Monday, March 23, 2009

ಒಡೆದ ಮನಸು

ಹರಿದ ರವಿಕೆಯನುಟ್ಟು ಮೈಯೊಡ್ದಿ ನಗುತಿಹಳು
ಬಿಸಿಲಿನೊಳು ಚಲಿಸುತ್ತ ದನಕರುಗಳ ಬಳಗದಲಿ
ಕಲ್ಲಾಗಿ ಕಲ್ಲಿನೊಳು, ಮುಳ್ಳಾಗಿ ಮುಳ್ಳಿನೊಳು
ಕಟ್ಟಿತ್ತು ಹೆಪ್ಪುಂಡು ಪಾದಗಳು ಬಲವಾಗಿ

ಹಸಿದ ಹೊಟ್ಟೆಗೆ ಬೇಕು ಮೇವುಂಡ ಹಾಲಂತೆ
ಎರಡಾಣೆಯ ಗಳಿಕೆಯೊಳು ಒಪ್ಪತ್ತಿನ ಆಹಾರ
ನಗ್ನತೆಯ ಸತ್ಯಕ್ಕೆ ಬೆರಗಾದ ಬದುಕಂತೆ
ಮುಗ್ಧತೆಯು ಸಾಗುತಿದೆ ಆ ಬಡಕಲು ಶಾರೀರ

ಬರದಿರಲು ಮುಮ್ಮೋಡ ನೆನಸಿದಾ ಸಮಯದೊಳು
ಇಂಗುತ್ತ ಕ೦ಗಳಲಿ ಮುಚ್ಚಿಟ್ಟ ಕನಸುಗಳು
ಬಿರುಸಿನಲಿ ಹಬ್ಬಗಳು ಹೊಸಿಲಲ್ಲಿ ನಿಂತಿರಲು
ಇನ್ನೆಲ್ಲಿ ಹೊಸ ಉಡುಪು? ಶುಚಿ ಮಾಡಿ ಹಾಕಿರಲು..

ಮುಖದಲ್ಲಿ ಸಿಂಧೂರ, ಮೂಗುತಿಯ ಗತಿಯಿಲ್ಲ
ಆಸೆಗಳ ಬುತ್ತಿಯಲಿ ನಿಟ್ಟುಸಿರ ಸ್ಥಳವಿಲ್ಲ
ಆ ಒಡೆದ ತುಟಿಯೊಳಗೆ ಹುಡುಕಿದರೂ ಸಿಹಿಯಿಲ್ಲ
ಉಕ್ಕೇರದು ಮಂದಾರ, ನೆಲೆಯಿಲ್ಲ ಕಹಿಯೆಲ್ಲ..

Sunday, March 1, 2009

ಸಾವು‏

ಸಾವೇಕೆ ಬರ್ತಾಯಿಲ್ಲಾ ?

ಬಹುಷಃ ಕರ್ಮಗಳಿನ್ನೂ ಕಳೆದಿಲ್ಲ.

ಕರ್ಮಗಳೇಕೆ ಸಾವಿಗೆ ಆಧಾರವಾಗಿ ನಿಂತಿವೆ?

ಅದು ಬ್ರಹ್ಮನಿಗೂ ಸರಿಯಾಗಿ ತಿಳಿದಿಲ್ಲ.


ಪ್ರಯತ್ನಿಸಿದರೊಂದು ಬಾರಿ ಬಾಳೇಗೆ ಮೊನಚುವುದು?

ಕೊನೆವರೆಗೂ ಅದು ಹೇಡಿಯಾಗಿಯೇ ಉಳಿಯುವುದು.

ಹಾಗಾದರೆ ಹೇಡಿಗಳೇಕೆ ಬದುಕುವುದಿಲ್ಲ ?

ಜೀವನವನ್ನು ಸಾಗಿಸಲು ಬಾರದೇ ಸತ್ತಿದ್ದೆಲ್ಲ.


ನಿರಂತರ ಬದುಕಿನೊಳು ಮುಳ್ಳು-ಕಲ್ಲುಗಳೇ ಮೇಲೇಕೆ?

ನಂಬಿಕೆ ಛಲವೆರಡಿಟ್ಟು ದಾಟಿ ಬಾ ಎನಲಿಕ್ಕೆ.

ದಾಟಿ ಬರುವ ಸಮಯದಲಿ ಎಷ್ಟೋ ಜನ ಎಡವಿ ಬಿದ್ದದ್ದೇಕೆ?

ಅವರಿನ್ನೂ ಅದರಲ್ಲಿ ಪರಿಣಿತರಾಗದಿದ್ದುದ್ದಕ್ಕೆ.


ತಿಂದ ಮೇಲೆ ನೀರು ಕುಡಿಯಲೇಬೇಕು ಎನುವುದೇಕೆ?

ಇಳಿಯದಿದ್ದರೆ ಕೆಡಕಾಗುವುದು ಎನುವುದಕ್ಕೆ.

ಹಾಗಾದರೆ ಹಣ ತಿನ್ನುವವರು ಹೆಚ್ಚಿದರೇತಕೆ?

