Thursday, February 12, 2009

ಯಾರು ಹೊಣೆ?


ಕನಸುಗಳೂ ನನ್ನದೇ, ನೋವುಗಳೂ ನನ್ನದೇ

ಏನಿಹುದು ಈ ಬಾಳ ಲಹರಿಯಲಿ
ಪ್ರೀತಿ ಬಿತ್ತಿ, ಮೊಳಕೆಯೊಡೆಸಿ, ಕತ್ತಲೆರಚಿ
ಬೆನ್ನ ನೂಕೋ ಈ ವಿಧಿಗೆ ಯಾರು ಹೊಣೆ?

ಹುಟ್ಟು ಅವಳೇ, ಸಾವು ಅವಳೇ

ಮೋಹ ನಗೆಯ ಚೆಲ್ಲಿದವಳೇ
ತನು ಮನದಲಿ ಕುಳಿತಳವಳೇ
ಊಟ, ನಿದ್ದೆ ಕಸಿದುಕೊಂಡ ಈ ಸ್ಥಿತಿಗೆ ಯಾರು ಹೊಣೆ?

ಹಗಲು ಅವಳೇ, ಇರುಳು ಅವಳೇ
ಹೊಂಬೆಳಕಿನ ಧ್ಯಾನ ಅವಳೇ
ದೇವರಿಲ್ಲ ಕುಳಿತಳವಳೇ
ಎತ್ತ ನೋಡಿದರೆತ್ತ ಅವಳೇ.. ಈ ರೀತಿಗೆ ಯಾರು ಹೊಣೆ?

ವೃತ್ತಿ ಅವಳೇ, ಮನಸಳವಳೇ
ವೇಳೆ ಪರಿಯ ಮರೆಸಿದವಳೇ
ಮೂಕನಾಗಿ ಮಾಡಿದೋಳೆ
ಲಹರಿಯಲ್ಲಿ ನೂಕಿದೋಳೆ.. ಈ ಬದುಕಿಗೆ ಯಾರು ಹೊಣೆ?

ಬಿಸಿಲು ಅವಳೇ, ಮಳೆಯು ಅವಳೇ
ಗಾಳಿ ಗುಡುಗು ಎಲ್ಲ ಆವಳೇ
ಮುಖದ ತೊಗರು ಕಪ್ಪು ಅವಳೇ
ಕೊನೆಯ ಕ್ಷಣದ ನೆರಳು ಅವಳೇ.. ಈ ಪಾಡಿಗೆ ಯಾರು ಹೊಣೆ?

ಪುಸ್ತಕದಲೂ ಕುಂತಲವಳೇ
ಮಸ್ತಕದಲೂ ನಿಂತಲವಳೇ
ತುದಿ ಲೇಖನಿಯ ಉಗುಳು ಆವಳೇ
ಹಿಂದೆ ನಿಂತು ನಡೆಸಿದವಳೇ.. ಈ ಪರಿಗೆ ಯಾರು ಹೊಣೆ?

ಸ್ನೇಹದ ದಿನ


ಮುಗಿಲ ಕಡಲ ನಡುವೆ ಇಹುದು

ಮಧುರ ಪ್ರೀತಿ ಸ್ನೇಹವು
ಮುಗಿಲ ಹರಸಿ, ಮಳೆಯ ಸುರಿಸಿ
ಹರುಷ ತಂದ ರೀತಿಯು

ಅಲೆಯ ನಾಟ್ಯ, ಹಾವ ಭಾವ
ಮನಕೆ ತಂಪು ತಣಿಸಲು
ದೂರ ದಿಗಂತ ರೇಖೆ ಮೂಡಿ
ಒಂದುಗೂಡಿ ಹಾಡಲು

ಹೃದಯ ಮನೆಯ ಹೊಸ್ತಿಲಲ್ಲಿ
ಶಶಿಯ ಸೊಬಗು ನಿತ್ಯವು
ಹೂವ ಕಿರಣ ಅರಳಿ ಜಗಕೆ
ಬೆಳಕನಿಟ್ಟ ಸತ್ಯವು

ಇಳೆಯ ತನಕೆ ರಂಜಿಸುತಲಿ
ಸಾರುತಿಹವು ಹಕ್ಕಿಯು
ರೆಕ್ಕೆ ಕೆದರಿ ಭಾವ ಬಿರಿದು
ಚುಂಬಿಸುತಲಿ ಮೇಘವು

ಇರುಳಿನಲ್ಲಿ ಮೋಹಗೊಂಡು
ಚಂದ್ರ ಉದಯವಾಗಲು
ಒಂಟಿತನವ ಸ್ನೇಹ ಬಯಸಿ
ತಾರೆ ಗುಂಪು ಮಿನುಗಲು

ಬಳ್ಳಿಯಗಲ ಉದ್ದ ಹಬ್ಬಿ
ಮರದ ನೆರವು ಪಡೆಯಲು
ಬನದ ಕಂಪು ಇಚ್ಚಿಸುತಲಿ
ವನ್ಯಪ್ರಾಣಿ ಸೇರಲು

ರಮ್ಯವಿಹಂಗಮ ನೋಟವಿಹುದು
ಜಗದ ಗುಟ್ಟು ಅರಿಯಲು
ಒಂದಕೊಂದ ಬೆಸೆದ ಸ್ನೇಹ
ಬೆಲೆಯ ಕಟ್ಟಲಾಗದು

ಆತ್ಮೀಯ ಸ್ನೇಹಿತರೇ,ಆಗಸ್ಟ್ ೩, ೨೦೦೮ ವಿಶ್ವ ಗೆಳೆತನದ ಸಂಭೋಗದ ಅಪ್ಪುಗೆಯ ದಿನ. ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು ಮತ್ತಿನ್ನೆಲ್ಲೋ ಸೇರಿ ಬೆರೆತು ಒಬ್ಬರೊನ್ನೊಬ್ಬರನ್ನು ಅರಿತುಕೊಂಡು ಅಪ್ಪುಗೆಯ ಮೂಲಕ ಆಚರಿಸುವ ದಿನ. ಈ ಸುಮಧುರ ಕ್ಷಣಗಳಲ್ಲಿ ನಾನೊಬ್ಬ ಭಾವುಕ ಜೀವಿಯಾಗಿ ಎಲ್ಲರಿಗೂ ಸ್ನೇಹವೆಂಬ ಸಂಕೋಲೆಯಿಂದ ಬಂಧಿಸುತ್ತ ನನ್ನ ಯೋಚನಾಶಕ್ತಿಯ ಮೇರೆಗೆ ತಕ್ಕ ಮಟ್ಟಿಗೆ ಈ ಕವನದ ಮೂಲಕ ನಿಮ್ಮ ಹೃದಯದ ಗೂಡನ್ನು ಸೇರುತ್ತಿದ್ದೇನೆ.

