಇತ್ತ ದೊಡ್ಡವರಿಗೆ ದೊಡ್ಡವರೂ ಅಲ್ಲ, ಚಿಕ್ಕವರಿಗೆ ತೀರಾ ಚಿಕ್ಕವರೂ ಅಲ್ಲದಂತೆ ಕಾಣುವ ಅ೦ಟಿ, ಅಂಕಲ್ ಹಾಗೂ ಕೆಲವು ಬೆರಳೆಣಿಕೆಯಷ್ಟು ಹಣ್ಣು ಹಣ್ಣು ತಾತಂದಿರು-ಅಜ್ಜಿಯಂದಿರು ಬಂದಿದ್ದರು. ಅಲ್ಲಿಗೆ ಕೂಡಿದರೆ, ಕಳೆದರೆ, ಭಾಗಿಸಿದರೆ, ಗುಣಿಸಿದರೆ ಯುವಕ ಯುವತಿಯರದೇ ಹಾಜರಾತಿಯಲ್ಲಿ ಮೇಲುಗೈ. ಮೊದಮೊದಲು ಬಲ್ಮುರಿಗೆ ಕಾಲಿಟ್ಟ ನನಗೆ ಅನಿಸಿದ್ದು ಐಸ್-ಕ್ರೀಮ್, ತಂಪು ಪಾನೀಯಗಳನ್ನು ತಯಾರಿಸುವ ಜಾಗ ಇದೆ ಏನೋ ಅನ್ನಿಸಿತ್ತು. ಏಕೆಂದರೆ ಆ ಪ್ರದೇಶ ಅಷ್ಟು ನಿಶಬ್ದವಾಗಿ ತಂಪಾಗಿ ತ೦ಗಾಳಿ ಬೀಸುತ್ತಾ ಒಬ್ಬ ಮನುಷ್ಯನಿಗೆ ಎಷ್ಟು ಆಮ್ಲಜನಕ ಬೇಕೋ ಅಷ್ಟನ್ನೂ ಸಂಪೂರ್ಣವಾಗಿ ವಾಯುದೇವ ಧಾರೆಯೆರೆದು ಕೊಡುವುದರ ಜೊತೆಗೆ ಏರ್ ಕಂಡೀಷನ್ ತರಹ ಪರಿಸರವನ್ನು ಕಾಪಾಡಿದ್ದ. ಹೋಗುಹೋಗುತ ಗಳಿಗೆ-ಗಳಿಗೆಗೂ ಕಾರಿನ ಚಕ್ರ ಚಲಿಸಿದ೦ತೆ ಸ್ಥಳ ಹತ್ತಿರವಾದಂತೆ ಏನೋ ರೋಮಾ೦ಚನದ ಜೊತೆಗೆ ನೀರಿನೊಳಗೆ ಹಾರಿಬೀಳುವ ಆಸೆ ತುಂಬಾ ಇತ್ತು. ಕಾರಿನ್ದ ಇಳಿದ ನಮಗೆ ಮೊದಲು ಕಂಡ ದೃಶ್ಯ ಆ ಸುಮಧುರವಾದ ಜುಳುಜುಳುನಾದದಿನ್ದ ಮೇಘದೂತನನ್ನು ಆಹ್ವಾನ ಮಾಡುವಂತೆ ಭಾಸವಾದ ಪ್ರಕೃತಿ. ಜೀವ ಕೊಡಲೂ ಸಿದ್ಧ, ಜೀವ ತೆಗೆಯಲೂ ಸಿದ್ಧ ಎಂಬಂತೆ ಮೌನವಾಗಿ ಅಂದರೆ (silent killer) ನಂತೆ ನಮ್ಮನ್ನು ಬರಮಾಡಿಕೊಂಡಿತು. ಎಲ್ಲಿ ನೋಡಿದರೂ ಜನ. ಅರೆ ನಗ್ನರಾಗಿ ಬರೇ ಬನಿಯನ್, ನಿಕ್ಕರ್ ಹಾಕಿಕೊಂಡು ನೀರಿಗೆ ಧುಮುಕುತ್ತಿದ್ದಾರೆ. ಅಲ್ಲಲ್ಲಿ ಲಲನಾಮಣಿಗಳು ತನ್ನದೇ ಆದ ರೀತಿಯಲ್ಲಿ ಎಲ್ಲರನ್ನೂ ಆಕರ್ಷಿಸುವಂತೆ ಕಿರುಚಾಡುತ್ತಾ ಬಂಡೆ ಮೇಲೆ ಕುಳಿತು ನೀರೆರಚುತ್ತಾ ಆಡುವ ವಿಧಾನ ನಿಂತ ಜಾಗದಿ೦ದಲೇ ಧುಮುಕಿ ಬಾ ಎಂದು ಕರೆಯುತ್ತಿತ್ತು. ಕಾರಿನಿ೦ದ ಇಳಿದವರೇ, ತಡಮಾಡದೆ ಎಲ್ಲರೂ ಮೇಲ್ಮೈ ಅಂಗಿಯನ್ನು ಬಿಚ್ಚೆಸೆದು "ದಿಲ್ ಚಹತಾಹೆ" ನಲ್ಲಿ ಓಡಿದ ಹಾಗೆ ಓಡೋಡಿ ನೀರಿಗೆ ಕಾಲಿಟ್ಟೆವು. ನಾವು ಹೋಗುವವರೆಗೂ ನೀರಿನ ಹರಿವು ಶಾಂತವಾದ ರೀತಿಯಲ್ಲಿ ಹರಿಯುತ್ತಿತ್ತು. ಬಹುಶಹ ನಾವು ಬಂದಿದ್ದು ಜಲದೇವತೆಗೂ ಖುಷಿಯಾಯಿತು ಅಂತ ಅನ್ಸುತ್ತೆ. ಒಂದು ಹಿಮ್ಮಡಿ ಮಟ್ಟದಿಂದ ೧ರಿಂದ ೨ ಇಂಚು ಹೆಚ್ಚಾಗಿ ಹರಿಯಲು ಶುರುವಾಯಿತು.