ಹಣವಿಲ್ಲದೆ ಹುಲ್ಲು ಕಡ್ಡಿಯೂ ಅಲ್ಲಾಡುವುದಿಲ್ಲವದಕ್ಕೆ.


ಕಷ್ಟ ಅನ್ನೋದು ಬರೀ ಮನುಷ್ಯರಿಗೇ ಇರೋದು ಅನುವುದೇತಕೆ?

ಪ್ರಾಣಿ-ಪಕ್ಷಿ-ಗಿಡ-ಮರಗಳಿಗೆ ಹೇಳಲಾಗುವುದಿಲ್ಲವಲ್ಲ ಅದಕ್ಕೆ.

ಆದರೂ ಸಾವು ಬರುತ್ತಾ ಇಲ್ಲ ಏತಕ್ಕೆ?

ತಾನಾಗಿಯೆ ಬರುವ ಸಾವಿಗೆ ಸೂಕ್ತ ಉತ್ತರ ಇದೆ ಅದಕ್ಕೆ.

ಕಲ್ಮಷ‏

ಮನಸಿನಲೊಂದು ಕಲ್ಮಷವು ಅರಿಯದೆಯೆ ಬೆಳೆದಿತ್ತು
ಅದು ನನ್ನೊಳು ಕೂತು ಲೀಲಾಜಾಲವಾಗಿ ಹಾಡಿತ್ತು


ಮೋಹದಿಂದೊಳು ಧೂಳ್ಗಟ್ಟಿತ್ತು, ಹೃದಯದಿ ಎಲ್ಲೋ
ಮೂಲೆಯಲಿ ಕೊಳೆತು ಸೂಸುತ ಜೀವನ ಸಾಗಿತ್ತು


ದಿನಗಳುರುಳುತಿರೆ ಮಾಸುತ್ತ ಮಾಗುತ್ತ ಮಂಕು ಕವಿದಿತ್ತು
ಬುದ್ಧಿವಿಕನಿಸದೆ ಅರೆಪರಿಯಾಗಿ ಮೆಲುಕು ಹಾಕಿತ್ತು


ಎನಿತು ಮಾಯೆಯೋ ಈ ಪ್ರೀತಿ ಮಸಣಕೆನಗೆ ದಾರಿ ತೋರಿತ್ತು
ದೇವನಿಟ್ಟ ಆಯಸ್ಸು ಲೆಕ್ಕಗಳೆಲ್ಲ ಒಂದು ಕಡೆ ತಪ್ಪಾಗಿತ್ತು


ಹಳ್ಳವಂತೆನಗೆ ಬಿದ್ದರೊಂದು ಬಾರಿ, ಹಣೆಯ ಬರಹದಿ ಸ್ಪಷ್ಟನೆ ಕೆತ್ತಿತ್ತು
ಯಾವ ಉಳಿಯು ಬೇಡವಿಲ್ಲಿ, ಬೆನ್ನ ಹಿಂದೆಯೇ ಬಂದೆನ್ನ ನೂಕಿತ್ತು


ಭಯದ ನೆರಳಲಿ ನಿಂತು ಬೆವೆತಂತೆ ಜೀವ ಸುಡುತ್ತಿತ್ತು
ಬದುಕಿನ ಮೂಲ ದಿಕ್ಕನರಿಯದೆ ಮನ ಪರಿತಪಿಸಿತ್ತು


ಎನ್ನ ಕನಸಿನರಮನೆಯಲೊಂದು ಹಾಡಿನ ಜೇಂಕಾರ ಕೂಗಿತ್ತು
ಹಾಡು ಹಾಡಾಗದೆಯೇ ಕಂಬಳಿಯೊದ್ದು ಹೆಪ್ಪುಗಟ್ಟಿ ಮಲಗಿತ್ತು


ಬದುಕು ಜ೦ಜಾಟದಲೂ ಮೋಹ ದಿಗ್ಭಂಧನಕ್ಕೊಳಗಾಗಿತ್ತು
ಹೊರದಾರಿ ಕಾಣದೆಯೆ ಅಂಧಯಷ್ಟಿಯನಿಡಿದು ಸಾಗಿತ್ತು


ವಿಧಿ ಬರೆದ ಆಟದೊಳು ನೋವಿನುಪಸ್ಥಿತಿಯೇ ಹೆಚ್ಚಿತ್ತು
ಬೆಳಕ ಕಾಣುವ ಮುನ್ನ ಕಾಲ ಚಿಗುರೊಡೆದು ಮೀರಿತ್ತು

