Sunday, March 1, 2009

ಕಲ್ಮಷ‏

ಮನಸಿನಲೊಂದು ಕಲ್ಮಷವು ಅರಿಯದೆಯೆ ಬೆಳೆದಿತ್ತು
ಅದು ನನ್ನೊಳು ಕೂತು ಲೀಲಾಜಾಲವಾಗಿ ಹಾಡಿತ್ತು


ಮೋಹದಿಂದೊಳು ಧೂಳ್ಗಟ್ಟಿತ್ತು, ಹೃದಯದಿ ಎಲ್ಲೋ
ಮೂಲೆಯಲಿ ಕೊಳೆತು ಸೂಸುತ ಜೀವನ ಸಾಗಿತ್ತು


ದಿನಗಳುರುಳುತಿರೆ ಮಾಸುತ್ತ ಮಾಗುತ್ತ ಮಂಕು ಕವಿದಿತ್ತು
ಬುದ್ಧಿವಿಕನಿಸದೆ ಅರೆಪರಿಯಾಗಿ ಮೆಲುಕು ಹಾಕಿತ್ತು


ಎನಿತು ಮಾಯೆಯೋ ಈ ಪ್ರೀತಿ ಮಸಣಕೆನಗೆ ದಾರಿ ತೋರಿತ್ತು
ದೇವನಿಟ್ಟ ಆಯಸ್ಸು ಲೆಕ್ಕಗಳೆಲ್ಲ ಒಂದು ಕಡೆ ತಪ್ಪಾಗಿತ್ತು


ಹಳ್ಳವಂತೆನಗೆ ಬಿದ್ದರೊಂದು ಬಾರಿ, ಹಣೆಯ ಬರಹದಿ ಸ್ಪಷ್ಟನೆ ಕೆತ್ತಿತ್ತು
ಯಾವ ಉಳಿಯು ಬೇಡವಿಲ್ಲಿ, ಬೆನ್ನ ಹಿಂದೆಯೇ ಬಂದೆನ್ನ ನೂಕಿತ್ತು


ಭಯದ ನೆರಳಲಿ ನಿಂತು ಬೆವೆತಂತೆ ಜೀವ ಸುಡುತ್ತಿತ್ತು
ಬದುಕಿನ ಮೂಲ ದಿಕ್ಕನರಿಯದೆ ಮನ ಪರಿತಪಿಸಿತ್ತು


ಎನ್ನ ಕನಸಿನರಮನೆಯಲೊಂದು ಹಾಡಿನ ಜೇಂಕಾರ ಕೂಗಿತ್ತು
ಹಾಡು ಹಾಡಾಗದೆಯೇ ಕಂಬಳಿಯೊದ್ದು ಹೆಪ್ಪುಗಟ್ಟಿ ಮಲಗಿತ್ತು


ಬದುಕು ಜ೦ಜಾಟದಲೂ ಮೋಹ ದಿಗ್ಭಂಧನಕ್ಕೊಳಗಾಗಿತ್ತು
ಹೊರದಾರಿ ಕಾಣದೆಯೆ ಅಂಧಯಷ್ಟಿಯನಿಡಿದು ಸಾಗಿತ್ತು


ವಿಧಿ ಬರೆದ ಆಟದೊಳು ನೋವಿನುಪಸ್ಥಿತಿಯೇ ಹೆಚ್ಚಿತ್ತು
ಬೆಳಕ ಕಾಣುವ ಮುನ್ನ ಕಾಲ ಚಿಗುರೊಡೆದು ಮೀರಿತ್ತು

No comments:

Post a Comment