ಬುದ್ಧಿಜೀವಿಗಳಾದ ನಾವು ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು ಗೆಳೆತನವೆಂಬ ಮಹಲ್ಲನ್ನು ಕಟ್ಟಿ ಮತ್ತಿನ್ನೆಲ್ಲೋ ತೆರಳಿ ಕೊನೆಗೊಂದು ದಿನ ಸದಾಕಾಲ ಮಂಜು ಮುಸುಕಿದ ಗೂಡಿನಂತೆ ದಿನಕಳೆದಂತೆ ಒಬ್ಬರನ್ನೊಬ್ಬರು ಮರೆತು ಬಿಡುತ್ತೇವೆ. ಈ ಜಗತ್ತಿನ ಅಂದರೆ ವರ್ತಮಾನ ಯುಗದ ಈ ಕ್ಷಣಗಳಲ್ಲಿ ಬುದ್ಧಿಜೀವಿಗಳಾದ ಮನುಷ್ಯನು ತನ್ನ ಉದ್ಧಾರತೆಗೆ ತನ್ನನ್ನು ತಾನು ತೊಡಗಿಸಿಕೊಳ್ಳುವಾತುರದಲ್ಲಿ ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ತು ಮತ್ಸರಗಳನ್ನು ಉಪಯೋಗಿಸಿಕೊಂಡು ಗೆಳೆತನವನ್ನು ಮರೆತು ಮುನ್ನುಗ್ಗುತ್ತಿದ್ದಾನೆ. ಪುಂಡಾಟಿಕೆಯ ಪುಂಡರಾಗಿದ್ದ ಆ ದಿನದ ಶಾಲಾ-ಕಾಲೇಜಿನ ವಯಸ್ಸಿನಲ್ಲಿ ನಾವಾಡಿದ ಆಟ-ಪಾಠಗಳು ಮಗದೊಮ್ಮೆ ಬರಬೇಕೆಂಬುದು ಸೋಜಿಗವಷ್ಟೇ ಆದರೂ ಹಳೆ ನೆನಪುಗಳನ್ನು ಮೆಲಕು ಹಾಕುತ್ತ ಕಾಲ ಕಳೆಯುತ್ತಿದ್ದೇವೆ. ಆದ್ದರಿಂದ ನಾ ನಿಮಗೆ ಕೇಳಿಕೊಳ್ಳುವುದೇನೆಂದರೆ ದಿನದ ೨೪ ಘಂಟೆಗಳಲ್ಲಿ ಕೇವಲ ೫ ನಿಮಿಷ ನಿಮ್ಮ ವಿಧ್ಯಾರ್ಥಿತನದ ಆ ಸವಿನೆನಪಿನ ದಿನಗಳನ್ನು ಒಂದು ಬಾರಿ ಯೋಚಿಸಿ ನೋಡಿ? ನಿಮ್ಮ ತರಗತಿಯಲ್ಲಿದ್ದ ಸುಮಾರು ೫೦ ಸ್ನೇಹಿತರಲ್ಲಿ ಈಗಲೂ ನಿಮ್ಮ ಹೃದಯದ ಹಾದಿಯಲ್ಲಿ ಅಲೆದಾಡುತ್ತಿರುವವರು ಎಷ್ಟು ಜನರೆಂಬುದು ನಿಮಗೇ ಅರ್ಥವಾಗುತ್ತದೆ.