ಭಾವನವನವೀನ


ನಿನ್ನಾ ಕರೆದು ಹೊಯ್ತಿನಮ್ಮಾ ಮುತ್ತಿನ ಮ್ಯಾಲೆ

ಸೂರೆ ಹೊಡೆದು ಹೊಯ್ತಿನ್ ಚಂದದ ಗುಟ್ಟಿನ ಲೀಲೆ ೨

ಊರಾಚೆಯಲ್ಲಿ ಒಂದು ಕಾಣದಾ ಲೋಕವಯ್ತೆ

ನಮಗಾಗಿ ಕಾಯುತಯ್ತೆ, ಹೊಸಮನೆಯು ಬೆಳಗುತಯ್ತೆ

ನಿನ್ನಂತರಂಗ ತಿಳಿಯೋ ಕ್ಷಣವಿಂದು ಬೆದಕುತಯ್ತೆ

ಹೊಸಬಾಳು ಸಾಗುತಯ್ತೆ, ಒಂಟಿಜೀವ ಬಿಡುವಂಗಯ್ತೆ


ನಿನ್ನಾ ಕರೆದು ಹೊಯ್ತಿನಮ್ಮಾ ಮುತ್ತಿನ ಮ್ಯಾಲೆ

ಸೂರೆ ಹೊಡೆದು ಹೊಯ್ತಿನ್ ಚಂದದ ಗುಟ್ಟಿನ ಲೀಲೆ ೨


ಹೆ:- ಒಳ ಆಸೆ ಮುಗಿವಾ ಕ್ಷಣದೀ ಹೊಸ ಆಸೆ ಉಕ್ಕುತಯ್ತೆ

ಈ ಮೀಸೆ ಮಾವನ್ ತೋಳು ಎಡೆಬಿಡದೆ ಅಪ್ಪುತಯ್ತೆ

ಅವನಿಡುವ ಹೆಜ್ಜೆಯಲ್ಲೇ ಈ ಬಾಳಿನ ದೀಪವಯ್ತೆ

ಏಳೇಳು ಜನುಮದಲ್ಲೂ ಸಂಗಾತಿ ನೀನಂದಯ್ತೆ


ನಿನ್ನಾ ಕರೆದು ಹೊಯ್ತಿನಯ್ಯಾ ಮುತ್ತಿನ ಮ್ಯಾಲೆ

ಸೂಟು ಬೂಟಿನ ಚೆಲುವಾ ನಾ ಬಲಿತಾ ಬಾಲೆ


ಗ:- ವನಜಾರಿ ಕಂಡು ನಮ್ಮ ಬೆರಗೆದ್ದು ಕುಣಿಯುತಯ್ತೆ

ಜೊತೆಗೊಂದು ಬೆಕಂದಯ್ತೆ, ಇಣುಕಿಣುಕಿ ನೋಡಕಯ್ತೆ

ಪಲ್ಲಂಗಕೆ ಪೂವ ತುಂಬಿ ತಂಗಾಳಿ ಬೀಸುತಯ್ತೆ

ಬಿಗುಮಾನ ಬಿಟ್ಟೋಗಯ್ತೆ, ಬಿಂಬಾಧರ ಸೆಳೆಯುತಯ್ತೆ


ನಿನ್ನಾ ಕರೆದು ಹೊಯ್ತಿನಮ್ಮಾ ಮುತ್ತಿನ ಮ್ಯಾಲೆ

ಸೂರೆ ಹೊಡೆದು ಹೊಯ್ತಿನ್ ಚಂದದ ಗುಟ್ಟಿನ ಲೀಲೆ ೨

ಪಾಪಿಯಂತೆ

ಯಾವ ಜನುಮದ ಹೊರೆಯೋ ಕಾಣೆ

ನನ್ನ ಬದುಕು ಹಳಸಿದೆ

ಯಾರ ಶಾಪದ ಫಲವೋ ಕಾಣೆ

ಇಂಚು ಇಂಚಲೂ ಹಿಂಡಿದೆ


ಮುಖದ ಕಳೆಯು ಇಲ್ಲವಾಗಿದೆ

ಮಂಕು ಉಂಡು ಮೆರೆದಿದೆ

ಎಲ್ಲ ಕಡೆಯೂ ನಾನೇ ಕೊನೆಯೂ

ಎದೆಯ ಕೆಚ್ಚು ಸವೆದಿದೆ



ವಿಧಿಯ ಆಟಕೆ ಕೊನೆಯೇಯಿಲ್ಲವೇ

ತನ್ನಿಚ್ಚೆಯಂತೆ ನಡೆಸಿದೆ

ಹೆಜ್ಜೆ ಹೆಜ್ಜೆಗೂ ನೋವನುಂಡು

ಬಾಧೆ ತಾಳದೆ ಮರುಗಿದೆ


ಓದಲಿರುವ ವಿದ್ಯೆ ಹತ್ತದೆ

ಬುದ್ದಿ ಕುರುಡು ಹಾಗಿದೆ

ನನಗೆ ತಿಳಿಯದು ಯಾಕೆ ಹೀಗೆ?

ಮುಂದೆ ತೋಚದ ಹಾಗಿದೆ


ದೇವರಂತಹ ತಂದೆ-ತಾಯಿಯು

ಕೊರಗುತಿಹರು ಮನದಲಿ

ಕಣ್ಣ ಒರಸು ಹರಿಸುತಿಹರು

ಮನದ ಮೌನದ ತಳದಲಿ


ಏನು ಕೇಳಲಿ ದೇವರೆಡೆಗೆ

ತೊಡೆದು ಹಾಕು ಎನ್ನಲೇ?

ನೋವನಿಟ್ಟು ನಗುವ ಬದಲು

ಮಣ್ಣ ಬಿಟ್ಟು ಕರೆಯಿರೆ..