Thursday, February 12, 2009

ಸ್ನೇಹದ ದಿನ


ಮುಗಿಲ ಕಡಲ ನಡುವೆ ಇಹುದು

ಮಧುರ ಪ್ರೀತಿ ಸ್ನೇಹವು
ಮುಗಿಲ ಹರಸಿ, ಮಳೆಯ ಸುರಿಸಿ
ಹರುಷ ತಂದ ರೀತಿಯು

ಅಲೆಯ ನಾಟ್ಯ, ಹಾವ ಭಾವ
ಮನಕೆ ತಂಪು ತಣಿಸಲು
ದೂರ ದಿಗಂತ ರೇಖೆ ಮೂಡಿ
ಒಂದುಗೂಡಿ ಹಾಡಲು

ಹೃದಯ ಮನೆಯ ಹೊಸ್ತಿಲಲ್ಲಿ
ಶಶಿಯ ಸೊಬಗು ನಿತ್ಯವು
ಹೂವ ಕಿರಣ ಅರಳಿ ಜಗಕೆ
ಬೆಳಕನಿಟ್ಟ ಸತ್ಯವು

ಇಳೆಯ ತನಕೆ ರಂಜಿಸುತಲಿ
ಸಾರುತಿಹವು ಹಕ್ಕಿಯು
ರೆಕ್ಕೆ ಕೆದರಿ ಭಾವ ಬಿರಿದು
ಚುಂಬಿಸುತಲಿ ಮೇಘವು

ಇರುಳಿನಲ್ಲಿ ಮೋಹಗೊಂಡು
ಚಂದ್ರ ಉದಯವಾಗಲು
ಒಂಟಿತನವ ಸ್ನೇಹ ಬಯಸಿ
ತಾರೆ ಗುಂಪು ಮಿನುಗಲು

ಬಳ್ಳಿಯಗಲ ಉದ್ದ ಹಬ್ಬಿ
ಮರದ ನೆರವು ಪಡೆಯಲು
ಬನದ ಕಂಪು ಇಚ್ಚಿಸುತಲಿ
ವನ್ಯಪ್ರಾಣಿ ಸೇರಲು

ರಮ್ಯವಿಹಂಗಮ ನೋಟವಿಹುದು
ಜಗದ ಗುಟ್ಟು ಅರಿಯಲು
ಒಂದಕೊಂದ ಬೆಸೆದ ಸ್ನೇಹ
ಬೆಲೆಯ ಕಟ್ಟಲಾಗದು

ಆತ್ಮೀಯ ಸ್ನೇಹಿತರೇ,ಆಗಸ್ಟ್ ೩, ೨೦೦೮ ವಿಶ್ವ ಗೆಳೆತನದ ಸಂಭೋಗದ ಅಪ್ಪುಗೆಯ ದಿನ. ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು ಮತ್ತಿನ್ನೆಲ್ಲೋ ಸೇರಿ ಬೆರೆತು ಒಬ್ಬರೊನ್ನೊಬ್ಬರನ್ನು ಅರಿತುಕೊಂಡು ಅಪ್ಪುಗೆಯ ಮೂಲಕ ಆಚರಿಸುವ ದಿನ. ಈ ಸುಮಧುರ ಕ್ಷಣಗಳಲ್ಲಿ ನಾನೊಬ್ಬ ಭಾವುಕ ಜೀವಿಯಾಗಿ ಎಲ್ಲರಿಗೂ ಸ್ನೇಹವೆಂಬ ಸಂಕೋಲೆಯಿಂದ ಬಂಧಿಸುತ್ತ ನನ್ನ ಯೋಚನಾಶಕ್ತಿಯ ಮೇರೆಗೆ ತಕ್ಕ ಮಟ್ಟಿಗೆ ಈ ಕವನದ ಮೂಲಕ ನಿಮ್ಮ ಹೃದಯದ ಗೂಡನ್ನು ಸೇರುತ್ತಿದ್ದೇನೆ.