ಈ ಕವನದ ಭಾವಾರ್ಥ:- ಆ ಭಗವಂತನಾದ ವಿಷ್ಣುದೇವನು ಪಂಚಭೂತ ಸ್ನೇಹಿತರಾದ ಪೃಥ್ವಿ, ಅಪ್ಪು, ತೇಜಸ್ಸು, ವಾಯು ಮತ್ತು ಆಕಾಶವೆಂಬುದನ್ನು ಹೇಗೆ ಸೃಷ್ಟಿಸಿದ್ದಾನೆ ಎಂದರೆ, ಮೊದಲಿಗೆ ಆ ಮುಗಿಲಿಗೂ ಕಡಲಿಗೂ ಎಷ್ಟು ಸ್ನೇಹವಿಹುದೆಂದರೆ ಕಡಲು ಯಾವ ಸಮಯಕ್ಕೂ ಬತ್ತದಿರಲೆಂದು ಸ್ನೇಹವ ಬಯಸಿ ಸದಾಕಾಲ ಮಳೆನೀರು ಸುರಿಸುವುದರ ಮೂಲಕ ತುಂಬಿ ತುಳುಕಿಸುತ್ತಿದ್ದಾನೆ. ಹಾಗೆಯೇ ಸ್ನೇಹ ಬಯಸಿದ "ಹನಿಹನಿಗೂಡಿದರೆ ಹಳ್ಳವೆಂಬಂತೆ" ಅಲೆಯು ತುಳುಕುತ್ತ ಮಧುರವಾದ ನಾಟ್ಯವಾಡಿ ಜುಳುಜುಳು ಎಂಬ ಗಾನಸುಧೆಯ ಹರಿಸಿ ಮನಕ್ಕೆ ಮುದನೀಡುತ್ತಿದ್ದಾನೆ. ಸಮುದ್ರದ ಮುಂಭಾಗದಲ್ಲಿ ನಿಂತು ವೀಕ್ಷಿಸಿದರೆ ಆ ದೂರ ದಿಗಂತ ರೇಖೆಯು ಒಟ್ಟುಗೂಡಿ ಮುಗಿಲು ಮತ್ತು ಕಡಲು ಒಂದೇ ದೇಹದಂತೆ ಭಾಸವಾಗುತ್ತದೆ. ಈ ಒಂದು ಅದ್ಭುತವಾದ ರಮ್ಯರಮಣೀಯ ನೋಟವ ಕಂಡು ಆಶ್ಚರ್ಯ ಚಕಿತನಾದ ಸೂರ್ಯನು ದಿಗಂತ ರೇಖೆಯಾದ ಆ ಹೃದಯಭಾಗದಲ್ಲಿ ಶಶಿಕಿರಣಗಳ ಚೆಲ್ಲುವುದರ ಮೂಲಕ ಜಗತ್ತಿಗೆ ಬೆಳಕನ್ನು ನೀಡಿ ಸ್ನೇಹದ ಮಟ್ಟವನ್ನು ಹೆಚ್ಚಿಸಿಕೊಳ್ಳುತ್ತಿದ್ದಾನೆ. ಇಂತಹ ನೋಟವನ್ನು ಕಂಡು ಬೆರಗಾದ ಬಾನಾಡಿಗಳು ಇವುಗಳ ಮಧ್ಯೆ ಒಂದುಗೂಡಿ ರೆಕ್ಕೆ ಕೆದರಿ ಭಾವ ಬಿರಿದು ಹಾರಾಡಿ ಊರಿಂದ ಊರಿಗೆ ತೆರಳಿ ಸ್ನೇಹದ ಪತಾಕೆಯನ್ನು ನೆಟ್ಟು ಅದರ ಮಹತ್ವರ್ವನ್ನು ಸಾರುತ್ತಿದ್ದೆ. ಚೆಂಡಿನಂತೆ ದುಂಡಾಗಿರುವ ಈ ಭೂಮಿಯಲ್ಲಿ ಆ ಸೂರ್ಯನ ಶಶಿಕಿರಣಗಳನ್ನು ಬಯಸಿ ವಿಶ್ರಾಂತಿದಾತನಾದ ಕತ್ತಲೆ ರಾಜನು ಚಂದ್ರ-ನಕ್ಷತ್ರಗಳನ್ನು ಪರಿಚಯಿಸುವುದರ ಮೂಲಕ ಸ್ನೇಹದ ತನವನ್ನು ತೋರಿಸಿಕೊಳ್ಳುತ್ತಿದ್ದಾನೆ. ಇದರಂತೆ ಬಳ್ಳಿಗಳೂ ಸಹ ತನ್ನ ಸ್ನೇಹಿತನಾದ ಮರದ ಆಶ್ರಯ ಪಡೆದು ತನ್ನ ಭಾರವನ್ನು ಹಂಚಿಕೊಳ್ಳುವ ಸಮಯದಲ್ಲಿ ಪ್ರಕೃತಿಯ ಕಂಪು ಸೊಬಗನು ಕಂಡು ಮೃಗ-ಖಗಗಳು ಒಂದಕ್ಕೊಂದು ಸ್ನೇಹವ ಹಂಚಿ ಮೆರೆದಾಡುತ್ತಿದೆ. ಈ ಒಂದು ಅದ್ಭುತವಾದ ರಮಣೀಯ ವಿಹಂಗಮ ನೋಟವನ್ನು ಕಂಡು ಬೆರಗಾದ ಮನುಷ್ಯಜೀವಿಗೆ ಇದರ ಗುಟ್ಟನ್ನೇ ಅರಿಯಲು ಅಸಾಧ್ಯವಾಗಿದೆ. ಇದರಲ್ಲಿ ನಮಗೆ ಕಾಣುವುದೇನೆನ್ದರೆ ಆ ಮುಗಿಲು ಸ್ನೇಹ ಬಯಸಿ ಕಡಲು, ಕಡಲ ಸ್ನೇಹ ಬಯಸಿ ಅಲೆಗಳ ನಾಟ್ಯ ಗಾನ, ಇದನೂ ಕಂಡು ಬೆರಗಾಗಿ ಆ ಶಶಿಕಿರಣದ ಬೆಳಕು, ಈ ಬೆಳಕಿನ ಸ್ನೇಹವ ಮಾಡಿ ಆ ಬಾನಾಡಿಗಳು ಇದರಂತೆ ಚಂದ್ರ, ನಕ್ಷತ್ರ, ಬಳ್ಳಿ ಮರ ಮತ್ತು ವನ್ಯ ಪ್ರಾಣಿಗಳು ಒಂದಕ್ಕೊಂದು ಸರಪಳಿಯಂತೆ ಸ್ನೇಹವ ಬಯಸಿ ಬದುಕುತ್ತಿರುವ ನಿಷ್ಕಲ್ಮಶ ಜೀವಿಗಳು. ನಮಗೂ ಇಂತಹ ಬದುಕು ಬೇಕಲ್ಲವೇ?

