Thursday, January 29, 2009

ನಗು ತಂದ ನೀನು

ಮರೆತ ನಗುವನು ಮತ್ತೆ ನೆನಪಿಸಿ
ಬೆಳಕ ದಾರಿಯ ತೋರಿಹೆ
ಗೆಳತಿ ನಿನ್ನಯ ನಗುವೆ ಚೆಂದ
ಮಿನುಗುತೆದೆಯಲಿ ಜಿಗಿದಿಹೆ

ನಿನ್ನ ಕಾಣುವ ತವಕದಂಬಲ
ಸ್ನೇಹದೊಡಲಲಿ ಸ್ಮರಿಸಿಹೆ
ಹೆಜ್ಜೆ ಹೆಜ್ಜೆಗೂ ಗೆಲುವ ಸಾಧಿಸು
ಒಳಿತು ಕಾಣಲಿ ಬಯಸಿಹೆ

ಚಿಪ್ಪಿನೊಳಗಿನ ಮುತ್ತಿನಂತಿಹೆ

ಕಾಲವೆಮ್ಮನು ಕೂಡಿದೆ
ಕೊಂಬೆಯೊಂದರ ಕವಲು ನಾವು
ಜೊತೆಗೆ ಸಾಗುವ ಛಲವಿದೆ

ಯಾವ ಜನುಮದ ಉಳಿಕೆ ಕಾಣೆ

ಎನಗೆ ನೀನೂ ದೊರಕಿದೆ
ಉಸಿರು ಹೋದರು, ನಲಿವು ನಿಂತರೂ
ಬರುವೆ ಮುಂದಕೂ ಋಣವಿದೆ.

ಈ ಕವನದ ಭಾವಾರ್ಥ :- ಎಲ್ಲೋ ಹುಟ್ಟಿ, ಮತ್ತಿನ್ನೆಲ್ಲೋ ಬೆಳೆದು, ಧ್ವಂಧ್ವ ಬದುಕಿನಲ್ಲಿ ತುಸು ಸೊರಗಿ ಸಾಗುವಾಗ ಸಿಕ್ಕ ನೀನು ನನ್ನೆದೆಯನಾವರಿಸಿ ತಂದುಕೊಟ್ಟ ಖುಷಿಯ ನೆನಪೀಗ ಅಚ್ಚಿಳಿದು ಬೆಳಕು ಕಾಣುತ್ತಿದೆ. ಆ ನಿನ್ನ ನಿಷ್ಕಲ್ಮಶ ನಗುಧ್ವನಿಯೇ ಸಾಕಿಂದು ಬದುಕಿಗೆ ಸಂಪೂರ್ಣತೆಯ ಕೊಟ್ಟು ಸ್ಪೂರ್ತಿ ನೀಡಿ ಜಿಂಕೆಯ ಹಾಗೆ ಜಿಗಿದು ಮಿಂಚಿ ಓಡುತ್ತಿದೆ. ಮೊದಲು ಕಂಡ ಆ ಒಂದು ಗಳಿಗೆಯೇ ಸಾಕು ನನಗೆ ನಿನ್ನನ್ನು ಮತ್ತೆ ಮತ್ತೆ ನೋಡಬೇಕೆಂದು ಅನಿಸಿದರೂ, ಅನಿಸದೆ ಹೋದರೂ ಆ ನಮ್ಮ ಸ್ನೇಹದ ಸವಿನೆನಪನ್ನೇ ಸ್ಮರಿಸಿ ಲೀನನಾಗುತ್ತಿದ್ದೇನೆ. ಗೆಳತಿ, ನೀನು ಎಲ್ಲೇ ಇರೂ, ಹೇಗೆ ಇರೂ, ನೀನಿಡುವ ಹೆಜ್ಜೆಯ ಹಾದಿ ಸುಖಕರವಾಗಿ ಒಳಿತು ಕಾಣಲಿ ಎಂದು ಆಶಿಸುತ್ತೇನೆ.

ನಿನಗೆ ತಿಳಿದಿರಬಹುದು?, ಭೂಗರ್ಭದಲ್ಲಿ ಹೂತಿಟ್ಟ ಚಿನ್ನದ ಗಣಿಯಂತೆ, ಕಪ್ಪೆ ಚಿಪ್ಪಿನೊಳಗೆ ಮುಚ್ಚಿಟ್ಟ ಮುತ್ತಿನಂತಿರುವ ನಿನ್ನನ್ನು ಕಾಲ ಅನ್ನೋದು ಅಲೆಯ ಮುಖಾಂತರ ತೇಲಿಸಿ ನನಗಾಗಿ ದಡಸೇರಿಸಿದೆ. ಜೀವನ ಅನ್ನೋದು ಕವಲೊಡೆದ ಕೊಂಬೆಯಿದ್ದ ಹಾಗೆ. ನೀನು ನಾನು ಜೊತೆಯಲ್ಲಿಯೇ ಒಂದೇ ಪರಿಸರದ ಸಾಲಿನಲ್ಲಿ ಸಾಗುತ್ತಿರುತ್ತೇವೆ ಅನ್ನೋ ನಂಬಿಕೆ ನನಗಿದೆ.

ಬಹುಷಃ ಹಿಂದಿನ ಜನುಮದಲ್ಲಿ ನಿನ್ನ ಸ್ನೇಹದ ಋಣ ಮರೆತು ಹಾಗೆಯೇ ಬಿಟ್ಟು ಬಂದಿದ್ದೆ ಅಂತ ಅನ್ಸುತ್ತೆ, ಹಾಗಾಗಿ ಮತ್ತೆ ಅದರ ಭಾಗ್ಯ ನನಗೆ ಲಭಿಸಿದೆ. ಹೇಳುವುದಕ್ಕೆ ಇನ್ನೇನು ಇಲ್ಲ ಗೆಳತಿ, ಮತ್ತೆ ಮರೆತು ಈ ನನ್ನ ಉಸಿರು ಹೋದರೂ, ನಮ್ಮಿಬ್ಬರ ಸವಿ-ಭಾವನೆಗಳು ಅಳಿದರೂ ಮುಂದಿನ ಜನುಮಕ್ಕೂ ಬರುವೆ, ಬರುತ್ತಲೇ ಇರುತ್ತೇನೆ. ಸ್ನೇಹಿತನಾಗಿಯೇ ಉಳಿಯುತ್ತೇನೆ.

No comments:

Post a Comment