ನೀರಿನಲ್ಲಿ ಧುಮುಕಿದ ನಮಗೆ ಏನೋ ಒಂದು ರೀತಿಯ ಆನಂದ.. ಕೂತ ಜಾಗದಲ್ಲೇ ಕೂತು ಒಬ್ಬರಿಗೊಬ್ಬರು ನೀರೆರಚುತ್ತಾ ಯಾರಿಗಿಂತ ನಾವೇನೂ ಕಡಿಮಇಲ್ಲ ಎಂದು ಕಿರುಚಾಡಿದೆವು. ಹೊರಳಾಡಿದೆವು. ಈಜು ಬರದಿದ್ದರೂ ಕೂತಲ್ಲಿಯೇ ಮಲಗಿ ಕೈ ಬಡಿದೆವು. ಮುಂದೆ ಸಾಗಿದಂತೆ ಪಾಚಿಗಟ್ಟಿದ ಕಲ್ಲು-ಬಂಡೆಗಳು ಹೊಸದಾಗಿ ಬಂದವರನ್ನು Ryaಗಿಂಗ್ ಮಾಡುವಂತೆ ಕಾಲುಕೊಟ್ಟಿ ನಮ್ಮನ್ನು ಬೀಳಿಸುತ್ತಿತ್ತು. ನಿಜಕ್ಕೂ ನಾವು ಆ ಪ್ರಕೃತಿಯ ಸೊಬಗಿನ ಜೊತೆ ಆಟವಾಡಿದ್ದು ಬೇರೆಡೆ ಬೆಂಗಳೂರು-ಮೈಸೂರು ಪಟ್ಟಣದ ಒಳಗೆ ದುಡ್ಡು ಕೊಟ್ಟು ಈಜು ಹೊಡೆಯುವ ಈಜುಕೊಳದಲ್ಲಿ ಸಿಗುವುದಿಲ್ಲ. ನೀರಿನ ಒಳಹರಿವು ಹೆಚ್ಚಾಗದಿರಲಿ ಎಂದು ಕಟ್ಟಿದ ತಡೆಗೋಡೆಯನ್ನು ಸಂಪೂರ್ಣ ಆವರಿಸಿ ಭೋರ್ಗರೆದು ಧುಮುಕುತ್ತಿದ್ದ ಗವಿಯಂತಿದ್ದ ಆ ನೀರಿನ ಒಳಗೆ ನಾವೆಲ್ಲರೂ ಹೋಗಿ ಸಂತಸಪಟ್ಟಿದ್ದು ಇಂದಿಗೂ ಎಂದೂ ಮರೆಯದ ಸ್ಮರಿಕೆಯ ಅಚ್ಚು. ಮಧ್ಯ ಮಧ್ಯ ಚಳಿ, ನಡುಕ ಉಂಟಾದರೂ ಎದ್ದು ಬರುವ ಮನಸಿರದೆ ಅಲ್ಲೇ ಕೂತು ದಬದಬನೆ ಕೈ ಬಡಿಯುತ್ತಿದ್ದೆವು. ಸುಮಾರು ನಿರಂತರವಾಗಿ ೨.೩೦ ರಿಂದ ಸಂಜೆ ೫.೦೦ ರವರೆಗೂ ಅಲ್ಲೇ ಕಾಲಕಳೆದು ಬಂದು ಹೋಗುವವರನ್ನು ರೇಗಿಸಿಕೊಂಡು ಸುಮ್ಮಾನವನ್ನು ಹಿಗ್ಗಿಸಿ ನಲಿದಾಡಿದೆವು. ಸಮಯ ಸಂಜೆ ೫.೦೦ ಆಗಿತ್ತು. ಬೆಳಿಗ್ಗೆಯಿಂದ ಸಮಯ ಅದೇಗೆ ಓಡಿಹೊಯಿತೋ ನಮಗೆ ಗೊತ್ತಿಲ್ಲ. ನಮ್ಮೆಲ್ಲರ ಸ್ಥಿತಿ ಪ್ರಜ್ಞೆಯನ್ನು ಮರೆಸಿ ಸರಾಗವಾಗಿ ಸುಸೂತ್ರವಾಗಿ ಸಂತೋಷವನ್ನು ನೀಡಿ ಕಾಲಚಕ್ರ ಉರುಳಿತ್ತು. ಬೆಳಿಗ್ಗೆ ಚಾಮುಂಡಿ ಬೆಟ್ಟದಲ್ಲಿ ತಿಂದಿದ್ದ ಆ ೨-೩ ಇಡ್ಲಿ ಇನ್ನೂ ಹೊಟ್ಟೆಯಲ್ಲಿ ಅರಗದೆ ಇರುತ್ತದೆಯೇ? ಎಲ್ಲವನ್ನೂ ಸಂಪೂರ್ಣವಾಗಿ ಜೀರ್ಣಿಸಿಕೊಂಡು ಮತ್ತೆ ತಲೆಯಿತ್ತಿ ನಮ್ಮ ಬಾಯಿಯನ್ನೇ ನೋಡುತ್ತಿತ್ತು ಆ ನಮ್ಮ ಜೀರ್ಣಕ್ರಿಯೆ. ಸಮಯ ಮೀರುವ ಮುನ್ನ ನಮ್ಮ ಕೊನೆಯ ಕನಸಾಗಿದ್ದ "ಮೈಸೂರು ಜಿಲ್ಲಾ ವಸ್ತು ಪ್ರದರ್ಶನ" ನೋಡವ ನಿಟ್ಟಿನಲ್ಲಿ ಹರಿಯುವ ನೀರಲ್ಲಿ ನೀರಾಗಿದ್ದ ನಾವು ಎದ್ದು ಹೊರಬಂದೆವು. ಹೊಟ್ಟೆ ತುಂಬಾ ಹಸಿಯುತ್ತಿತ್ತು ಎಂದಿದ್ದೆನಲ್ಲ, ನೀರು ಬಿಟ್ಟು ಹೊರಬಂದ ನಮಗೆ ಇನ್ನೂ ಹೆಚ್ಚಾಗಿ ಹಸಿಯಲು ಪ್ರಾರಂಭಿಸಿತು. ಪಕ್ಕದಲ್ಲೇ ಇದ್ದ ಮೀನು ಅಂಗಡಿಯಲ್ಲಿ, ಅದೂ ಮುಸ್ಸಂಜೆ ಹೊತ್ತಿನಲ್ಲಿ ಬಾಯಿಯಿಂದ ನೀರೂರಿಸುವ ಹಾಗೆ ಗಮಗಮಿಸುತ ಸುವಾಸನೆ ನಮ್ಮನ್ನು ಬರಸೆಳೆಯಿತು. ವಾಸನೆಯನ್ನು ಹಿಂಭಾಲಿಸಿಯೇ ಹೋದ ನಾವು ಒಂದೆರಡು ಫಿಶ್ ಫ್ರೈ ಖರೀದಿಸಿ ಕಣ್ಣು ತಂಪಿನ ಜೊತೆ ರುಚಿಕರವಾದ ಸ್ವಾದವನ್ನು ತಿನ್ನುತ್ತಾ ಚಪ್ಪರಿಸಿಬಂದು ಕಾರು ಹತ್ತಿ ಕುಳಿತೆವು. ಆನಂತರ ನೇರವಾಗಿ ನಾವು ಹೊರಟಿದ್ದು ಮಧ್ಯಾಹ್ನದಲ್ಲಿ ಊಟ ಮಾಡಿ ತೇಗಬೇಕಿದ್ದ ಭಕ್ಷ್ಯ ಭೋಜನದೆಡೆಗೆ. ಬಲ್ಮುರಿ ಬಿಟ್ಟು ಹೊರಬಂದ ನಮಗೆ ಮಾರ್ಗ ಮಧ್ಯೆ ಫಾಲ್ಕನ್ ಕಂಪೆನಿಯ ಹತ್ತಿರವಿದ್ದ ಯಾವುದೋ ಜಂಗಲ್ ಡಾಬಾ ಅನ್ನೋದಕ್ಕೆ ಲಗ್ಗೆ ಹಾಕಿದೆವು. ನಾವು ಮುತ್ತಿಗೆ ಹಾಕಿದ ರಭಸ ಹೇಗಿತ್ತು ಅಂದರೆ ಕಾಡಿಗೆ ಅಂಟಿಕೊಂಡಿದ್ದ ಹೊಲಗಳಿಗೆ ಯಾವ ರೀತಿ ಕಾಡನೆಗಳು ಲಗ್ಗೆಹಾಕಿ ಅಬ್ಬರದಿಂದ ಮೆರೆದಾಡಿ ಬೆಳೆಗಳನ್ನು ಚೆಲ್ಲಾಪಿಲ್ಲಿ ಮಾಡಿ ಹೋಗುತ್ತದೆಯೋ ಅದೇ ರೀತಿ ನಮ್ಮ ಹಸಿವಿನ ಕಡಲು ಬಿಸಿ ಸುರಿದು ಉಸಿರಾಡುತ್ತಿತ್ತು. ಎಲ್ಲರೂ ತಮಗೆ ಬೇಕಾದ ಇಷ್ಟವಾದ ವ್ಯಂಜನಗಳನ್ನು ತೆಗೆದುಕೊಂಡು ಕೊನೆಯ ಪಂಕ್ತಿಯಲ್ಲಿ ಉಳಿದಿದ್ದ ವಸ್ತು ಪ್ರದರ್ಶನಕ್ಕೆ ಹೊರಟೆವು.