- ಧನ್ಯವಾದಗಳು

Wednesday, February 11, 2009

ಯಾರಿವಳು..?


ಕಂಪ ಸೂಸೋ ಹೊಳಪಿನವಳ

ಜಡೆಯು ನನ್ನ ಕುಕ್ಕಿದೆ

ಹಣೆಯ ಬೊಟ್ಟು ಭವ್ಯವಂತೆ

ಪೂರ್ಣ ಶಿಲೆಯ ಹಾಗಿಹೆ..


ಮುಡಿಯ ಹೂವು ಗಮಲು ಬಿಡುತ

ನನ್ನನಿಂದು ಸೆಳೆದಿದೆ

ಉಬ್ಬ ತುದಿಯ ವಾರೆ ನೋಟ

ಹೃದಯಕಿಂದು ಮುಟ್ಟಿದೆ


ಕಣ್ಣ ಕಪ್ಪು ಅಚ್ಚು ಮೆಚ್ಚು

ಕೊಂಚ ಮನವ ತಣಿಸಿದೆ

ತುಟಿಯ ಮೆಲ್ಲು ನಗೆಯು ನನ್ನ

ಬಾರಿ ಬಾರಿ ಮೀಟಿದೆ


ಹಲ್ಲು ಮುತ್ತು ರತ್ನದವಳ

ಏನೋ ಹೇಳಲಾಗಿದೆ

ನುಡಿವ ದನಿಗೆ ನನ್ನ ಮೌನ

ಕಟ್ಟು ಬಿಚ್ಚಿ ನಡೆಸಿದೆ


ಕತ್ತು ನವಿಲು, ಗಿಳಿಯ ಮೂಗು

ಗಾಳಿ ಮತ್ತನೆರಚಿದೆ

ಕೈಯ ಬಳೆಯ ಗಲುವ ನಾದ

ಹುಡುಕಿ ಅಲೆಯೋ ಹಾಗಿದೆ


ಎದೆಯ ಭಾರ ನನ್ನ ಪ್ರೀತಿ

ಹಾಗೆ ತೂಕ ಮಾಡಿದೆ

ಉದರ ಮುದ್ದೆ, ತುಪ್ಪದಂತೆ

ಅಪ್ಪಿ ಹಿತವ ಲೇಪಿದೆ.


ಟೊಂಕ ಶಿಲೆಯ ಕೆತ್ತಿದಾತ

ಮನಸು ಲೂಟಿ ಹೋಗಿದೆ

ನಡೆವ ಭಂಗಿ, ನಡುವ ರೀತಿ

ನಯನ ಹಿಡಿತ ಮೀರಿದೆ


ಮಡಿಲ ತೊಗಲು ಸ್ವರ್ಗದಂತೆ

ಕಿಚ್ಚು ಹತ್ತಿ ಉರಿದಿದೆ

ಹೆಜ್ಜೆ ಗುರುತು, ಗೆಜ್ಜೆ ಸಪಳ

ಎದೆಯ ಮೇಲೆ ಮೂಡಿದೆ


ಯಾರೇ ನೀನು ಚೆಲುವೆ ನನ್ನ

ಶಾಂತಿ ಭಂಗ ಮಾಡಿದೆ

ಎಲ್ಲಿ ನೀನೋ ಅಲ್ಲೇ ನಾನು

ಅಂತ ಮನವು ಹೇಳಿದೆ

Friday, February 6, 2009

ಚುನಾವಣೆ

೨೦೦೮ ರಂದು ಚುನಾವಣೆ ನಡೆಯುವ ಸಂದರ್ಭದಲ್ಲಿ ಬರೆದದ್ದು.

ನಮ್ಮೆಲ್ಲರ ಮತ ರಾಜ್ಯಕ್ಕೆ ಹಿತ

ನಮ್ಮೆಲ್ಲರ ಮತ ರಾಜ್ಯಕ್ಕೆ ಹಿತ

ಹಿತ ಮತಗಳ ಎಣಿಕೆಯಲ್ಲಿ

ಯಾರೊಡೆಯುವರು ಗೋತಾ?

