Monday, March 23, 2009

ಒಡೆದ ಮನಸು

ಹರಿದ ರವಿಕೆಯನುಟ್ಟು ಮೈಯೊಡ್ದಿ ನಗುತಿಹಳು
ಬಿಸಿಲಿನೊಳು ಚಲಿಸುತ್ತ ದನಕರುಗಳ ಬಳಗದಲಿ
ಕಲ್ಲಾಗಿ ಕಲ್ಲಿನೊಳು, ಮುಳ್ಳಾಗಿ ಮುಳ್ಳಿನೊಳು
ಕಟ್ಟಿತ್ತು ಹೆಪ್ಪುಂಡು ಪಾದಗಳು ಬಲವಾಗಿ

ಹಸಿದ ಹೊಟ್ಟೆಗೆ ಬೇಕು ಮೇವುಂಡ ಹಾಲಂತೆ
ಎರಡಾಣೆಯ ಗಳಿಕೆಯೊಳು ಒಪ್ಪತ್ತಿನ ಆಹಾರ
ನಗ್ನತೆಯ ಸತ್ಯಕ್ಕೆ ಬೆರಗಾದ ಬದುಕಂತೆ
ಮುಗ್ಧತೆಯು ಸಾಗುತಿದೆ ಆ ಬಡಕಲು ಶಾರೀರ

ಬರದಿರಲು ಮುಮ್ಮೋಡ ನೆನಸಿದಾ ಸಮಯದೊಳು
ಇಂಗುತ್ತ ಕ೦ಗಳಲಿ ಮುಚ್ಚಿಟ್ಟ ಕನಸುಗಳು
ಬಿರುಸಿನಲಿ ಹಬ್ಬಗಳು ಹೊಸಿಲಲ್ಲಿ ನಿಂತಿರಲು
ಇನ್ನೆಲ್ಲಿ ಹೊಸ ಉಡುಪು? ಶುಚಿ ಮಾಡಿ ಹಾಕಿರಲು..

ಮುಖದಲ್ಲಿ ಸಿಂಧೂರ, ಮೂಗುತಿಯ ಗತಿಯಿಲ್ಲ
ಆಸೆಗಳ ಬುತ್ತಿಯಲಿ ನಿಟ್ಟುಸಿರ ಸ್ಥಳವಿಲ್ಲ
ಆ ಒಡೆದ ತುಟಿಯೊಳಗೆ ಹುಡುಕಿದರೂ ಸಿಹಿಯಿಲ್ಲ
ಉಕ್ಕೇರದು ಮಂದಾರ, ನೆಲೆಯಿಲ್ಲ ಕಹಿಯೆಲ್ಲ..

No comments:

Post a Comment