ಹೀಗೆ ಊಟ ಮುಗಿಸಿ ವಸ್ತುಪ್ರದರ್ಶನಕ್ಕೆ ತಲುಪುವಾಗ ಸಮಯ ಅಂದಾಜು ೬.೩೦ ಆಗಿತ್ತು. ಅಲ್ಲಿ ನಮಗಾಗಿ ಕಾದು ನಿಂತಿದ್ದ ಮತ್ತೊಬ್ಬ ಅತಿಥಿ ಅಂದರೆ ಎಂ.ಬಿ.ರವಿಶಂಕರ್. ಉದಾರ ಮನಸ್ಸಿಂದ ಮೊದಲೇ ನಮಗೆಲ್ಲ ಟಿಕೆಟ್ ಖರೀದಿಸಿ ಅಪ್ಪುಗೆಯೊಂದಿಗೆ ಸ್ವಾಗತಿಸಿದ. ಗರ್ಭಿಣಿ ಹೆಂಗಸರಿಗೆ ಉಳಿಮಾವಿನಕಾಯಿ ಕೊಟ್ಟು ಬಯಕೆ ತೀರಿಸುವ ಹಾಗೆ ನಮ್ಮ ಸುನಿಲ್ ಟೈಲರ್^ರವರ ಮಹಧಾಸೆಯನ್ನು ತೀರಿಸುವ ಸಮಯ ನಮಗೆ ಬಂದೊದಗಿತ್ತು. ಯಾರ್ಯಾರು ಏನೇನು ಆಟವಾಡಿದರೋ ನನಗೆ ಗೊತ್ತಿಲ್ಲ. ಆದರೆ ನಮ್ಮ ಗಟೋದ್ಗಜನಾದ ಸುನಿಲ್ ಎಲ್ಲ ರೀತಿಯ ಆಟಗಳನ್ನು ಸಂತೃಪ್ತಿಯಾಗುವ ಹಾಗೆ ಆಟವಾಡಿದ. ಆತನ ಮುಖದಲ್ಲಿ ಬಾಡದ ಮಂದಹಾಸ ಕಂಡಿದ್ದು ಆ ಸಮಯದಲ್ಲೇ.. ಅವನ ಖುಷಿ, ಅವನ ಸಂತೋಷ, ಅವನ ಹರುಷ ಚಿಕ್ಕ ಮಕ್ಕಳ ನಗುಬಯಕೆಯನ್ನೂ ಮರೆಮಾಚುವಂತಿತ್ತು. ಒಟ್ಟಿನಲ್ಲಿ ಮುಂದಿನ ವರ್ಷ ಮೈಸೂರು ವಸ್ತುಪ್ರದರ್ಶನ ಬರುವವರೆಗೂ ಅವನಿಗೆ ಇದರ ನೆನಪು ಬರುವುದಿಲ್ಲ ಅಂತ ಅಂದುಕೊಂಡಿದ್ದೇನೆ. ಇನ್ನು ನನಗೆ ಬುದ್ಧಿ ತಿಳಿದ ಮಟ್ಟಿನಿಂದ ಹಲವಾರು ಬಾರಿ ದ.ವ.ಗೆ ಹೊಗಿಬಂದಿದ್ದರೂ ಎಂದೂ ಜಾಯಿಂಟ್ ವ್ಹೀಲ್, ೯೦ ಡಿಗ್ರಿ ಸುತ್ತಳಿ, ೩೬೦ ಡಿಗ್ರಿ ಸುತ್ತಳಿ, ಕೊಲಂಬಸ್ ಆಟಗಳಿಗೆ ಪರಿಚಯವಿರಲಿಲ್ಲ. ಅವೆಲ್ಲವೂ ಬರೀ ಚಿಕ್ಕ ಮಕ್ಕಳಿಗೆ ಅಂತ ದೂರದಿಂದಲೇ ನೋಡಿಕೊಂಡು ಬರುತ್ತಿದ್ದೆ. ಅದ್ಯಾಕೋ ಏನೋ, ಈ ನಮ್ಮ ಜೂನಿಯರ್ ದೊಡ್ಡಣ್ಣ ಸುನೀಲ್ ನೋಡಿದ ಮೇಲೆ ನಮಗೂ ಆಟವಾಡಬೇಕು ಅಂತ ಅನ್ಸಿತ್ತು. ಆದರೂ ೪೦ ರೂಪಾಯಿ ಕೊಟ್ಟು ಯಾರು ಹೋಗೋದು. ಸುಮ್ಮನೆ ೫ ನಿಮಿಷದಲ್ಲಿ ಜೇಬು ಖಾಲಿಯಗುತ್ತೆ ಅಂತ ಸುಮ್ಮನಿದ್ದೆ. ಆದರೆ ಈ ನಮ್ಮ "ಆಪ್ತಮಿತ್ರ ಅಮೂಲ್ ಕಿಚ್ಚಾ" ನನಗೆ ಪದೇ ಪದೇ ಹೋಗೋಣ ಬಾ ಅಂತ ಒತ್ತಾಯ ಮಾಡುತ್ತಿದ್ದ. ಅವನ ಮಾತಿನ ಮೇರೆಗೆ ಹೋದ ನಾನು, ಕಿಚ್ಚ, ನವೀನ ಮತ್ತು ರಾಜ ರಾತ್ರಿ ಮನೆಗೆ ಹೋಗಿ ಮಲಗುವವರೆಗೂ ಅದೇ ಗುಂಗಿನಲ್ಲಿದ್ದೆವು ಅಂದರೆ ತಪ್ಪಾಗಲಾರದು. "ಹೊರಗಡೆ ನಿಂತು ನೋಡಿದರೇನು ಸುಖ, ಒಮ್ಮೆ ನನ್ನೊಳ ಹೊಕ್ಕಿ ನೋಡಿ" ಎಂದು ಕೈ ಬೀಸಿ ಕರೆಯುತ್ತಿದ್ದ ಆ ಕೊಲಂಬಸ್ ೯೦ ಡಿಗ್ರಿ ಸುತ್ತಳಿಯು ಬಂದವರನ್ನು ಆತ್ಮೀಯತೆಯಿಂದ ಸ್ವಾಗತಿಸಿ ಅದರ ಜೊತೆ ಇರುವ ಕ್ಷಣದವರೆಗೂ ಕಾಲ ವ್ಯರ್ಥ ಮಾಡದೆ ಸಂತಸವನ್ನು ಭರ್ತಿಮಾಡಿಸಿ ಹೃದಯದರಮನೆಯಲ್ಲೊಂದು ನೆಲೆಯೂರಿ ನೆನಪಿನ ಜೊತೆ ಮತ್ತೆ ಬನ್ನಿ ಎಂಬಂತೆ ಕಳುಹಿಸಿತು.