ಬುದ್ಧಿಜೀವಿಗಳಾದ ನಾವು ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು ಗೆಳೆತನವೆಂಬ ಮಹಲ್ಲನ್ನು ಕಟ್ಟಿ ಮತ್ತಿನ್ನೆಲ್ಲೋ ತೆರಳಿ ಕೊನೆಗೊಂದು ದಿನ ಸದಾಕಾಲ ಮಂಜು ಮುಸುಕಿದ ಗೂಡಿನಂತೆ ದಿನಕಳೆದಂತೆ ಒಬ್ಬರನ್ನೊಬ್ಬರು ಮರೆತು ಬಿಡುತ್ತೇವೆ. ಈ ಜಗತ್ತಿನ ಅಂದರೆ ವರ್ತಮಾನ ಯುಗದ ಈ ಕ್ಷಣಗಳಲ್ಲಿ ಬುದ್ಧಿಜೀವಿಗಳಾದ ಮನುಷ್ಯನು ತನ್ನ ಉದ್ಧಾರತೆಗೆ ತನ್ನನ್ನು ತಾನು ತೊಡಗಿಸಿಕೊಳ್ಳುವಾತುರದಲ್ಲಿ ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ತು ಮತ್ಸರಗಳನ್ನು ಉಪಯೋಗಿಸಿಕೊಂಡು ಗೆಳೆತನವನ್ನು ಮರೆತು ಮುನ್ನುಗ್ಗುತ್ತಿದ್ದಾನೆ. ಪುಂಡಾಟಿಕೆಯ ಪುಂಡರಾಗಿದ್ದ ಆ ದಿನದ ಶಾಲಾ-ಕಾಲೇಜಿನ ವಯಸ್ಸಿನಲ್ಲಿ ನಾವಾಡಿದ ಆಟ-ಪಾಠಗಳು ಮಗದೊಮ್ಮೆ ಬರಬೇಕೆಂಬುದು ಸೋಜಿಗವಷ್ಟೇ ಆದರೂ ಹಳೆ ನೆನಪುಗಳನ್ನು ಮೆಲಕು ಹಾಕುತ್ತ ಕಾಲ ಕಳೆಯುತ್ತಿದ್ದೇವೆ. ಆದ್ದರಿಂದ ನಾ ನಿಮಗೆ ಕೇಳಿಕೊಳ್ಳುವುದೇನೆಂದರೆ ದಿನದ ೨೪ ಘಂಟೆಗಳಲ್ಲಿ ಕೇವಲ ೫ ನಿಮಿಷ ನಿಮ್ಮ ವಿಧ್ಯಾರ್ಥಿತನದ ಆ ಸವಿನೆನಪಿನ ದಿನಗಳನ್ನು ಒಂದು ಬಾರಿ ಯೋಚಿಸಿ ನೋಡಿ? ನಿಮ್ಮ ತರಗತಿಯಲ್ಲಿದ್ದ ಸುಮಾರು ೫೦ ಸ್ನೇಹಿತರಲ್ಲಿ ಈಗಲೂ ನಿಮ್ಮ ಹೃದಯದ ಹಾದಿಯಲ್ಲಿ ಅಲೆದಾಡುತ್ತಿರುವವರು ಎಷ್ಟು ಜನರೆಂಬುದು ನಿಮಗೇ ಅರ್ಥವಾಗುತ್ತದೆ.