ಹಣ ಹೊಸತು ಮನ ಹೊಸತು

ಯೋಜನೆಗಳೆಲ್ಲ ಹೊಸ ಹೊಸತು

ಹೊಸ ಕಥೆಗೆ ಹೊಸ ನಾಂದಿ

ಉಚಿತ ಕೊಡುಗೆಯಿದು ವಿಷ ಭ್ರಾ೦ದಿ



ಬರಿ ಹರಟೆ ಮಾತುಗಳು

ಕಿಸೆ ತುಂಬೋ ಕಾತುರಗಳು

ಮತ ನೀಡಿ ಮತ ನೀಡಿ

ನಮ್ಮೊಟ್ಟಿಗೆ ಮೆರೆದಾಡಿ



ಸೀರೆ ಕೊಡುವ, ಟಿ.ವಿ ಕೊಡುವ

ಪುಸ್ತಕದಲಿ ನೋಟನಿಡುವ

ಕಂತೆ ಕಂತೆ ಚೆಲ್ಲಿರಲು

ನಕಲಿಯೋಲೆ ಕೊಡಿಸಿ ಬಿಡುವ


ಬಯಸಿ ಬಂದ ಮಾತುಗಳಿವು

ಏಳಿಗೆಗೆ ದುಡಿಯುವೆವು

ಕೊಟ್ಟು ನೋಡಿ ನಿಮ್ಮ ಮತ

ನಾವ್ ಕೊಡುವೆವು ಜನಕೆ ಹಿತ

ನಮ್ಮ ಚಿಹ್ನೆ ಆನೆ

ಕುದುರೆ, ಒಂಟೆ ಬಾಲ

ತಿಳಿಯದಾಗಿ ಬಂದು ಹೋಯ್ತೆ

ಚುನಾವಣೆಯ ಪರಿಯ ಮೂಲ


ನೋಡುತಲೇ ಬರುತಿಹೆವು

ಹಲವು ವರುಷದಿಂದ ನಾವು

ಕಾಣದಾಗಿ ಬಂದು ಹೋಯ್ತೆ

ದುಡಿದುದಿಲ್ಲ ಕೊಂಚ ನೋವು..