ಪಾಪ ಗೆಳೆಯ ನವೀನನಿಗೆ ಸ್ವಲ್ಪ ಹೆಚ್ಚಿನ ಮಟ್ಟಿಗೆ ಗುಂಗೇ ಕಮರಾಗಿ ಪರಿವರ್ತಿಸಿ ಆಗಷ್ಟೇ ಕುಡಿದಿದ್ದ ಮಿಕ್ಸೆಡ್ ಜ್ಯೂಸಿನ ತಲೆಸುತ್ತು ಬಂದು ಹೊರಹಾಕಿಬಿಟ್ಟ. ಒಟ್ಟಿನಲ್ಲಿ ನಾವೆಲ್ಲರೂ ಎಲ್ಲೂ ಎಡವದೆ ಭಾವನೆಗಳನ್ನು ಹಂಚಿಕೊಳ್ಳುವುದರ ಮೂಲಕ ರಾತ್ರಿ ಅಲ್ಲೇ ಊಟ ಮುಗಿಸಿ ಹೊರಡುವಾಗ ಸಮಯ ೧೦.೩೦ ಆಗಿತ್ತು. ನಮ್ಮ ಪಯಣದ ಕೊನೆಯ ಪುಟದಲ್ಲಿ ಸಿಕ್ಕ ಗೆಳೆಯನಾದ ಎಂ.ಬಿ.ರವಿಶಂಕರನನ್ನು ಬೀಳ್ಕೊಡುವುದರ ಮೂಲಕ ಕಾರು ಹತ್ತಿ ಊರಿನ ಕಡೆ ಮುಖ ಮಾಡಿ ಹೊರಟೆವು. ನಮ್ಮ ಡ್ರೈವರ್ ಅಣ್ಣಾವ್ರು ಪ್ರಾರಂಭದಲ್ಲಿ ಯಾವ ಹುಮ್ಮಸ್ಸಿನಿಂದ ಕಾರು ಓಡಿಸಿದರೋ ಅದೇ ಹುಮ್ಮಸ್ಸಿನಿಂದ ಚಿರಕಾಂತಿಯಾಗಿ ಜೋಪಾನವಾಗಿ ಕರೆದುಕೊಂಡು ಮನೆಗೆ ಬಿಡುವ ಹೊತ್ತಿಗೆ ಸಮಯ ಸುಮಾರು ೧೨.೩೦ಆಗಿತ್ತು. ಬಲ್ಮುರಿಯಲ್ಲಿ ತುಂಬಾ ಆಟವಾಡಿದ್ದರಿಂದ ನಮಗೆ ಹೆಚ್ಚಿನ ಮಟ್ಟಿಗೆ ಆಯಾಸವಾಗಿತ್ತು. ಮನೆಗೆ ಹೋಗಿದ್ದೇ ತೆಪ್ಪನೆ ಕೈ-ಕಾಲು-ಮುಖ ತೊಳೆದುಕೊಂಡು ಕಂಬಳಿಯೊಳಗೆ ಸೇರಿ ಸುಖ ನಿದ್ರೆಗೆ ಜಾರಿದೆವು.