ಈ ಕವನದ ಭಾವಾರ್ಥ:- ಆ ಭಗವಂತನಾದ ವಿಷ್ಣುದೇವನು ಪಂಚಭೂತ ಸ್ನೇಹಿತರಾದ ಪೃಥ್ವಿ, ಅಪ್ಪು, ತೇಜಸ್ಸು, ವಾಯು ಮತ್ತು ಆಕಾಶವೆಂಬುದನ್ನು ಹೇಗೆ ಸೃಷ್ಟಿಸಿದ್ದಾನೆ ಎಂದರೆ, ಮೊದಲಿಗೆ ಆ ಮುಗಿಲಿಗೂ ಕಡಲಿಗೂ ಎಷ್ಟು ಸ್ನೇಹವಿಹುದೆಂದರೆ ಕಡಲು ಯಾವ ಸಮಯಕ್ಕೂ ಬತ್ತದಿರಲೆಂದು ಸ್ನೇಹವ ಬಯಸಿ ಸದಾಕಾಲ ಮಳೆನೀರು ಸುರಿಸುವುದರ ಮೂಲಕ ತುಂಬಿ ತುಳುಕಿಸುತ್ತಿದ್ದಾನೆ. ಹಾಗೆಯೇ ಸ್ನೇಹ ಬಯಸಿದ "ಹನಿಹನಿಗೂಡಿದರೆ ಹಳ್ಳವೆಂಬಂತೆ" ಅಲೆಯು ತುಳುಕುತ್ತ ಮಧುರವಾದ ನಾಟ್ಯವಾಡಿ ಜುಳುಜುಳು ಎಂಬ ಗಾನಸುಧೆಯ ಹರಿಸಿ ಮನಕ್ಕೆ ಮುದನೀಡುತ್ತಿದ್ದಾನೆ. ಸಮುದ್ರದ ಮುಂಭಾಗದಲ್ಲಿ ನಿಂತು ವೀಕ್ಷಿಸಿದರೆ ಆ ದೂರ ದಿಗಂತ ರೇಖೆಯು ಒಟ್ಟುಗೂಡಿ ಮುಗಿಲು ಮತ್ತು ಕಡಲು ಒಂದೇ ದೇಹದಂತೆ ಭಾಸವಾಗುತ್ತದೆ. ಈ ಒಂದು ಅದ್ಭುತವಾದ ರಮ್ಯರಮಣೀಯ ನೋಟವ ಕಂಡು ಆಶ್ಚರ್ಯ ಚಕಿತನಾದ ಸೂರ್ಯನು ದಿಗಂತ ರೇಖೆಯಾದ ಆ ಹೃದಯಭಾಗದಲ್ಲಿ ಶಶಿಕಿರಣಗಳ ಚೆಲ್ಲುವುದರ ಮೂಲಕ ಜಗತ್ತಿಗೆ ಬೆಳಕನ್ನು ನೀಡಿ ಸ್ನೇಹದ ಮಟ್ಟವನ್ನು ಹೆಚ್ಚಿಸಿಕೊಳ್ಳುತ್ತಿದ್ದಾನೆ. ಇಂತಹ ನೋಟವನ್ನು ಕಂಡು ಬೆರಗಾದ ಬಾನಾಡಿಗಳು ಇವುಗಳ ಮಧ್ಯೆ ಒಂದುಗೂಡಿ ರೆಕ್ಕೆ ಕೆದರಿ ಭಾವ ಬಿರಿದು ಹಾರಾಡಿ ಊರಿಂದ ಊರಿಗೆ ತೆರಳಿ ಸ್ನೇಹದ ಪತಾಕೆಯನ್ನು ನೆಟ್ಟು ಅದರ ಮಹತ್ವರ್ವನ್ನು ಸಾರುತ್ತಿದ್ದೆ. ಚೆಂಡಿನಂತೆ ದುಂಡಾಗಿರುವ ಈ ಭೂಮಿಯಲ್ಲಿ ಆ ಸೂರ್ಯನ ಶಶಿಕಿರಣಗಳನ್ನು ಬಯಸಿ ವಿಶ್ರಾಂತಿದಾತನಾದ ಕತ್ತಲೆ ರಾಜನು ಚಂದ್ರ-ನಕ್ಷತ್ರಗಳನ್ನು ಪರಿಚಯಿಸುವುದರ ಮೂಲಕ ಸ್ನೇಹದ ತನವನ್ನು ತೋರಿಸಿಕೊಳ್ಳುತ್ತಿದ್ದಾನೆ. ಇದರಂತೆ ಬಳ್ಳಿಗಳೂ ಸಹ ತನ್ನ ಸ್ನೇಹಿತನಾದ ಮರದ ಆಶ್ರಯ ಪಡೆದು ತನ್ನ ಭಾರವನ್ನು ಹಂಚಿಕೊಳ್ಳುವ ಸಮಯದಲ್ಲಿ ಪ್ರಕೃತಿಯ ಕಂಪು ಸೊಬಗನು ಕಂಡು ಮೃಗ-ಖಗಗಳು ಒಂದಕ್ಕೊಂದು ಸ್ನೇಹವ ಹಂಚಿ ಮೆರೆದಾಡುತ್ತಿದೆ. ಈ ಒಂದು ಅದ್ಭುತವಾದ ರಮಣೀಯ ವಿಹಂಗಮ ನೋಟವನ್ನು ಕಂಡು ಬೆರಗಾದ ಮನುಷ್ಯಜೀವಿಗೆ ಇದರ ಗುಟ್ಟನ್ನೇ ಅರಿಯಲು ಅಸಾಧ್ಯವಾಗಿದೆ. ಇದರಲ್ಲಿ ನಮಗೆ ಕಾಣುವುದೇನೆನ್ದರೆ ಆ ಮುಗಿಲು ಸ್ನೇಹ ಬಯಸಿ ಕಡಲು, ಕಡಲ ಸ್ನೇಹ ಬಯಸಿ ಅಲೆಗಳ ನಾಟ್ಯ ಗಾನ, ಇದನೂ ಕಂಡು ಬೆರಗಾಗಿ ಆ ಶಶಿಕಿರಣದ ಬೆಳಕು, ಈ ಬೆಳಕಿನ ಸ್ನೇಹವ ಮಾಡಿ ಆ ಬಾನಾಡಿಗಳು ಇದರಂತೆ ಚಂದ್ರ, ನಕ್ಷತ್ರ, ಬಳ್ಳಿ ಮರ ಮತ್ತು ವನ್ಯ ಪ್ರಾಣಿಗಳು ಒಂದಕ್ಕೊಂದು ಸರಪಳಿಯಂತೆ ಸ್ನೇಹವ ಬಯಸಿ ಬದುಕುತ್ತಿರುವ ನಿಷ್ಕಲ್ಮಶ ಜೀವಿಗಳು. ನಮಗೂ ಇಂತಹ ಬದುಕು ಬೇಕಲ್ಲವೇ?

- ಧನ್ಯವಾದಗಳು

No comments:

Post a Comment