Tuesday, February 3, 2009

ಮುಗಿಯದ ಪ್ರೀತಿ

ದೂರ ಸರಿ ನೀನ್ ಗೆಳತೀ ದೂರ ಸರಿ

ಇರುವ ಜಾಗದಿಂದೊಡನೆ ನೀನ್ ದೂರ ಸರಿ

ಎನ್ ಉಸಿರು ಸೊರಗಿ ಗಾಳಿಗರಸಿ

ಲೀನವಾದರೇನ್, ದಹಿಸಿ ಕರಗದಿರು ಮನ ಸಹಿಸಿ

ಎನ್ ಪ್ರೀತಿಯನ್ ಮರೆಮಾಚಿ, ಎಲೆಮರೆಕಾಯಿಯಂತಿರಿಸಿ

ಮಿನ್ ನೆನಪಿನಲೋಳ್ ಸಾವುಂಡರದಕೆಂದೇ ನಮಿಸಿ

ಪೂಜೆಗೈವೆನ್ ಆತ್ಮಭಾವನೆಯಿಂದೋಳ್ ನಿನಗಿರಿಸಿ

ಹೊಸ ಬಣ್ಣವನ್ ಸ್ವರ್ಗದಲಿ ತಂದು ನವ್ಯತೆಯನೊದಗಿಸಿ

ನೆಪಕಲ್ಲವಿಹುದೆನ್ ಪ್ರೀತಿ, ಹಿಂಟೆ ಗಂಟೆಗಳಿಗೂ ತರಿಸಿ

ಜ್ಞಾನಜ್ಯೋತಿಯನ್ ಇರಿಸಿ ಮನದಭಿಪ್ರಾಯವನ್ ತಿಳಿಸಿ

ಪ್ರೇಮಗುಡಿಯ ಬೆಳೆಸಿ ನಿನ್ ಇಡುವೆನ್ ಉಸಿರಿಸಿ

ಬಲು ಚಂದದೋಳ್ ಕರ್ಮ ಬದುಕಿನ ಮರ್ಮವನ್ ಉರಿಸಿ

- ಸುನಿಲ್ ಕುಮಾರ್.ಎನ್


ಓ ನನ್ನ ಗೆಳತಿ, ಸ್ನೇಹ ಮಾಡಿ ಪ್ರೀತಿ ಮಾಡಬಹುದು ಆದರೆ ಪ್ರೀತಿ ಮಾಡಿ ಸ್ನೇಹಿತರಾಗಬಹುದೇ.? ಇದೊಂದು ಅರ್ಥವಿಲ್ಲದ ಮಾತಾಗುತ್ತದೆ ಅಲ್ಲವೇ?. ಆದ್ದರಿಂದ ನಮ್ಮಿಬ್ಬರ ಸ್ನೇಹದ ಮಧ್ಯೆ ಬಂದ ಈ ಪ್ರೀತಿ ನಮ್ಮ ಭಾಂಧವ್ಯತೆಗೆ ಧಕ್ಕೆ ತರದಿರಲೆಂದು ಕಠಿಣ ನಿರ್ಧಾರವೊಂದನ್ನು ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ಪದೇ ಪದೇ ಸ್ನೇಹದ ಹೆಸರಿನಲ್ಲಿ ನೀನು ಬಂದು ನನ್ನನ್ನು ಮಾತನಾಡಿಸುವುದು, ಪದೇ ಪದೇ ಆ ನಿನ್ನ ನಿಷ್ಕಲ್ಮಶ ನಗು ನನ್ನನ್ನು ಈ ಹಾಳು ಪ್ರೀತಿಗೆ ನೂಕುವುದು, ಇವೆಲ್ಲ ರಂಪ ಬೇಡವೆಂದು ನಿರ್ಧರಿಸಿ ಆ ನಮ್ಮ ಸವಿ ನೆನಪಾದ ಕೆಲಕಾಲದ ಗೆಳೆತನವೇ ಅಮರವಾಗಲೆಂದು ಆಶಿಸಿ ನಿನ್ನಿಂದ ದೂರ ಸರಿಯುತ್ತಾ ನಿನಗಾಗಿ ಈ ಸಾಲುಗಳನ್ನು ಬರೆಯುತ್ತಿದ್ದೇನೆ. ಒಂದು ಬಾರಿ ಖೈದಿ ಸೆರೆಮನೆ ವಾಸವನ್ನು ಮುಗಿಸಿ ಬಂದ ನಂತರ ಅವನು ಎಷ್ಟೇ ಒಳ್ಳೆಯವನಾದರೂ ಹಿಂದೆ ಮಾಡಿದ ಹಳೆಯ ಕಪ್ಪು ಚುಕ್ಕೆ ಬಿಳಿ ಹಾಳೆಯ ಮೇಲೆ ಬಿದ್ದ ಕಲೆಯಂತಾಗಿ ಪದೇ ಪದೇ ನೆನಪಿಸುತ್ತದೆ. ಅದೇ ರೀತಿ ಒಮ್ಮೆ ಪ್ರೀತಿಯೆಂಬ ಮೋಹಕ್ಕೆ ಬಿದ್ದ ನನಗೆ ಮತ್ತೆ ಹಳೆಯ ಗೆಳೆಯನಂತಿರಲು ಆಗುತ್ತಿಲ್ಲ. ಆದುದರಿಂದ ಆದಷ್ಟೂ ಈ ನನ್ನ ಸ್ನೇಹದ ಒಡನಾಟದಿಂದ ದೂರವಿರು. ನೀನು ಹತ್ತಿರ, ಹತ್ತಿರ ಬರುತಿರಲು ಹೊತ್ತು ಉರಿಯುವುದು ಈ ಪ್ರೀತಿಯ ಹಸಿವು. ಬೇಡವೆಂದು ಎಷ್ಟೇ ನಿರ್ಧರಿಸಿದರೂ ಪ್ರೀತಿಯ ಪ್ರಪಾತಕ್ಕೆ ಬಿದ್ದು ಸೊರಗುವೆನು, ನಿನ್ನನ್ನೂ ಸೊರಗಿಸುವೆನು. ನನಗೆ ಈ ಒಂಟಿ ಪ್ರೀತಿಯೇ ಖುಷಿ ಕೊಟ್ಟಿದೆ.ಒಂದು ವೇಳೆ ನಿನ್ನ ನೆನಪಿನಲ್ಲಿ ಸೊರಗಿ ನನ್ನ ಉಸಿರು ಗಾಳಿಯಲಿ ಬೆರೆತು ಲೀನವಾದರೆ ದಯವಿಟ್ಟು ನನಗಾಗಿ ಯಾವುದೇ ರೀತಿಯ ಶೋಕದ ಸ್ಥಿತಿಯಲ್ಲಿ ಮುಳುಗಬೇಡ. ಪ್ರಾಣ ಇರುವಾಗಲೇ ಅರ್ಥಮಾಡಿಕೊಳ್ಳುವುದಕ್ಕೆ, ನೋಡುವುದಕ್ಕೆ ಬರದ ನೀವು, ಧೇಹ ನಿರ್ಜೀವಕ್ಕೆ ತಳೆದ ಮೇಲೆ ನೋಡುವುದು ತಪ್ಪಾಗುತ್ತದೆ. ನನಗೆ ಎಷ್ಟೇ ನೋವಾದರೂ ಪರವಾಗಿಲ್ಲ, ನನ್ನ ಪ್ರೀತಿಯನ್ನು ನನ್ನಲ್ಲೇ ಬಚ್ಚಿಟ್ಟುಕೊಂಡು, ಎಲೆಮರೆಕಾಯಿಯಂತಿರಿಸಿ ನಿನ್ನ ನೆನಪಿನಲ್ಲಿ ಸತ್ತರೆ ಆ ಸಿಹಿಘಳಿಗೆಗೆ ನಮಿಸುತ್ತಾ ಪೂಜೆಮಾಡುತ್ತ ಆತ್ಮ ಭಾವನೆಯಿಂದ, ನಿಷ್ಕಲ್ಮಶದಿಂದ ಲೋಕದಲ್ಲಿ ನಾವ್ಯಾರೂ ನೋಡದ ಬಣ್ಣವೊಂದನ್ನು ಸ್ವರ್ಗಕ್ಕೆ ತಂದು ಚುಕ್ಕೆ ಚಂದ್ರಮಕ್ಕೆ ನಿನ್ನ ಹೆಸರಿನಲ್ಲಿ ಪ್ರೀತಿಯೌತಣವನ್ನು ಬಡಿಸುತ್ತೇನೆ. ಗೆಳತಿ, ಈ ನನ್ನ ಪ್ರೀತಿ ಬರೀ ಕ್ಷಣಿಕವಲ್ಲ, ನೆಪಕೆಂದೇ ಮಾಡಿದ ಪ್ರೀತಿಯಂತೂ ಅಲ್ಲ. ಜನುಮದಲಿ ಜೊತೆಯಾದರೆ ಅದು ನಿನ್ನಲ್ಲೇ ಎಂದು ಇಚ್ಚಿಸಿದ್ದೆ. ಈ ನನ್ನ ಪ್ರೀತಿಯ ಘಾಢತೆಯನ್ನು ಬೆಲೆಯುಳ್ಳದ್ದು ಎಂದು ನಿರ್ಜೀವ ವಸ್ತುಗಳಾದ ಮಣ್ಣ ಕಣ ಕಣ ಹಿಂಟೆಗಳಿಗೂ, ದೇವಾಲಯದ ಘಂಟೆಗಳಿಗೂ ಸಾರುತ್ತಾ ಮಹತ್ವತೆಯ ಜ್ಞಾನ ಜ್ಯೋತಿಯನ್ನು ಇರಿಸುತ್ತ ಪ್ರೇಮ ಗುಡಿಯೊಂದನ್ನು ಕಟ್ಟಿ ಬಸಿದ ಉಸಿರಲಿ ನಿನ್ನ ನೆನಪಿನ ಛಾಯೆಯನ್ನಿಟ್ಟು ಚಂದದಲಿ ಅಲಂಕರಿಸಿ ಇದು ಪ್ರೀತಿಯ ಕರ್ಮವಲ್ಲ, ಇದು ಆ ದೇವರ ಆಶೀರ್ವಾದ ಎಂದು ಲೋಕಕ್ಕೆಲ್ಲ ಹೇಳುವೆ.