ಹಾಂ.... ಇನ್ನೊಂದು ಹೇಳೋದು ಮರೆತಿದ್ದೆ.... ಏನಪ್ಪಾ ಅಂತೀರಾ? ಅದೇ ನಮ್ಮ ಮರಿದೊಡ್ಡಣ್ಣರವರಾದ ಮಧುನವರ ಬಗ್ಗೆ. ಎಲ್ಲರಿಗೂ ಆಯಾಸವಾಗಿ ನಿದ್ರೆಗೆ ಹೋದರೆ, ಈ ನಮ್ಮ ಡಾಕುಟ್ರು ತಮ್ಮನಾದ ಮಧು ಅವರು ಮತ್ತೆ ೧.೩೦ ಮಧ್ಯ ರಾತ್ರಿಯಲ್ಲಿ ಕರೆಮಾಡಿ ನನ್ನನ್ನು ಎಬ್ಬಿಸಿದ. ಆಗ ತಾನೆ ಕಣ್ಣು ಕಚ್ಚಿದ್ದ ನಿದ್ರೆ ಮತ್ತೆ ಹಾರಿಹೋಯಿತು. ಏನ್ ಸಾರ್.ಇಷ್ಟು ಹೊತ್ತಿನಲ್ಲಿ ಫೋನ್ ಮಾಡಿರೋದೂ? ಅಂತ ಕೇಳಿದ್ರೆ.
ಮಧು ಅವ್ರು :- ಸುಮ್ಮನೆ ಮಾಡ್ದೆ.ಯಾಕೋ ನಿದ್ರೇನೆ ಬರುತ್ತಾ ಇಲ್ಲಾ ಅನ್ನೋದ..!
ಅಲ್ಲ, ಅವನಿಗೆ ನಿದ್ರೆ ಬರಲಿಲ್ಲ ಅಂದ್ರೆ ನಮಗೆ ಈ ಮಧ್ಯರಾತ್ರಿಲಿ ಈತರ ಡಿಸ್ಟರ್ಬ್ ಮಾಡೋದಾ ?ಸರಿ ಹೋಗ್ಲಿ, ಏನ್ ಮಾಡ್ತಾಯಿದ್ದೀರಾ ಅಂತ ಕೇಳಿದ್ರೆ?,,,,
ಮಧು ಅವ್ರು :- ಸುಮ್ಮನೆ ಕುಳಿತಿದ್ದೇನೆ. ನೀರಿನಲ್ಲಿ ಆಟ ಅಡಿರೋದ್ರಿಂದ ಶೀತ ಆಗಬಹುದು, ಅದಿಕ್ಕೆ ಅಮ್ಮ ಹುರುಳಿ ಸಾರು ಮಾಡಿದ್ರು.ಈಗ ತಾನೆ ಊಟ ಮಾಡಿದೆ ಅಂತ ಹೇಳೋದಾ.. !!!! ಆಗಷ್ಟೇ ವಸ್ತುಪ್ರದರ್ಶನದಲ್ಲಿ ಊಟ ಮಾಡಿದ್ದ ಅವನು ಮತ್ತೆ ಮಧ್ಯರಾತ್ರಿಯಲ್ಲಿ ಸಿಕ್ಸ್ ಹೊಡೆಯೋದಾ!!?

---------------------------------------&&&&&&&&&&&&&&-------------------------------------

ಆತ್ಮೀಯ ಗೆಳೆಯರೇ, ಮೈಸೂರು ಚಾರಣದ ಬಗ್ಗೆ ಬರೆಯುವ ನಿಟ್ಟಿನಲ್ಲಿದ್ದ ನಾನು ಹಲವು ದಿನಗಳಾದ ನಂತರ ನಿಮಗಾಗಿ ಕುಳಿತು ನನ್ನ ಕಡೆಯಿಂದ ಒಂದು ಚಿಕ್ಕ ಬರವಣಿಗೆಯ ಮೂಲಕ ಇದೊಂದು ಉಡುಗೊರೆ ನೀಡುತ್ತಿದ್ದೇನೆ. ನಿಮಗೆ ಸಂತೋಷವಾದರೆ ನನಗೂ ಖುಷಿ.

ಅಪ್ಪಣೆ :- ಮಧ್ಯಂತರದಲ್ಲಿ ನಾನು ಯಾರ ಬಗ್ಗೆಯಾದರೂ ಅಣಕವಾಡಿ ಮಾತನಾಡಿದ್ದರೆ ಅದಕ್ಕೆ ನಾನು ಜವಾಬ್ದಾರನಲ್ಲ. ಎಲ್ಲವೂ ತಮಾಷೆಗಾಗಿ. ತಮಾಷೆಗೋಸ್ಕರ. ಒತ್ತಕ್ಷರಗಳು ತಪ್ಪಿದ್ದರೆ ದಯವಿಟ್ಟು ಕ್ಷಮಿಸಿ.

ಹಲವು ಆಸೆಯ

ಮನಸ ಭಾವನೆ ಗೂಡಿನೊಳಗೆ
ಹಲವು ಆಸೆಯ ತಾಣವಿದೆ
ಎಲ್ಲ ಬಯಕೆಗೂ ಬೆಳಕು ಕಾಣದೆ
ಬದುಕಿಗರ್ಥವ ತಂದಿದೆ..


ಕತ್ತಲೊಳಗಲಿ ಪುಟ್ಟ ಪ್ರಪಂಚ
ಚಿಂತೆ ರಾಶಿಯು ತುಂಬಿದೆ
ಸ್ತುತಿಗೆ ಇದುವೇ ಮೂಲಕಾರಣ
ನಿತ್ಯ ಕರ್ಮವಿದಾಗಿದೆ..


ಬಾಳ ತಿರುಳಲಿ ಮುಳ್ಳು ಹಾದಿಯು
ಪುಟದ ಮುನ್ನುಡಿ ಸೇರಿದೆ
ಹೆಜ್ಜೆಯಿಡುವೆಡೆ ರಕುತದೋಕುಳಿ
ಕೆಂಪು ಚಿಲುಮೆಯ ನೀಡಿದೆ..


ಆಸೆ ಮುಗಿಲಿಗೆ ಏಣಿಯಿಡುವೆಡೆ
ತಳದಿ ನಿಲ್ಲಲ್ಲು ಸಾಧ್ಯವೇ?
ಹಾರೋ ಹಕ್ಕಿಗೂ ಸ್ಥಳವು ನೀಡದೆ
ಗಗನ ಚುಂಬಕವಾಗುವೆ..


ಯಾವ ಬಯಕೆಗೆ ಎಲ್ಲೋ ಚಿಗುರು
ದೇವನಿಚ್ಛೆಗೂ ಮೀರಿದೆ
ಕಾಲ ಬರುವುದು ಬದುಕಲೊಮ್ಮೆ
ತಾಳ್ಮೆಯಿದ್ದರೆ ಗೆಲುವಿದೆ..

ಕನ್ನಡ ನಾಡು

ಕನ್ನಡ ತಾಯಿಯ ಮಣ್ಣಲಿ ನಿನ್ನ
ಜೀವನ ತಂತಿಯು ನಡೆಯಲು ಚೆನ್ನ
ಹಸಿರೊಳು ಚಿಮ್ಮುವ ಮಲೆನಾಡು
ಗಣಿಗಳ ತುಳುಕಿಸೊ ನೆಲೆಬೀಡು

ಮಾತೆಯ ಮಡಿಲಲಿ ನಿನ್ನಯ ಕಾಂತಿ
ಉಳಿಯಲಿ ಎಲ್ಲರ ಭಾವ ಪ್ರತೀತಿ
ಹರಿಯಲಿ ಜೋಗದ ಜಲದಂತೆ
ತಣಿಯಲಿ ತನ್ಮನ ಕಡಲಂತೆ

ಬಳಸಲು ನಿನ್ನನು ತಾಯಿಯೂ, ಕಂದಾ
ಮಡಿಲೊಳು ಆಡುತ ಬೆಳೆದುದೆ ಚಂದ
ಗಂಧದ ನಾಡಿದು ಸಿಂಗಾರ
ತೆನೆಗಳು ಬಳುಕುತ ಬಂಗಾರ

ಪೂರಕವೆನ್ನೆದೆ ಕನ್ನಡ ಜಪಿಸುತ
ನಮಿಸುತ ಚರಣಕೆ ಸಡಗರ ಬಯಸುತ
ಬಡಿಯಲಿ ನಾಡಿನ ಜೇ೦ಕಾರ
ಅರಳಲಿ ಹೃದಯದ ಮಂದಾರ.

ಧರ್ಮ ಇದುವೇ ಕರ್ಮ

ಹೋಗಲಾರೆ ನೀ ಕೊಂಡೊಯ್ದು
ಸತ್ತ ಮೇಲೆ ತಳವನು
ಮಾಂಸ ಮೂಳೆ ತೊರೆದು ಕೊನೆಗೆ
ಆತ್ಮ ಸೇರ್ವುದು ಮತ್ತೊಂದನು.

ಯಾವ ಜೀವಕೆನಿತು ನೀನು
ಧರ್ಮದೊಳಗೆ ತಿಳಿಯದು
ಕೊಡುವನವನು ದೇವನೊಬ್ಬ
ಅರಿವಿದ್ದರೆ ಸುಖ ದೊರೆವುದು..

ಧರ್ಮ-ಕರ್ಮದೊಳಗೇನು ಬಲ್ಲೆ?
ನೀನೆ ರಚಿಸಿದ ಬಲೆಯದು
ಸ್ವಾರ್ಥವೆಂಬ ಮದಕೆ ಸಿಕ್ಕಿ
ಪ್ರಜ್ಞೆ ಕಳೆವ ಬಗೆಯಿದು

ನಿನ್ನ ರಕುತ ಹರಿಯಲೆನಗೆ

ಭೇದ ಮಾಡಿ ಹೊರಬರುವುದೇ?
ಹಿಂದೂ, ಕ್ರೈಸ್ತ, ಮುಸಲ್ಮಾನರೆಂದು
ಫಲಕ ಎತ್ತಿ ಹಿಡಿವುದೇ?

ಜಗದ ಉಚ್ಚ ಸ್ಥಾನದಲ್ಲಿ

ನಿನ್ನ ಬಾಳು ಬೆಳಗಲಿ
ನಿನ್ನ ನೆರವಿನಿಂದ ಜಗಕೆ
ಸಹಾನುಭೂತಿ ಮಿನುಗಲಿ

ದಿಟ

"ಸಕಾಲ ಜನನಂ
ಅಕಾಲ ಮರಣಂ
ಸಕ್ರಿಯೇ ಸುಖಚಿತ್ತದೈತ್ಯದೊಳಿಪು
ವ್ಯಾಮೋಹದಿಂ ಭಕ್ಷಿಸಲ್ತೊಡೆ
ಸಕಲ ಚರಾಚರ ಸಂಪತ್ತು ನಾಶದಿಂ
ಉಳಿಯುವುದು ಶೂನ್ಯ.. ಶೂನ್ಯ.. ಶೂನ್ಯ..

ವಿಷ್ಣುದೇವನ ನೆನಪುದೊಂದೇ ಜೀವನ
ಭಯಬಕುತಿ ಚಿತ್ತಾರದೊಳು ಮನಶಾಂತಿ
ತಣಿಸುತಲಿ ಬೇರೇನ ಹುಡುಕುವೆಯೋ ನಾನರಿಯೆ
ಸದಾಕಾಲದಿಂ ಚರಣಕಮಲಗಳಿಗೆ ನಮಿಸೋ ಕ್ರಿಮಿನೀ..."

Tuesday, January 27, 2009

ತಾಯ್ತನದ ಕಣ್ಣು

"ಹೆಣ್ಣು ತಾಯ್ತನದ ಕಣ್ಣು

ಸಿರಿವಂತಿಕೆಯಲ್ಲಿ ಹೊನ್ನು

ಬೇಸಾಯಕ್ಕೆ ಮಣ್ಣು ಮತ್ತು

ಕೊನೆಯಲ್ಲಿ ಗಂಡಿಗೆ ಅವಳು

ದಿಗ್ವಿಜಯದ ಸುಪ್ತಚೇತನದ ಬೆನ್ನು.

ಹೆಣ್ಣನ್ನು ಗೌರವಿಸಿ.. ಹಾಗು ಪ್ರೀತಿಸಿ.. "